ಕಾಮಗಾರಿ ಪೂರ್ಣಗೊಳಿಸದೇ ಉದ್ಘಾಟನೆ: ನಗರದಲ್ಲಿ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

Cong Protest)
Published on

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪೂರ್ಣಗೊಳ್ಳದೇ ಉದ್ಘಾಟನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆಂದು ನಗರದಲ್ಲಿ ಯುವ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಗೋ ಬ್ಯಾಕ್ ಮೋದಿ ಎಂದು ನಾಮಫಲಕ ಹಿಡಿದು ಅಸಮಾಧಾನ ವ್ಯಕ್ತಪಡಿಸಿದರು. ಬೆ-ಮೈ ಹೆದ್ದಾರಿಯ ಹಲವೆಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವೆಡೆ ಅವೈಜ್ಞಾನಿಕವಾಗಿ ಕೆಲಸ ಮಾಡಲಾಗಿದೆ. ಆದರೂ ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಲು ಪ್ರಧಾನಿ ಬರುತ್ತಿರುವುದು ಖಂಡನೀಯ ಎಂದರು.

ಇದಲ್ಲದೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪರಿಣಾಮ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇತ್ತೀಚೆಗೆ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ರಾಜ್ಯ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ರವಿಕುಮಾರ್ ಗಣಿಗ, ಶ್ರೀಧರ್, ರಾಮಲಿಂಗಯ್ಯ, ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net