ಸಂಭಾವ್ಯ ಎಂಪಿ ಅಭ್ಯರ್ಥಿಗಳ ಆಯ್ಕೆಗೆ ಡೇಟ್ ಫಿಕ್ಸ್; ನಾಳಿದ್ದು ಕಾಂಗ್ರೆಸ್​ ಮುಖಂಡರ ಮಹತ್ವದ ಸಭೆ

telangana congress
Published on

ತುಮಕೂರು: ಲೋಕಸಭಾ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆಪಿಸಿಸಿ ವೀಕ್ಷಕ, ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸಭೆಗೆ ಡೇಕ್ ಫಿಕ್ಸ್ ಆಗಿದೆ. ಬೆಳಗಾವಿಯಲ್ಲಿ ಡಿ.13ರಂದು ಅಧಿವೇಶನ ಸಂದರ್ಭದಲ್ಲಿ ಈ ಭಾಗದ ಶಾಸಕರು, ಮುಖಂಡರೊಂದಿಗೆ ಸಭೆ ನಡೆಯಲಿದೆ.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸಂಭವನೀ ಯರ ಆಯ್ಕೆಗೆ ಸಭೆ ನಡೆದಿದ್ದು, ಪಟ್ಟಿ ಸಿದ್ಧವಾಗಿದ್ದರೂ ತುಮಕೂರು ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿಂದ ಸಭೆಯನ್ನು ಮುಂದೂಡುತ್ತಲೇ ಬಂದಿದ್ದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುಂಚಿಟಿಗ ಸಮುದಾಯದ ಮುರಳೀಧರ ಹಾಲಪ್ಪ ಮಾತ್ರ ಟಿಕೆಟ್ ಆಕಾಂಕ್ಷಿಗಳು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ವದಂತಿ ತಣ್ಣಗಾಗಿದೆ.

ಎಸ್​ಪಿಎಂ ವಾಪಸ್ ಕರೆತರಲು ಸಿಎಂ ಒಲವು?: ಜೆಡಿಎಸ್ ಜತೆ ಮೈತ್ರಿ ಹಿನ್ನೆಲೆಯಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್.ಪಿ. ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸಿದ್ದ ಕಾಂಗ್ರೆಸ್ ಆ ತಪ್ಪನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. 2019ರಲ್ಲಿ ಟಿಕೆಟ್ ಕೈತಪ್ಪಿದ ಸಂದರ್ಭದಲ್ಲಿ ಹೈಕಮಾಂಡ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಕಳೆದ ವರ್ಷವಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಎಸ್​ಪಿಎಂಗೆ ಬಿಜೆಪಿ ಕೂಡ ಕೈಕೊಟಿತ್ತು. ಹಾಗಾಗಿ, ಅವರನ್ನೇ ಕಾಂಗ್ರೆಸ್​ಗೆ ವಾಪಸ್ ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಬೇಕು ಎಂಬ ಒಂದು ವಾದ ಸಿಎಂ ಆಪ್ತ ವಲಯದಲ್ಲಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅತ್ಯಂತ ಆಪ್ತರಾಗಿರುವ ಸಚಿವರಾದ ಡಾ.ಜಿ.ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಕೂಡ ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸುವ ನಿಟ್ಟಿನಲ್ಲಿ ಎಸ್​ಪಿಎಂ ಪರವಾಗಿಯೇ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಮಾಧುಸ್ವಾಮಿಗೆ ಬಿಎಸ್​ವೈ ಕರೆ?: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ರಾಜಕೀಯ ಪಟ್ಟುಗಳನ್ನು ಪ್ರದರ್ಶಿಸುತ್ತಿರುವ ನಡುವೆಯೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಎಸ್.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್​ಗೆ ವಾಪಸಾಗಿ ಕಣಕ್ಕಿಳಿದರೆ, ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯಾಗಿ ನೊಳಂಬ ಲಿಂಗಾಯತ ಸಮುದಾಯದ ಜೆ.ಸಿ.ಮಾಧುಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆ ಬಿಎಸ್​ವೈ ಅವರದ್ದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಪಕ್ಷದವರೇ ಕಾರಣ ಎಂದು ದೂರಿರುವ ವಿ.ಸೋಮಣ್ಣ ಅವರಿಗೆ ತುಮಕೂರಿನಲ್ಲಿ ಅವಕಾಶ ನೀಡದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲಾ್ಯನ್ ಬಿಜೆಪಿಯಲ್ಲಿ ರೂಪಿತವಾಗುತ್ತಿದೆ ಎಂದು ಗೊತ್ತಾಗಿದೆ.

ರಾಹುಲ್​ಗಾಂಧಿ ಅವರನ್ನು ಕ್ಷೇತ್ರಕ್ಕೆ ಆಹ್ವಾನಿಸುತ್ತೇವೆ ಎಂದು ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು ಹೇಳಿದ್ದಾರೆ. ಆದರೆ, ಅವರು ಸ್ಪರ್ಧೆಗೆ ಒಪ್ಪಿ ಬಂದರೆ ಎಲ್ಲರಿಗೂ ಖುಷಿ, ರಾಹುಲ್ ಅವರಿಗೆ ಬಲ ನೀಡಲು ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಗುರಿ

| ಎಸ್.ಆರ್. ಶ್ರೀನಿವಾಸ್ ಹಿರಿಯ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net