ನ್ಯಾಯಾಂಗ ತನಿಖೆಗೆ ನಕಾರ: ಕರೊನಾ ಉಪಕರಣ ಖರೀದಿ ಪ್ರಕರಣ

Cong vs BJP
Published on

ಬೆಂಗಳೂರು: ಕರೊನಾ ಉಪಕರಣ ಹಾಗೂ ಪರಿಕರ ಖರೀದಿ ಅವ್ಯವಹಾರ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ಜಪ್ಪಯ್ಯ ಎನ್ನದ ಕಾರಣ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

ನಿಯಮ 69ರಡಿ ಕರೊನಾ ನಿಯಂತ್ರಣದಲ್ಲಿ ಸರ್ಕಾರದ ವಿಫಲತೆ, ಪರಿಕರ ಖರೀದಿ ಅವ್ಯವಹಾರ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, ಹೈಕೋರ್ಟ್​ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದನ್ನು ಸಾರಾಸಗಟು ಅಲ್ಲಗಳೆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಏಳು ತಿಂಗಳಲ್ಲಿ 15 ಇಲಾಖೆಗಳಿಂದ ಒಟ್ಟು 4,200 ಕೋಟಿ ರೂ. ವೆಚ್ಚ ಮಾಡಲಾಗಿದೆ. ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ. ಕಾಂಗ್ರೆಸ್ ಆಪಾದನೆ ಆಧಾರ ರಹಿತ, ಸತ್ಯಕ್ಕೆ ದೂರ ಎಂದು ಪದೇಪದೆ ಹೇಳಿದರಲ್ಲದೆ, ನ್ಯಾಯಾಂಗ ತನಿಖೆ ಅಗತ್ಯವಿಲ್ಲ ಎಂದು ಎರಡೂವರೆ ತಾಸಿನ ಸುದೀರ್ಘ ಉತ್ತರ ನೀಡಿ ಸಮರ್ಥಿಸಿಕೊಂಡರು. ಬೇರೆ ರಾಜ್ಯಗಳಿಗಿಂತ ನಮ್ಮ ಖರೀದಿ ದರ ಕಡಿಮೆ ಇದೆ ಎಂದು ಅನೇಕ ಉದಾಹರಣೆಗಳನ್ನು ನೀಡಿದರು.

ಐಇಸಿ ಕರೊನಾ ಕೇರ್ ವಾರ್!: ನೆಲಮಂಗಲ ಸಮೀಪದ ಐಇಸಿ ಕೇಂದ್ರದಲ್ಲಿ ಕರೊನಾ ಕೇರ್ ಸೆಂಟರ್​ಗೆ ಸಂಬಂಧಿಸಿದಂತೆ ಹಾಸಿಗೆ ಒಂದಕ್ಕೆ 800 ರೂ. ಬಾಡಿಗೆ ನಿಗದಿ ಮಾಡಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ನಾವೆಲ್ಲ ಧ್ವನಿ ಎತ್ತಿದ ಮೇಲೆ ಸಿಎಂ ಬಾಡಿಗೆ ಪಡೆಯುವ ಪ್ರಕ್ರಿಯೆಗೆ ತಡೆವೊಡ್ಡಿದರು. ಇದರಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರಕ್ಕೆ ಬ್ರೇಕ್ ಬಿತ್ತು ಎಂದು ಪ್ರತಿಪಕ್ಷಗಳ ಸದಸ್ಯರು ಸಭೆಯ ಗಮನ ಸೆಳೆದರು. ಆಗ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಕಂದಾಯ ಸಚಿವ ಆರ್.ಅಶೋಕ್, ನಾವಿನ್ನೂ ಟೆಂಡರೇ ಕರೆದಿರಲಿಲ್ಲ. ದುಡ್ಡು ಕೊಟ್ಟಿರಲಿಲ್ಲ. ಕೊಟ್ಟದ್ದು 11.90 ಕೋಟಿ ರೂ. ಮಾತ್ರ. ಆದರೆ, 200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ದೊಡ್ಡ ಕೂಗು ಕೇಳಿಬಂತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಪಕ್ಷ ಸದಸ್ಯರು, ಮಾಧ್ಯಮ ಹಾಗೂ ನಾವು ಆ ವಿಷಯದ ಬಗ್ಗೆ ಧ್ವನಿ ಎತ್ತದೆ ಇದ್ದರೆ ದೊಡ್ಡ ಹಗರಣವೇ ನಡೆಯುತ್ತಿತ್ತು ಎಂದು ಕಿಚಾಯಿಸಿದರು.

