

ಬೆಂಗಳೂರು: ಆಡಳಿತ ಕಾಂಗ್ರೆಸ್ ಪಕ್ಷದ ಅಧಿಕಾರ ಹಂಚಿಕೆಯ ಒಳ ಜಗಳ ಬೀದಿಗೆ ಬಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಅನೇಕ ಸಚಿವರು ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟು ಪೈಪೋಟಿಗೆ ಇಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ಗೋವುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಮಂಗಳವಾರ ಭೇಟಿ ನೀಡಿ, ಗೋಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಆದರೆ, ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ, ಅಭಿವೃದ್ಧಿ ಕೆಲಸಗಳು ಕುಂಠಿತ, ಜನರ ಸಮಸ್ಯೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬುದಷ್ಟೇ ಪ್ರತಿಪಕ್ಷ ಬಿಜೆಪಿ ಕಳವಳವಾಗಿದೆ ಎಂದರು.
ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಚಿಂತಿಸುವುದು ಬೇಡ. ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಪಕ್ಷದ ವರಿಷ್ಠರು ಎಲ್ಲವನ್ನೂ ಸರಿಪಡಿಸುವಷ್ಟು ಸಮರ್ಥರಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.
ಅಧಿಕಾರ ಹಂಚಿಕೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆದಿರುವ ಕಿತ್ತಾಟವನ್ನು ಮೊದಲು ಬಗೆಹರಿಸಿಕೊಳ್ಳಲಿ. ಸಿಎಂ ಕುರ್ಚಿಗೆ ಸಚಿವರ ಸ್ಪರ್ಧೆ, ಕ್ಣೇತ್ರದ ಅಭಿವೃದ್ಧಿಗೆ ಅನುದಾನವಿಲ್ಲದೆ ಹತಾಶರಾಗಿರುವ ಸ್ವಪಕ್ಷದ ಶಾಸಕರನ್ನು ನಿಭಾಯಿಸಲಿ ಎಂದು ಕುಟುಕಿದರು.
ದಾಖಲೆಯ ಬಾರಿಗೆ ಬಜೆಟ್ ಮಂಡಿಸಿದ್ದೇನೆ. ಆರ್ಥಿಕ ತಜ್ಞ ಎಂದು ಬಿಂಬಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಸರ್ಕಾರಿ ನೌಕರರಿಗೆ ವೇತನ ನೀಡಲಾಗದಷ್ಟು ಅಸಹಾಯಕರಾಗಿದ್ದು, ಬಾಕಿ ಬಿಲ್ ಪಾವತಿಯಾಗುತ್ತಿಲ್ಲ ಎಂದು ಗುತ್ತಿಗೆದಾರರು ರೊಚ್ಚಿಗೆದ್ದಿದ್ದಾರೆ. ಆರ್ಥಿಕ ಸಂಕಷ್ಟ ತಾಳಲಾರದೆ ಕೆಲವು ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿದರು.
ಗೋಮಾತೆ ಎಂದು ಪೂಜಿಸುವ ಪುಣ್ಯಭೂಮಿಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಹೀನಕೃತ್ಯ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಆಘಾತ ಉಂಟು ಮಾಡಿದೆ. ತುಷ್ಟೀಕರಣದ ಪರಿಣಾಮವೇ ಈ ದುಷ್ಕೃತ್ಯಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವಿಜಯೇಂದ್ರ ನೇತೃತ್ವದ ತಂಡವು ಹಸುಗಳ ಮಾಲೀಕರಿಗೆ ಧೈರ್ಯ ತುಂಬಿತು. ಸರ್ಕಾರದ ನಿಷ್ಕ್ರಿಯತೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಗೋಪೂಜೆಯನ್ನೂ ನೆರವೇರಿಸಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಭಾಸ್ಕರ್ ರಾವ್, ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು ಈ ತಂಡದಲ್ಲಿದ್ದರು.