ಮಳೆಗಾಲದಲ್ಲಿ ಸಂಪರ್ಕ ಕಡಿತ ಭೀತಿ: ಸಂಪರ್ಕ ಸೇತುವೆಗಳು ಅಸಮರ್ಪಕ : ರಸ್ತೆಗಳು ಅಪೂರ್ಣ

bridge
ಮಿತ್ತೊಡಿ ಅಪೂರ್ಣ ಸೇತುವೆ.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕುತ್ತಿರುವ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪರ್ಕ ಸೇತುವೆ ವ್ಯವಸ್ಥೆ ಇನ್ನೂ ಅಸಮರ್ಪಕ ಸ್ಥಿತಿಯಲ್ಲಿದೆ. ಸದ್ಯ ಮಳೆ ಆರಂಭಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಬಿರುಸು ಪಡೆದುಕೊಳ್ಳಲಿದೆ. ಮನೆ ಮಂದಿ ಮಳೆಗಾಲಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ, ಆಡಳಿತ ವ್ಯವಸ್ಥೆ ಮಾತ್ರ ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಿಲ್ಲವೇ ಎಂಬ ಪ್ರಶ್ನೆಗಳು ಗ್ರಾಮೀಣ ಭಾಗದ ಜನರಿಂದ ಕೇಳಿಬಂದಿದೆ.

ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿ ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಭೂ ಕುಸಿತ, ಪ್ರವಾಹಕ್ಕೆ ನಲುಗುತ್ತಿದೆ. ನೆರೆಹಾನಿ ಸಂದರ್ಭದಲ್ಲಿ ಬಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭರವಸೆ ನೀಡಿದ್ದರೂ ಅನುಷ್ಠಾನ ಆಗಿಲ್ಲ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಸಮಸ್ಯೆಗಳೂ ಹಾಗೆಯೇ ಉಳಿದುಕೊಂಡಿವೆ. ಪ್ರಮುಖವಾಗಿ ಇಲ್ಲಿ ಸಂಪರ್ಕ ಸೇತುವೆ, ರಸ್ತೆಗಳೇ ಇನ್ನೂ ಅಸಮರ್ಪಕವಾಗಿ ಉಳಿದುಕೊಂಡಿವೆ. ಶೀಘ್ರವೇ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಮಿತ್ತೋಡಿ ಬ್ರಿಜ್ ಅಪೂರ್ಣ

ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿ ಎಂಬಲ್ಲಿ 5 ವರ್ಷಗಳ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿತ್ತು. 2 ವರ್ಷದ ಹಿಂದೆ ಮಳೆಗೆ ಸೇತುವೆ ಒಂದು ಭಾಗದ ಸಂಪರ್ಕ ಕಡಿದುಕೊಂಡಿತ್ತು. ಬಳಿಕ ಮಳೆಹಾನಿ ಯೋಜನೆಯಡಿ ಅನುದಾನದಲ್ಲಿ ಸೇತುವೆಯ ಅಂಚಿನಲ್ಲಿನ ಮಣ್ಣು ತೆಗೆದು ಪಿಲ್ಲರ್‌ಗಾಗಿ ಸಿದ್ಧತೆ ನಡೆಯಿತು. ಆದರೆ ಅದಿನ್ನೂ ಪೂರ್ಣಗೊಂಡಿಲ್ಲ. ಇದರ ಪರಿಣಾಮ ಅಲ್ಲಿ ಇಂದಿಗೂ ವ್ಯವಸ್ಥಿತ ಸಂಪರ್ಕ ಸಾಧ್ಯವಾಗಿಲ್ಲ. ಪಿಲ್ಲರ್‌ಗೆ ಫೌಂಡೇಷನ್ ಮಾಡಲಾಯಿತು. ಇದರಿಂದ ಅಡಕೆ ಮರದ ಪಾಲ ಹಾಕಿ ಹೋಗಬಹುದಾದ ಒಂದು ಅವಕಾಶವನ್ನು ಇಲ್ಲದಂತೆ ಮಾಡಲಾಗಿದೆ. ಸದ್ಯ ಸೇತುವೆ ಒಂದು ಬದಿ ಕಾಮಗಾರಿ ಆರಂಭಗೊಂಡಿದೆ.

