ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಗೌರವವಿಲ್ಲ

ಪಾಂಡವಪುರ ತಾಲೂಕಿನ ಕೆನ್ನಾಳು ಗೇಟ್ ಸಮೀಪ ತಾಲೂಕು ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷದ ಕರಾಳ ದಿನಾಚರಣೆ ಹಾಗೂ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ಪ್ರತಾಪ್ ಸಿಂಹ, ಡಾ.ಇಂದ್ರೇಶ್, ಸಚ್ಚಿತಾನಂದ, ಟಿ.ಶ್ರೀಧರ್ ಇತರರು ಇದ್ದರು.
ಪಾಂಡವಪುರ ತಾಲೂಕಿನ ಕೆನ್ನಾಳು ಗೇಟ್ ಸಮೀಪ ತಾಲೂಕು ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷದ ಕರಾಳ ದಿನಾಚರಣೆ ಹಾಗೂ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ಪ್ರತಾಪ್ ಸಿಂಹ, ಡಾ.ಇಂದ್ರೇಶ್, ಸಚ್ಚಿತಾನಂದ, ಟಿ.ಶ್ರೀಧರ್ ಇತರರು ಇದ್ದರು.
Published on

ಪಾಂಡವಪುರ: ಕಾಂಗ್ರೆಸ್ ಕಾರಣದಿಂದ ನಮ್ಮ ದೇಶ 1975ರಲ್ಲಿ ತುರ್ತು ಪರಿಸ್ಥಿತಿ ಹೆಸರಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಳ್ಳ ಬೇಕಾಯಿತು. ಅಂದು ಇಂದಿರಾ ಗಾಂಧಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದರು ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಪಾದಿಸಿದರು.

ತಾಲೂಕಿನ ಕೆನ್ನಾಳು ಗೇಟ್ ಸಮೀಪ ತಾಲೂಕು ಬಿಜೆಪಿ ಭಾನುವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ 50ನೇ ವರ್ಷದ ಕರಾಳ ದಿನಾಚರಣೆ ಹಾಗೂ ಮನ್ ಕೀ ಬಾತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್‌ನವರಿಗೆ ಸಂವಿಧಾನ ಹಾಗೂ ಡಾ.ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಡಾ.ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನವನ್ನು ತಮ್ಮ ಸ್ವಾರ್ಥಕ್ಕಾಗಿ 38 ರಿಂದ 42ರವರೆಗೆ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವ, ಮೂಲಹಕ್ಕುಗಳನ್ನು ಕಗ್ಗೊಲೆ ಮಾಡಿದರು. 1977ರಲ್ಲಿ ಬಂದಂತಹ ಜನತಾ ಪರಿವಾರ ಸಂವಿಧಾನಕ್ಕೆ ತಂದಿದ್ದ ತಿದ್ದುಪಡಿಯನ್ನು ವಾಪಸ್ ಪಡೆದು ಡಾ.ಅಂಬೇಡ್ಕರ್ ಅವರ ಸಂವಿಧಾನದ ಘನತೆ ಉಳಿಸುವ ಕೆಲಸ ಮಾಡಿದರು ಎಂದರು.

1977ರಲ್ಲಿ ದೇಶದಲ್ಲಿ ಇಂತಹ ಯಾವುದೇ ಬಿಕ್ಕಟ್ಟು ಎದುರಾಗದಿದ್ದರೂ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದರು. ಇಂದಿರಾಗಾಂಧಿ ಅವರು ಸಂಸದ ಸ್ಥಾನದ ವಿರುದ್ಧ ಅಹಮದಾಬಾದ್ ಹೈಕೋರ್ಟ್ ತೀರ್ಪು ನೀಡಿದ್ದರಿಂದ ಮುಂದೆ ಎದುರಾಗುವ ಸಂಕಷ್ಟ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾಷ್ಟ್ರಪತಿಗಳಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು. ಕಾಂಗ್ರೆಸ್ ಪಕ್ಷ ಯಾವತ್ತೂ ಸಂವಿಧಾನದ ಪರವಾಗಿ ನಿಂತ್ತಿಲ್ಲ. ಸಂವಿಧಾನಕ್ಕೆ ಹಲವು ತಿದ್ದುಪಡಿ ತಂದು ಅದರ ಆಶಯಗಳನ್ನು ಕಗ್ಗೊಲೆ ಮಾಡಿದೆ ಎಂದು ಹರಿಹಾಯ್ದರು.

ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಭಾರತೀಯ ಸಂವಿಧಾನ ಹಾಗೂ ಅಂಬೇಡ್ಕರ್ ವಿರುದ್ಧ ಕೆಲಸ ಮಾಡಿದ ಪಕ್ಷ ಯಾವುದಾದರೂ ಇದೆ ಎಂದರೆ ಅದು ಕಾಂಗ್ರೆಸ್ ಪಕ್ಷ. ಚುನಾವಣೆಯಲ್ಲಿ ಡಾ.ಅಂಬೇಡ್ಕರ್ ಅವರನ್ನು ಸೋಲಿಸಿದರು. ಸಂವಿಧಾನಕ್ಕೆ ತಿದ್ದುಪಡಿ ತರುವುದರ ಜತೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ದೇಶದ ಸಂವಿಧಾನಕ್ಕೆ ಅವಮಾನ ಮಾಡಿದರು ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ, ಡಾ.ಅಂಬೇಡ್ಕರ್ ಬಗ್ಗೆ ಪಾಠ ಮಾಡ್ತಾರೆ, ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗ ನೀವು ಏನು ಮಾಡುತ್ತಿದ್ದೀರಿ?. ದೇಶದಲ್ಲಿ ಎದುರಾದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಹೋಗುವುದರ ಜತೆಗೆ ಕಾಂಗ್ರೆಸ್‌ನವರು ಸಂವಿಧಾನಕ್ಕೆ ತಂದಿದ್ದ ತಿದ್ದುಪಡಿಗಳನ್ನು ವಾಪಸ್ ಪಡೆಯುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದ್ದು ಇದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯವರು ಎನ್ನುವುದನ್ನು ಮರೆಯಬೇಡಿ. ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಹೊಸ ನಾಯಕರು ಹುಟ್ಟಿಕೊಂಡರು ಎಂದು ಪ್ರತಿಪಾದಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಇಂದಿರಗಾಂಧಿ ಅವರ ಕಾಲದಲ್ಲಿ ಇದ್ದಂತಹ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. 1975 ಜೂ.25ರಂದು ಮಧ್ಯರಾತ್ರಿ ದೇಶದಲ್ಲಿ ಎದುರಾದ ತುರ್ತು ಪರಿಸ್ಥಿತಿಯಿಂದಾಗಿ ಜನತೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಇಂತಹದ ಪರಿಸ್ಥಿತಿ ಮುಂದೆ ಎದುರಾಗಬಾರದು ಎಂದರೆ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಗುಡುಗಿದರು.

ಬಿಜೆಪಿ ಮುಖಂಡರಾದ ಎಸ್.ಪಿಸ್ವಾಮಿ, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಮು, ಸಿದ್ದರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಟಿ.ಶ್ರೀಧರ್, ಬಿಜೆಪಿ ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net