ಕರೊನಾದಿಂದ ಮೃತರ ಅಂತ್ಯಕ್ರಿಯೆಗೆ ಜಮೀರ್ ನೆರವು: 53 ಶವಸಂಸ್ಕಾರ ಮಾಡಿದ ತಂಡ

zameer ahmed new
Published on

ಬೆಂಗಳೂರು: ಕರೊನಾ ಪೀಡಿತರೊಬ್ಬರು ಮೃತಪಟ್ಟರೆ ಅವರ ಕುಟುಂಬದ ಸದಸ್ಯರು ಅಂತಿಮ ದರ್ಶನ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ವಣವಾಗಿದೆ. ಈ ಸಂದರ್ಭದಲ್ಲಿ ಅನೇಕ ಶವಗಳು ಅನಾಥವಾಗುವ ಸನ್ನಿವೇಶ ಬಂದೊದಗಿದೆ. ಬೆಂಗಳೂರಿನ ವಿಚಾರಕ್ಕೆ ಬರುವುದಾದರೆ ಈವರೆಗೆ 76 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 53 ಮೃತದೇಹದ ಅಂತ್ಯಕ್ರಿಯೆ ಯಾರು ಮಾಡಬೇಕೆಂಬ ಪ್ರಶ್ನೆ ಎದುರಾದಾಗ ಮುಂದೆ ಬಂದಿದ್ದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮತ್ತು ಅವರ ತಂಡ ಎಂಬ ಕುತೂಹಲದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಮನೆಯ ಒಬ್ಬ ಸದಸ್ಯನಿಗೆ ಕರೊನಾ ಬಂದಾಗ ಉಳಿದವರನ್ನು ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಕ್ವಾರಂಟೈನ್ ಮಾಡುವುದು ಮಾಮೂಲು. ಒಂದು ವೇಳೆ ಕರೊನಾ ಸೋಂಕಿತ ಮೃತಪಟ್ಟರೆ ಅವರ ಮೃತದೇಹ ನೋಡಲೂ ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಜಮೀರ್ ಅಹ್ಮದ್ ನಿಯೋಜಿಸಿರುವ 20 ಜನರ ತಂಡ ನೆರವಾಗುತ್ತಿದೆ. ಮುಸ್ಲಿಮರಷ್ಟೇ ಅಲ್ಲ, 19 ಅನ್ಯಧರ್ವಿುಯರಿಗೂ ಅವರವರ ಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗಿದೆ. ಹೂಳುವ ಪದ್ಧತಿ ಇದ್ದರೆ ಹೂಳಲಾಗಿದೆ, ಕಟ್ಟಿಗೆಯಲ್ಲಿ ಸುಡುವ ಪದ್ಧತಿ ಇದ್ದರೆ ಸುಡಲಾಗಿದೆ, ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಬಹುದೆಂದಿದ್ದರೆ ಅದನ್ನೂ ಮಾಡಲಾಗಿದೆ. ಇತ್ತೀಚೆಗೆ ಮೃತರಾದ ಪೊಲೀಸ್ ಹೆಡ್ ಕಾನ್​ಸ್ಟೆಬಲ್ ಅಂತ್ಯಕ್ರಿಯೆಯನ್ನೂ ಇದೇ ತಂಡ ನಡೆಸಿದೆ. ಪಿಪಿಇ ಕಿಟ್ ತೊಟ್ಟು, ಸಾಕಷ್ಟು ಮುಂಜಾಗ್ರತೆ ವಹಿಸಿ ಅಂತ್ಯಕ್ರಿಯೆ ನಡೆಸುತ್ತಿದೆ ಎಂಬುದು ಗಮನಾರ್ಹ.

ಅಯೂಬ್, ಬಾಲ, ಮೂರ್ತಿ, ಅಮೀರ್, ಫಾರೂಕ್ ಸೇರಿ 20 ಮಂದಿ ತಂಡದಲ್ಲಿದ್ದಾರೆ. ಹಿಂದು, ಮುಸ್ಲಿಂ, ಕ್ರೖೆಸ್ತರಾಗಿದ್ದರೆ ಅವರವರ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗಿದೆ. ಮಾ.23ರಿಂದ ಇಲ್ಲಿಯವರೆಗೆ ಕರೊನಾದಿಂದ ಮೃತರಾದ 53 ಮಂದಿಯ ಅಂತ್ಯಕ್ರಿಯೆ ಮಾಡಿದ್ದೇವೆ. ಕಳೆದ ಭಾನುವಾರ ಕಲಾಸಿಪಾಳ್ಯ ಠಾಣೆ ಕಾನ್​ಸ್ಟೆಬಲ್ ಮೃತಪಟ್ಟಾಗ ಸಂಜೆ 6 ಗಂಟೆವರೆಗೆ ಮೃತದೇಹ ಎತ್ತುವವರು ಇರಲಿಲ್ಲ. ಪೊಲೀಸ್ ಇಲಾಖೆಯವರೂ ಬರಲಿಲ್ಲ. ಕೊನೆಗೆ ನಮ್ಮ ತಂಡವೇ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸಿ ಅಂತ್ಯಕ್ರಿಯೆ ಮಾಡಿದೆವು. | ಜಮೀರ್ ಅಹ್ಮದ್ ಶಾಸಕ

ಲಾಕ್​ಡೌನ್ ವೇಳೆ ಜನರಿಗೆ ನೆರವು

ಲಾಕ್​ಡೌನ್ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಬಿಬಿಎಂಪಿಯಿದ ನೀಡಲಾದ 43 ಸಾವಿರ ರೇಷನ್ ಕಿಟ್ ವಿತರಿಸಲಾಗಿದೆ. ಒಟ್ಟಾರೆ 60 ಸಾವಿರ ಮನೆಗೆ ದಿನಸಿ ಕಿಟ್ ನೀಡಲಾಗಿದೆ. ಸೀಲ್​ಡೌನ್ ಆದ ಪ್ರದೇಶದ ಜನರಿಗೆ ಸ್ವಂತ ಹಣದಲ್ಲಿ 14 ಸಾವಿರ ಜನರಿಗೆ ಊಟ, ನೀರು ಕೊಟ್ಟಿದ್ದೇನೆ. ಒಂದೂವರೆ ತಿಂಗಳು 3 ಸಾವಿರ ಮನೆಗೆ 5 ಕೆಜಿ ತರಕಾರಿ ತಲುಪಿಸಿದ್ದೇನೆ. ರಂಜಾನ್ ಉಪವಾಸವಿದ್ದ 5 ಸಾವಿರ ಜನರಿಗೆ ನಿತ್ಯ ಹಣ್ಣು ವಿತರಿಸಿದ್ದೇನೆ ಎಂದು ಜಮೀರ್ ಅಹಮದ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net