ಬೆಂಡೋಡಿ ಭೀತಿ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಾಣಗೊಂಡಿದೆ.ಆದರೆ ಕಳೆದ ವರ್ಷದ ನೆರೆಗೆ ಸೇತುವೆಯ ಬಂದು ಬದಿಯ ರಸ್ತೆ ಕೊಚ್ಚಿ ಹೋಗಿತ್ತು. ಬಳಿಕ ಅಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾ ಬರಲಾಗುತ್ತಿದೆ. ಪರಿಣಾಮ ಪ್ರತಿ ಮಳೆಗಾಲದಲ್ಲೂ ಸಂಪರ್ಕ ಕಡಿತ ಸಂಭವಿಸುತ್ತ ಜನರು ಸಂಕಷ್ಟ ಪಡುತ್ತಿದ್ದಾರೆ. ಇಲ್ಲಿ ಶಾಶ್ವತ ಪರಿಹಾರ ಕಾಮಗಾರಿ ಶೀಘ್ರ ನಡೆದರೆ ಉತ್ತಮ ಎನ್ನುವುದು ಸ್ಥಳೀಯರ ಆಗ್ರಹ.

ಕಲ್ಮಕಾರು ಸೇತುವೆ ಅಪಾಯದಲ್ಲಿ

ಕಲ್ಮಕಾರು ಪೇಟೆಯಿಂದ ಗುಳಿಕಾನ ಭಾಗಕ್ಕೆ ಸಂಪರ್ಕಿಸುವ ಸೇತುವೆ ಎರಡು ವರ್ಷದ ಹಿಂದಿನ ಮಳೆಗಾಲಕ್ಕೆ ಒಂದು ಭಾಗದ ಪಿಲ್ಲರ್ ಸಮೇತ ನೀರುಪಾಲಾಗಿ ಸಂಪರ್ಕ ಕಡಿತವಾಗಿತ್ತು. ಅಲ್ಲಿ ಮೋರಿ, ಮಣ್ಣು ಹಾಕಿ ತಾತ್ಕಾಲಿಕ ವ್ಯವಸ್ಥೆ ಅಂದು ಮಾಡಲಾಗಿತ್ತು. ಇದೀಗ ಮಳೆಗಾಲದಲ್ಲಿ ಜನ ಆತಂಕ ಪಡುತ್ತಲೇ ಇದ್ದಾರೆ. ಇನ್ನು ಹರಿಹರ ಪಲ್ಲತ್ತಡ್ಕ ಹಾಗೂ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ ಪ್ರವಾಹದಲ್ಲಿ ಉಂಟಾದ ಹಾನಿಗೆ ಇಂದಿಗೂ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಲವೆಡೆ ರಸ್ತೆ ಬದಿ ತಡೆಗೋಡೆ, ಸಂಪರ್ಕ ರಸ್ತೆ, ಸಂಪರ್ಕ ಸೇತುವೆ ಅಭಿವೃದ್ಧಿ ಆಗಬೇಕಿದೆ. ಕೆಲವೆಡೆ ಸಂಪರ್ಕ ಸೇತುವೆ ಕಾಮಗಾರಿಗಳು ಅರ್ಧದಲ್ಲಿವೆ. ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದವರು ಕೂಡಲೇ ಸ್ಪಂದಿಸಲಿ ಎಂದು ಊರವರು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ಸಂಪರ್ಕ ಕಡಿತ ಭೀತಿ, ಸಂಪರ್ಕ ಸಾಧ್ಯವಾಗದೆ ಇರುವ ಪ್ರದೇಶದಲ್ಲಿ ಅಲ್ಲಿನ ಜನತೆಗೆ ಯಾವುದೇ ಸಮಸ್ಯೆ ಆಗದಂತೆ ಬದಲಿ ವ್ಯವಸ್ತೆ ಕಲ್ಪಿಸಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಅವರು ಪೂರಕ ಕ್ರಮಕೈಗೊಳ್ಳಲಿದ್ದಾರೆ - ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net