ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ; ಮಧು, ಬಿಕೆಎಸ್, ಬೇಳೂರು ಟಿಕೆಟ್ ಅಂತಿಮ

Photopea_Mar-25-2023-9_13_56-AM_-780x470 (1)
Published on

ಶಿವಮೊಗ್ಗ: ವಿಧಾನಸಭೆ ಚುನಾವಣೆ ನಿಗದಿಗೆ ಮುನ್ನವೇ ದಿನದಿಂದ ದಿನಕ್ಕೆ ಕಣ ರಂಗೇರುತ್ತಿದ್ದು ಕಾಂಗ್ರೆಸ್‌ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಜಿಲ್ಲೆಯ ಸೊರಬ ಕ್ಷೇತ್ರಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮತ್ತು ಭದ್ರಾವತಿ ಕ್ಷೇತ್ರಕ್ಕೆ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಹೆಸರು ಅಂತಿಮಗೊಂಡಿದೆ. ಆದರೆ ತೀವ್ರ ಕುತೂಹಲ ಮೂಡಿಸಿದ್ದ ಸಾಗರ ಕ್ಷೇತ್ರಕ್ಕೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಟಿಕೆಟ್ ಗಿಟ್ಟಿಸುವುದು ನಿಕ್ಕಿಯಾಗಿದೆ.

ಮಧು ಬಂಗಾರಪ್ಪ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಳಿಕ ಸೊರಬ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿತ್ತು. ಕಾಂಗ್ರೆಸ್‌ನಿಂದ ಪ್ರತಿಸ್ಪರ್ಧಿಗಳೇ ಇಲ್ಲದ ಕಾರಣ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ಒಲಿದಿದೆ. ಇತ್ತ ಭದ್ರಾವತಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಆಧಾರಿತ ಕ್ಷೇತ್ರವಾಗಿದ್ದರೂ ಹಾಲಿ ಶಾಸಕರಿಗೆ ಪಕ್ಷ ಮನ್ನಣೆ ನೀಡಿದೆ. ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ನ ಎಂ.ಜೆ.ಅಪ್ಪಾಜಿಗೌಡ ನಿಧನರಾದ ಬಳಿಕ ಭದ್ರಾವತಿ ಕ್ಷೇತ್ರದಲ್ಲಿ ಸಂಗಮೇಶ್ವರ್ ಬಲ ಮತ್ತಷ್ಟು ಹೆಚ್ಚಿದೆ.

ಸಾಗರ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ಯಾರಿಗೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿತ್ತು. ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದರು. ಆದರೆ ಕೊನೆಗೂ ಮೊದಲ ಪಟ್ಟಿಯಲ್ಲೇ ಸಾಗರ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರು ಹೆಸರು ಪ್ರಕಟಗೊಂಡಿದ್ದು ಅವರ ಬೆಂಬಲಿಗರಲ್ಲಿ ಹುಮ್ಮಸ್ಸು ಹೆಚ್ಚುವಂತೆ ಮಾಡಿದೆ. ಶತಯಗತಾಯ ಪುತ್ರಿ ಡಾ. ರಾಜನಂದಿನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಿಗೆ ಹೈಕಮಾಂಡ್ ತಣ್ಣೀರೆರಚಿದೆ.

ನಾಲ್ಕು ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ತಳಮಳ:

ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಇತ್ತ ಉಳಿದ ನಾಲ್ಕು ಕ್ಷೇತ್ರಗಳ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಾಗಿದೆ. ಅದರಲ್ಲೂ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಶಿವಮೊಗ್ಗ ನಗರ ಕ್ಷೇತ್ರ ಯಾರಿಗೆ ಒಲಿಯಲಿದೆ ಎಂಬ ಗುಟ್ಟನ್ನು ವರಿಷ್ಠರು ಇನ್ನೂ ಬಿಟ್ಟುಕೊಟ್ಟಿಲ್ಲ. ಹಾಲಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಎಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ಎಸ್.ಪಿ.ದಿನೇಶ್ ಸೇರಿದಂತೆ 11 ಮಂದಿ ಆಕಾಂಕ್ಷಿಗಳು ಹಾಗೂ ಮೀಸಲು ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರಕ್ಕೆ ಜಿ.ಪಲ್ಲವಿ, ಎನ್.ರವಿಕುಮಾರ್, ಡಾ. ಶ್ರೀನಿವಾಸ್ ಕರಿಯಣ್ಣ, ಅನಿತಾ ಕುಮಾರಿ ಸೇರಿ ಹಲವರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಎಲ್ಲರ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ. ತೀರ್ಥಹಳ್ಳಿಯಿಂದ ಸ್ಪರ್ಧೆ ಮಾಡಲು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. ಹಾಗಾಗಿ ಮೊದಲ ಪಟ್ಟಿಯಲ್ಲಿ ಶಿಕಾರಿಪುರದಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರೆಂಬ ಗುಟ್ಟನ್ನು ಪಕ್ಷ ಬಿಟ್ಟುಕೊಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net