

ಪುತ್ತೂರು: ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ಪಕ್ಷ ಮಾತ್ರ ಅಲ್ಲ, ವಿಶ್ವದಲ್ಲಿ ಅತ್ಯಂತ ಶ್ರೀಮಂತ ಪಕ್ಷ. ಸುಪ್ರೀಂ ಕೋರ್ಟಿನ ಆದೇಶದ ನಂತರ ಚುನಾವಣಾ ಬಾಂಡ್‌ಗಳನ್ನು ಅಸ್ಸಾಂವಿಧಾನಿಕವೆಂದು ಕರೆದು, ರದ್ದು ಮಾಡಿ, ಜನಸಾಮಾನ್ಯರಿಗೆ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ಲ್ಲಿ ಸಿಗುವಂತೆ ಮಾಡಿತೋ, ಆಗ ಬಿಜೆಪಿ ಒಂದು ವಿಶ್ವದಲ್ಲಿ ಅತ್ಯಂತ ಭ್ರಷ್ಟ ಪಕ್ಷವೆಂದು ಜಗಜ್ಜಾಹೀರಾಯಿತು ಎಂದು ಕೆ.ಪಿ.ಸಿ.ಸಿ. ವಕ್ತಾರ ಅಮಳ ರಾಮಚಂದ್ರ ಹೇಳಿದರು.
೭೦ರ ದಶಕದಲ್ಲಿ ಬಿಜೆಪಿ ಚುನಾವಣೆಗೆ ನಿಲ್ಲುತ್ತಿದ್ದಾಗ ಪಕ್ಷದ ಅಭಿಮಾನಿಗಳ ಮನೆ ಮನೆಗೆ ಹೋಗಿ ಹಣವನ್ನ ಬೇಡಿ ತಂದು ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದು, ಆಗ ಬಿಪಿಎಲ್ ಪಾರ್ಟಿ ಆಗಿತ್ತು. ೨೦೧೪ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೋ, ಯಾವಾಗ ಅಂಬಾನಿ ಅದಾನಿಗಳ ಜೊತೆಗೆ ಮೋದಿಯವರು ಕೈ ಮಿಲಾಯಿಸಿದರೋ ಆ ಬಳಿಕ ಎಮ್ ಎಮ್ ಪಿ ಆಗಿ ಬದಲಾವಣೆ ಹೊಂದಿತು. ೨೦೧೭ರಲ್ಲಿ ಮೋದಿ ಸರ್ಕಾರ ಚುನಾವಣಾ ಬಾಂಡ್ ಗಳನ್ನು ಜಾರಿಗೆ ತಂದ ಬಳಿಕದ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದಂತೆ ೧೬೪೯೨ ಕೋಟಿ ರೂಪಾಯಿಗಳ ಮೌಲ್ಯದ ಚುನಾವಣಾ ಬಾಂಡುಗಳನ್ನು ಖರೀದಿಸಲಾಗಿದೆ. ಶೇಕಡ ೫೩.೦೩ ಬಾಂಡ್‌ಗಳು ಅಂದರೆ ೮೨೫೨ ಕೋಟಿ ರೂಪಾಯಿಗಳ ಬಾಂಡುಗಳು ಬಿಜೆಪಿಗೆ ಸಂದಿವೆ. ೧೯೫೨ ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ಕಾಂಗ್ರೆಸ್ ಪಕ್ಷಕ್ಕೆ, ೧೫೯೨ ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ, ೧೪೦೮ ಕೋಟಿ ರೂಪಾಯಿ ಮೌಲ್ಯದ ಬಂಡುಗಳು ಬಿ ಆರ್ ಎಸ್ ಪಕ್ಷಕ್ಕೆ, ೯೪೫.೫ ಕೋಟಿ ರೂಪಾಯಿ ಮೌಲ್ಯದ ಬಾಂಡುಗಳು ಒರಿಸ್ಸಾದ ಬಿಜು ಪಟ್ನಾಯಕ್ ಅವರ ಬಿಜೆಡಿ ಪಕ್ಷಕ್ಕೆ, ೫೦೯ ಕೋಟಿ ರೂಪಾಯಿ ಮೌಲ್ಯದ ಬೊಂಡುಗಳು ಡಿಎಂಕೆ ಪಕ್ಷಕ್ಕೆ ಮತ್ತು ಇತರ ಕೆಲವು ಪಕ್ಷಗಳಿಗೆ ಒಂದಷ್ಟು ಬಾಂಡ್‌ಗಳು ಸಂದಿದೆ. ಭ್ರಷ್ಟಾಚಾರವನ್ನು ಎಸೆಗಿದ್ದನ್ನು ಮುಚ್ಚಿಡಲು ಸ್ಟೇಟ್ ಬ್ಯಾಂಕ್ ಇಂಡಿಯಾ ದಂತಹ ಒಂದು ದೇಶದ ಜನರ ನಂಬಿಕಸ್ಥ ಬ್ಯಾಂಕನ್ನು ತನ್ನ ಕೈಗೊಂಬೆಯಾಗಿ ಬಳಸಿಕೊಂಡು ಕಳ್ಳಾಟದಲ್ಲಿ ತೊಡಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿವಿಧ ಕಂಪನಿಗಳಿಂದ ಶೇ.೫೦ಕ್ಕೂ ಮಿಕ್ಕಿ ಬಾಂಡುಗಳನ್ನು ಸ್ವೀಕರಿಸಿದ ಬಿಜೆಪಿ ಈ ಬಾಂಡುಗಳನ್ನು ಕಂಪನಿಗಳಿಂದ ವಸೂಲಿ ಮಾಡುವುದಕ್ಕೆ ಐಟಿ, ಈಡಿ, ಸಿಬಿಐ ಮತ್ತು ಪರಿಸರ ಇಲಾಖೆಯನ್ನು ಎಂದು ನಿರ್ಲಜ್ಜವಾಗಿ ಬಳಸಿಕೊಂಡು, ಬೀದಿಯ ರೌಡಿಗಳಂತೆ ಹೆದರಿಸಿ, ಬೆದರಿಸಿ, ಕೇಸುಗಳನ್ನು ದಾಖಲಿಸಿ, ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರವನ್ನು ಮಾಡಿದೆ. ದೇಶದ ಜನರನ್ನು ವಂಚಿಸಿ, ಕೋಟ್ಯಾಂತರ ರೂಪಾಯಿ ಮೊತ್ತದ ಹಗರಣವನ್ನು ನಡೆಸಿದ ಮೋದಿ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ದೇಶದ ಪ್ರಜ್ಞಾವಂತ ಮತದಾರರು ತಿರಸ್ಕರಿಸಿ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತವನ್ನು ನೀಡಬೇಕೆಂದು ಕೇಳಿಕೊಂಡರು.
ಕಾಂಗ್ರೆಸ್ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರು, ಮಹಾಲಿಂಗ ನಾಯ್ಕ್, ಮಹಮ್ಮದ್ ರಿಯಾಝ್, ಮೌರೀಸ್ ಮಸ್ಕರೇನಿಯಸ್ ಉಪಸ್ಥಿತರಿದ್ದರು.