ಕಾಂಗ್ರೆಸ್ ದಲಿತ ವಿರೋಧ ನೀತಿ ಅನುಸರಿಸುತ್ತಿದೆ; ಗೋಪಾಲ ಘಟಕಾಂಬಳೆ ಆರೋಪ

GOPAL GHATAKAMBLE PRESS MEET
ವಿಜಯಪುರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದಾರೆ.
Published on

ವಿಜಯಪುರ: ಅಹಿಂದ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ದಲಿತರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆರೋಪಿಸಿದರು.

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ.ಹಗರಣ ಮಾಡಿದ್ದಾರೆ. ಈ ಹಗರಣದಲ್ಲಿ ಸಚಿವರ ತಲೆದಂಡ ಆಗಿದ್ದು, ಅನೇಕರನ್ನು ಬಂಧನ ಮಾಡಲಾಗಿದೆ. ಅಹಿಂದ ನಾಯಕರು ಎಂದು ಬಿಂಬಿಸಿ ದಲಿತರಿಗೆ ಕಾಂಗ್ರೆಸ್ ವಂಚಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಿಂದುಳಿದ ಹಾಗೂ ದಲಿತರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತ ನಾಯಕರು ಅಂತ ಹೇಳಿ ವಂಚನೆ ಮಾಡುತ್ತಿದ್ದಾರೆ. ವಾಲ್ಮೀಕಿ, ಮುಡಾ ಸೇರಿದಂತೆ ಅನೇಕ ಹಗರಣಗಳು ಇವರ ಮೇಲೆ ಇರುವುದರಿಂದ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ದಲಿತರ ಪರವಾಗಿರುವ ಏಕೈಕ ಪಕ್ಷ ಎಂದರೆ ಅದು ಬಿಜೆಪಿ. ಯಾವಾಗಲೂ ಬಿಜೆಪಿ ದಲಿತರ ಪರವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಇದೇ ಬಿಜೆಪಿ. ಈ ಪಕ್ಷದಲ್ಲಿ ಯಾವಾಗಲೂ ದಲಿತರಿಗೆ ಸಮಾನತೆ ಕೊಡುವ ಕೆಲಸ ಆಗಿದೆ. ಬಿಜೆಪಿ ಚಲವಾದಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಕೊಟ್ಟಿದೆ. ಹೀಗಾಗಿ ದಲಿತರು, ಹಿಂದುಳಿದವರು ಬಿಜೆಪಿ ಪರ ಇದ್ದಾರೆ. ಕಾಂಗ್ರೆಸ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಇರುವುದರಿಂದ ದಲಿತ ಸಂಘಟನೆಗಳು ಕೂಡ ಹೋರಾಟಕ್ಕೆ ಇಳಿಯಬೇಕಿದೆ. ಕಾಂಗ್ರೆಸ್‌ನವರು ದಲಿತರ ಹಣ ದುರುಪಯೋಗ ಮಾಡಿದ್ದರಿಂದ ದಲಿತ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net