ಸಿದ್ದರಾಮಯ್ಯ ಸವಾಲು

  • ಕೇಂದ್ರ ಸರ್ಕಾರ ತಲಾ 4 ಲಕ್ಷ ರೂ.ಗೆ ಒಂದರಂತೆ 50 ಸಾವಿರ ವೆಂಟಿಲೇಟರ್ ಖರೀದಿಸಿದೆ. ರಾಜ್ಯ ಸರ್ಕಾರ 4, 12, 13, 18 ಲಕ್ಷ ರೂ. ನೀಡಿ ಖರೀದಿಸಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಪೂರೈಸಿರುವ ವೆಂಟಿಲೇಟರ್ ಕಳಪೆಯೆ? ಮೇಲ್ನೋಟಕ್ಕೆ ಭ್ರಷ್ಟಾಚಾರ ಕಂಡುಬರುತ್ತಿದೆ. ನ್ಯಾಯಾಂಗ ತನಿಖೆ ಆಗಲೇಬೇಕು.
  • ನಾವು ಫೆ.9ರಿಂದ ಜುಲೈ 13ರವರೆಗೆ ಸಹಕಾರ ಕೊಟ್ಟಿದ್ದೇವೆ. ಒಂದೇ ಒಂದು ಚಕಾರ ಎತ್ತಿಲ್ಲ. ಭ್ರಷ್ಟಾಚಾರ ನಡೆದರೆ ಸುಮ್ಮನೆ ಕುಳಿತುಕೊಳ್ಳಬೇಕೇ?
  • -ಠಿ;4 ಲಕ್ಷ ಎಲ್ಲಿ? -ಠಿ;18 ಲಕ್ಷ ಎಲ್ಲಿ? ಕಣ್ಣು ಮುಚ್ಚಿ ಕೊಂಡು ಒಪ್ಪಿಕೊಳ್ಳಬೇಕಾ? ನಮಗೆ ಅಧಿಕಾರಿಗಳ ನೈತಿಕ ಶಕ್ತಿ ಕುಗ್ಗಿಸುವ ಉದ್ದೇಶವಿಲ್ಲ. ಪಿಪಿಇ ಕಿಟ್ ಮೊದಲು -ಠಿ;330 ಕೊಟ್ಟು ಖರೀದಿಸಲಾಗಿತ್ತು. ಆ ನಂತರ -ಠಿ;2,117 ಕೊಟ್ಟು ಖರೀದಿ ಮಾಡಲಾಗಿದೆ. ಹೇಗೆ ಒಪ್ಪಿದಿರಿ? ಎಷ್ಟು ಪಟ್ಟು ಜಾಸ್ತಿ ಆಯ್ತು...

ಡಾ. ಕೆ. ಸುಧಾಕರ್ ಜವಾಬು

  • ಸರ್ಕಾರದಿಂದ ಎಳ್ಳಷ್ಟು ಲೋಪವಾಗಿಲ್ಲ. ಮೊದಲು ಕರೊನಾ ಗೆಲ್ಲೋಣ, ಜೀವ ರಕ್ಷಿಸೋಣ. ನಾವಿನ್ನೂ ಯುದ್ಧದ ನಡುವೆ ಇದ್ದೇವೆ. ಕರೊನಾ ಬಂದವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರಶಂಸಿಸುವುದು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ. ಈ ಸಂದರ್ಭದಲ್ಲಿ ಎಲ್ಲರೂ ರಾಜಕಾರಣ ಬಿಟ್ಟು ಮೇಲ್ಪಂಕ್ತಿ ಹಾಕೋಣ.
  • ಕೇಂದ್ರ ಸರ್ಕಾರ ಕಳುಹಿಸಿರುವ ವೆಂಟಿಲೇಟರ್ ಬೇರೆಯಾಗಿವೆ. ಒಂದೊಂದು ರಾಜ್ಯಗಳು ಒಂದೊಂದು ವೈಶಿಷ್ಟ್ಯಗಳನ್ನು ಒಳಗೊಂಡ ವೆಂಟಿಲೇಟರ್ ಖರೀದಿಸಿವೆ. ನಾವು 54 ವೈಶಿಷ್ಟ್ಯ (ಸ್ಪೆಸಿಫಿಕೇಷನ್) ಒಳಗೊಂಡ ವೆಂಟಿಲೇಟರ್ ಖರೀದಿ ಮಾಡಿದ್ದೇವೆ.
  • 73 ವರ್ಷಗಳಲ್ಲಿ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಕರೊನಾ ಪೂರ್ವದಲ್ಲಿ ಕೇವಲ 3,200 ಆಕ್ಸಿಜನ್ ಅಳವಡಿತ ಹಾಸಿಗೆಗಳಿದ್ದವು. ಈಗ 19,600ಕ್ಕೆ ಹೆಚ್ಚಿಸಿದ್ದೇವೆ. ಅಕ್ಟೋಬರ್ ವೇಳೆಗೆ 31 ಸಾವಿರ ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸುತ್ತೇವೆ. 93 ಸಾವಿರ ಆಕ್ಟೀವ್ ಕೇಸ್​ಗಳಿದ್ದು, 20 ಸಾವಿರ ಜನರಿಗೆ ಲಿಕ್ವಿಡ್ ಆಕ್ಸಿಜನ್ ಬೇಕಿದೆ. ದಿನಕ್ಕೆ 315 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಬೇಕು. ನಮ್ಮಲ್ಲಿ 815 ಮೆ. ಟನ್ ಉತ್ಪಾದನೆ ಇದೆ.

ವಲಸೆ ಕೋಲಾಹಲ

ಲಾಕ್​ಡೌನ್ ಆರಂಭದ ದಿನಗಳಲ್ಲಿ ವಲಸೆ ಕಾರ್ವಿುಕರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ವಿಚಾರವಾಗಿ ವಾಗ್ಯುದ್ಧಕ್ಕಿಳಿದರು. ಸಚಿವ ಸುಧಾಕರ್, ಸರ್ಕಾರ ವಿಶೇಷ ರೈಲು ಮತ್ತು ಬಸ್ ಮೂಲಕ ಕಾರ್ವಿುಕರನ್ನು ಕಳುಹಿಸುವ ವ್ಯವಸ್ಥೆ ಮಾಡಿತು ಎಂಬ ಹೇಳಿಕೆಗೆ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net