ಚುನಾವಣಾ ಫಲಿತಾಂಶ ಮೇಲಿನ ಮಾಧ್ಯಮ ಚರ್ಚೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್​ ನಿರ್ಧಾರ!

Youth Congress 9-09
Published on

ನವದೆಹಲಿ: ಪಂಚರಾಜ್ಯ ಚುನಾವಣೆಯ ಮತಎಣಿಕೆಯ ನಡುವೆಯೇ ಕಾಂಗ್ರೆಸ್ ಶನಿವಾರ​ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಫಲಿತಾಂಶ ಮೇಲಿನ ಮಾಧ್ಯಮ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲ, ದೇಶದಲ್ಲಿ ಮಾಹಾಮರಿ ಕರೊನಾ ವೈರಸ್​ ಎರಡನೇ ಅಲೆಯು ತೀವ್ರವಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವು ಚುನಾವಣಾ ಫಲಿತಾಂಶ ಕುರಿತಾದ ಮಾಧ್ಯಮ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮ ಚರ್ಚೆಯಿಂದ ನಮ್ಮ ವಕ್ತಾರರನ್ನು ನಾವು ಹಿಂಪಡೆದುಕೊಂಡಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದಾರೆ. ಅಲ್ಲದೆ, ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್‌ಗೆ ನಾವು ಲಭ್ಯವಿರುತ್ತೇವೆ. ನಾವು ಗೆಲ್ಲಬಹುದು ಅಥವಾ ಕಳೆದುಕೊಳ್ಳಬಹುದು, ಆದರೆ ಜನರು ಆಮ್ಲಜನಕ, ಹಾಸಿಗೆಗಳು, ಔಷಧಿಗಳು ಮತ್ತು ವೆಂಟಿಲೇಟರ್‌ಗಳನ್ನು ಹುಡುಕುತ್ತಿರುವ ಸಮಯದಲ್ಲಿ ನಮ್ಮ ಕರ್ತವ್ಯವು ಅವರೊಂದಿಗೆ ನಿಲ್ಲುವುದಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ಪಂಚರಾಜ್ಯಗಳ ಮತಎಣಿಕೆ ಕಾರ್ಯ ಮುಂದುವರಿದಿದೆ.

ಎಕ್ಸಿಟ್​ ಪೋಲ್​ ಪ್ರಕಾರ ಈ ಚುನಾವಣೆಗಳಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾವ ದೊರೆಯುವುದಿಲ್ಲ ಎಂದು ಊಹಿಸಿವೆ. ತಮಿಳುನಾಡಿನಲ್ಲಿ ಮಿತ್ರಪಕ್ಷ ಡಿಎಂಕೆ ಅಧಿಕಾರಕ್ಕೆ ಬರಬಹುದು ಎಂದು ನಿರೀಕ್ಷೆ ಹೊರತುಪಡಿಸಿ, ಕಾಂಗ್ರೆಸ್ ಇತರ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net