

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸದ್ಯಕ್ಕೆ ಕಾಂಗ್ರೆಸ್ನದ್ದೇ ಪಾರುಪತ್ಯ ನಡೆಯುತ್ತಿದ್ದು ಬಿಜೆಪಿ ಕೇವಲ ಒಂದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಜಿಲ್ಲೆಯ ಒಟ್ಟು 9 ಕ್ಷೇತ್ರದಲ್ಲಿ ಕಾಂಗ್ರೆಸ್ 6 ಕಡೆ ಮುನ್ನಡೆ ಸಾಧಿಸಿದ್ದು ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಮುಂದಿದೆ. ಇನ್ನು ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ 800 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ತುಮಕೂರು ಜಿಲ್ಲೆಯ ಪ್ರತೀ ಕ್ಷೇತ್ರದಲ್ಲಿ ಯಾರೆಲ್ಲ ಎಷ್ಟೆಷ್ಟು ಮತಗಳಿಂದ ಮುನ್ನಡೆಯಲ್ಲಿದ್ದಾರೆ ಎಂದು ತಿಳಿಯಲು ಈ ಕೆಳಗಿನ ಪಟ್ಟಿ ನೋಡಿ:
ಕರ್ನಾಟಕವು ಒಟ್ಟು 224 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲು 113 ಸ್ಥಾನಗಳ ಸ್ಪಷ್ಟ ಬಹುಮತವನ್ನು ಪಡೆಯಬೇಕಿದೆ. ಒಂದು ವೇಳೆ ಯಾರಿಗೂ ಬಹುಮತ ಬರದಿದ್ದರೆ ಮತ್ತೆ ಅತಂತ್ರ ಸರ್ಕಾರ ರಚನೆಯಾಗಲಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್ 80 ಮತ್ತು ಜೆಡಿಎಸ್ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 11 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.
73.19 ದಾಖಲೆ ಮತದಾನ: ಈ ಬಾರಿ ದಾಖಲೆಯ ಶೇ.73.19 ಮತದಾನವಾಗಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ನಾನಾ ರೀತಿಯ ಲೆಕ್ಕಾಚಾರಕ್ಕೆ ಇಂಬು ಮಾಡಿಕೊಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು ನಮಗೆ ಲಾಭ ತಂದುಕೊಡಲಿದೆ ಎಂದು ಬಿಜೆಪಿ ನಾಯಕರ ವಾದ. ಆದರೆ, ಅತಿ ಕಡಿಮೆ ಮತದಾನವಾದಾಗಲೂ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವ ಉದಾಹರಣೆಗಳಿವೆ. ಅಂತೆಯೇ, ಅತೀ ಹೆಚ್ಚು ಮತದಾನವಾದಾಗಲೂ ಬಿಜೆಪಿಗೆ ಲಾಭವಾಗದಿರುವ ದಾಖಲೆಗಳೂ ನಮ್ಮ ಮುಂದಿವೆ. ಹೀಗಾಗಿ ಈ ಬಾರಿಯ ಫಲಿತಾಂಶ ಊಹೆಗೆ ನಿಲುಕದಂತಾಗಿದೆ.