ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲು: ಬಿಎಸ್‌ವೈ ಕುಟುಕು | Cong MLAs revolt

BSY press meet
Published on

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕರಿಂದಲೇ ಸರ್ಕಾರದ ಭ್ರಷ್ಟಾಚಾರ, ನಿಜ ಬಂಡವಾಳ ಬಯಲಾಗುತ್ತಿದೆ. ಈ ಬೆಳವಣಿಗೆ ಮುಂದುವರಿಯಲಿದೆ ಕಾದು ನೋಡಿರಿ. ಅಭಿವೃದ್ಧಿ ಕೆಲಸ ನಿಲ್ಲಿಸಿದ್ದರ ಪರಿಣಾಮವಿದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಕಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಲಂಚ ಕೊಡದೆ ಏನೂ ಕೆಲಸ ಆಗುವುದಿಲ್ಲವೆಂದು ಶಾಸಕ ಬಿ.ಆರ್.ಪಾಟೀಲ ಗುರುತರ ಆರೋಪ ಮಾಡಿದ್ದು, ಸಿಎಂ ಕರೆದರೆ ವಾಸ್ತವಿಕ ಪರಿಸ್ಥಿತಿ ತಿಳಿಸುವುದಾಗಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬಿ.ಆರ್.ಪಾಟೀಲರನ್ನು ಸಿಎಂ ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದು ಎಂಬ ಆತಂಕ ನಮಗಿದೆ. ಶಾಸಕ ರಾಜು ಕಾಗೆ ಮಾತ್ರವಲ್ಲ, ಹತ್ತಾರು ಜನರಿದ್ದಾರೆ. ಒಬ್ಬೊಬ್ಬರೆ ಬಾಯಿಬಿಡಲಿದ್ದಾರೆ. ನೀವೇ (ಮಾಧ್ಯಮದವರು) ಕಾದು ನೋಡಿ ಎಂದರು.

ಭಯ ಹುಟ್ಟಿಸುವ ಕೆಲಸ

ಸುಳ್ಳು ಕಾರಣ ಹೇಳಿ ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ಎ್ಐಆರ್ ದಾಖಲಿಸುವ ಧೈರ್ಯ ಮಾಡಿದ್ದಾರೆ. ರಾಜಕೀಯದಿಂದ ದೂರವಿರುವವರು ಸರ್ಕಾರದ ವಿರುದ್ಧ ಧ್ವನಿ ಎತ್ತಬಾರದೆಂಬ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತುರ್ತು ಪರಿಸ್ಥಿತಿಯಲ್ಲಿದ್ದ ವಾತಾವರಣವನ್ನು ತರುವ ಪ್ರಯತ್ನ ಈ ಸರ್ಕಾರ ಮಾಡುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹೆಜ್ಜೆ ಹೆಜ್ಜೆಗೂ ಬೆಂಬಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುವೆ ಎಂದು ಯಡಿಯೂರಪ್ಪ ಹೇಳಿದರು.

ಹೋರಾಟಕ್ಕೆ ಸಜ್ಜು

ಪ್ರತಿನಿತ್ಯ ಪಕ್ಷದ ರಾಜ್ಯ ಕಚೇರಿಗೆ ಬರುವುದಾಗಿ ಹೇಳಿದ್ದೆ, ಅದರಂತೆಯೇ ಬರುತ್ತಿದ್ದೇನೆ. ಪ್ರತಿ ವಾರ ಒಂದು ಜಿಲ್ಲಾ ಪ್ರವಾಸ ಕೈಗೊಂಡು, ರಾಜ್ಯಾದ್ಯಂತ ಪರ್ಯಟನೆ ಮಾಡಿ ಸಂಘಟನೆಗೆ ಬಲ ತುಂಬಿ, ಕಾರ್ಯಕರ್ತರನ್ನು ಕ್ರಿಯಾಶೀಲಗೊಳಿಸುವ ಕೆಲಸ ಮಾಡುವೆ ಎಂದರು.

ಜಿಲ್ಲಾ ಪ್ರವಾಸದ ವೇಳೆ ಕಾರ್ಯಕರ್ತರ ಸಭೆಗಳನ್ನು ಸಂಘಟಿಸಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ, ವೈಲ್ಯಗಳ ಬಗ್ಗೆ ಮಾಹಿತಿ ನೀಡಿ ಹೋರಾಟಕ್ಕೆ ಸಜ್ಜುಗೊಳಿಸುವೆ. ಪ್ರಾರಂಭದಲ್ಲಿ ಸಾರ್ವಜನಿಕ ಸಭೆ ಮಾಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net