

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಗೃಹ ಇಲಾಖೆಯ ಮೂಲಕ ಹಿಂದುತ್ವದ ಧ್ವನಿ ಹಿಮ್ಮೆಟ್ಟಿಸಲು, ದಮನಿಸಲು ಕೈ ಹುನ್ನಾರ ನಡೆಸಿದೆ. ಸಾಮಾಜಿಕ, ಜನಪರ ಕೆಲಸ ಮಾಡುತ್ತಿರುವ, ಯುವ ಸಮುದಾಯಕ್ಕೆ ರಾಷ್ಟ್ರಾಭಿಮಾನ ಮೂಡಿಸುತ್ತಿರುವ ಹಿಂದು ಮುಖಂಡರನ್ನು ನಿಗ್ರಹಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಅದನ್ನು ಕೈಬಿಡದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಹಿಂದು ಮುಂಖಡರನ್ನು ಸಿದ್ದರಾಮಯ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಭಾಷಣಕಾರ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕುಂದಾಪುರಕ್ಕೆ ಮೊನ್ನೆ ಬರದಂತೆ ನಿರ್ಬಂಧ ಹೇರಿದೆ. ಅದರ ಮುಂದುವರಿದ ಭಾಗವಾಗಿ ಬಾಗಲಕೋಟೆಯ ಮುಧೋಳದಲ್ಲಿ ಛತ್ರಪತಿ ಶಿವಾಜಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಷಣ ಮಾಡಬೇಕಿದ್ದ ಹಿಂದು ಮುಖಂಡ ಉಡುಪಿಯ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರಿಗೆ 3 ತಿಂಗಳು ನಿರ್ಬಂಧ ಹೇರಿದೆ. ಇದೆಷ್ಟು ಸರಿ ಎಂದು ಪ್ರಶ್ನಿಸಿದರು.
ಹಿಂದುತ್ವದ ಬಗ್ಗೆ, ಶಿವಾಜಿ ಬಗ್ಗೆ, ರಾಷ್ಟ್ರದ ಸಂಸ್ಕೃತಿಯ ಬಗ್ಗೆ ಹಾಗೂ ಸತ್ಯವನ್ನು ಮಾತನಾಡುವುದು ತಪ್ಪೇ? ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಶಿವಕುಮಾರರೇ, ಗೃಹ ಸಚಿವ ಪರಮೇಶ್ವರರೇ ಇನ್ನೂ ಎಷ್ಟು ದಿನ ಹೀಗೆ ಹಿಂದು ಮುಖಂಡರನ್ನು ನಿಗ್ರಹಿಸುವ ಕೆಲಸ ಮಾಡುತ್ತೀರಿ? ಕರ್ನಾಟಕದ ಜನರು ಕರ್ನಾಟಕದ ಇನ್ನೊಂದು ಜಿಲ್ಲೆಗೆ ಹೋಗದಂತೆ ನಿರ್ಬಂಧಿಸುವುದು ಎಂತಹ ನ್ಯಾಯ? ನಿಮ್ಮಈ ಕಾರ್ಯ ಶಾಶ್ವತವಲ್ಲ. ಕೂಡಲೇ ಶ್ರೀಕಾಂತ ಶೆಟ್ಟಿ ವಿರುದ್ಧ ಹೇರಿರುವ ನಿರ್ಬಂಧ ವಾಪಸ್ ಪಡೆಯಬೇಕು ಎಂದರು.
ಹಿರಿಯ ರಾಜಕಾರಣಿ, ಶಾಕ ಡಿ.ಆರ್. ಪಾಟೀಲ ಅವರು ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಿಸಲು ಎಲ್ಲ ಲಾನುಭವಿಗಳಿಂದ 10 ಸಾವಿರ ರೂ. ಲಂಚ ಕೇಳುತ್ತಿದ್ದಾರೆ. ನಾನು ಶಾಸಕನಾಗಿ ಕೊಟ್ಟ ಪತ್ರಕ್ಕೆ ಬೆಲೆ ಇಲ್ಲದಾಗಿದೆ. ಗ್ರಾಪಂ ಮೂಲಕ ನೇರವಾಗಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಅದೆಲ್ಲ ಸುಳ್ಳು ಎನ್ನುತ್ತಾರೆ. ಸಿಎಂ ಅವರೂ ಸಹ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರೆಲ್ಲ ಭ್ರಷ್ಟಾಚಾರವನ್ನು ಮುಕ್ತವಾಗಿಯೇ ಬೆಂಬಲಿಸುತ್ತಿದ್ದಾರೆ. ತ್ವರಿತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಅಪರೂಪಕ್ಕೆ ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೊನ್ನೆ ಕೆಡಿಪಿ ಸಭೆಯಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅಪ್ಪಟ ಸುಳ್ಳು ಹೇಳಿದ್ದಾರೆ. ನಮ್ಮ ಶಾಸಕರು ಯಾರೂ ಆ ಸಭೆಯಲ್ಲಿ ಇರಲಿಲ್ಲ. ಈ ಹಿಂದೆ ಯುಪಿಎ ಸರ್ಕಾರ ಇರುವಾಗ ನರೇಗಾಕ್ಕೆ 33 ಸಾವಿರ ಕೋಟಿಯನ್ನು ಬಜೆಟ್ನಲ್ಲಿ ಘೋಷಿಸಿತ್ತು. ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಕಳೆದ ವರ್ಷ ವಾರ್ಷಿಕ ಬಜೆಟ್ನಲ್ಲಿ 86 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಅವರ ಸರ್ಕಾರ ಇರುವಾಗ ಕನಿಷ್ಠ ಕೂಲಿ 155 ರೂ. ಇತ್ತು. ಈಗ 380 ರೂ. ಇದೆ. ಅವರೇ ಉಸ್ತವಾರಿ ಆಗಿರುವ ಉಡುಪಿ ಜಿಲ್ಲೆಗೆ 2024-25ನೇ ಸಾಲಿಗೆ 7 ಲಕ್ಷ 93 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಅದಕ್ಕೆ 51.50 ಕೋಟಿ ರೂ. ಕೂಲಿ ಹಣ ಬಿಡುಗಡೆ ಮಾಡಿದೆ. ಪ್ರಸಕ್ತ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿಗೆ 6.21 ಕೋಟಿ ರೂ., ಬಿಡುಗಡೆ ಮಾಡಿದೆ. ಇದು ಕೇವಲ ಉಡುಪಿ ಜಿಲ್ಲೆಗೆ ಮಾತ್ರ. ಆಡಳಿತ ವೆಚ್ಚದಲ್ಲಿ ಶೇ.6 ಅನುದಾನ ಸಹ ಕೇಂದ್ರದಿಂದ ಬಿಡುಗಡೆ ಆಗಿಲ್ಲ ಎಂದಿದ್ದಾರೆ. ನಾನು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರ.ಕಾರ್ಯದರ್ಶಿ ಬಳಿ ವಿಚಾರಿಸಿದಾಗ ಕೇಂದ್ರದಿಂದ ಹಣ ಬಂದಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಲಕ್ಷ್ಮೀಯವರೇ ಕೇಂದ್ರ ಸರ್ಕಾರ, ಸಂಸದರನ್ನು ಟೀಕಿಸುವ ಮೊದಲು ನಿಮ್ಮದೇ ಅಧಿಕಾರಿಗಳಲ್ಲಿ ವಿಚಾರಿಸಿ, ತಿಳಿದು ಮಾತನಾಡಿ ಎಂದು ಸಂಸದ ಪೂಜಾರಿ ಸಲಹೆ ನೀಡಿದರು.