

ನವದೆಹಲಿ : ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಕರೊನಾ ಲಸಿಕೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಸಲಹೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇಂದು ಆ ಪತ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ಪತ್ರವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಪಕ್ಷಾತೀತವಾಗಿ ‘ರಚನಾತ್ಮಕ ಸಹಕಾರ’ ನೀಡುವ ದೆಸೆಯಲ್ಲಿ ಸಲಹೆಗಳನ್ನು ನೀಡುತ್ತಿರುವುದಾಗಿ ಸಿಂಗ್ ಪತ್ರದಲ್ಲಿ ಬರೆದಿದ್ದರು. ಅದಕ್ಕೆ ಉತ್ತರ ನೀಡಿರುವ ಹರ್ಷವರ್ಧನ್, "ನಿಮ್ಮ ‘ರಚನಾತ್ಮಕ ಸಹಕಾರ’ ಮತ್ತು ಅಮೂಲ್ಯವಾದ ಸಲಹೆಯನ್ನು ಈ ಅಸಾಧಾರಣ ಸಮಯದಲ್ಲಿ ನಿಮ್ಮ ಕಾಂಗ್ರೆಸ್ ನಾಯಕರು ಅನುಸರಿಸಿದರೆ ಇತಿಹಾಸ ನಿಮಗೆ ಧನ್ಯವಾದ ಹೇಳುತ್ತದೆ ಡಾ. ಮನಮೋಹನ್ ಸಿಂಗ್ ಜಿ" ಎಂದಿದ್ದಾರೆ.
“ಡಾ.ಸಿಂಗ್, ಕೋವಿಡ್ ವಿರುದ್ಧ ಹೋರಾಡುವ ಪ್ರಮುಖ ವಿಧಾನವಾಗಿ ವ್ಯಾಕ್ಸಿನೇಷನ್‌ನ ಮಹತ್ವವನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಆದರೆ, ನಿಮ್ಮ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನರು ಮತ್ತು ನಿಮ್ಮ ಪಕ್ಷವು ರಚಿಸಿರುವ ರಾಜ್ಯ ಸರ್ಕಾರವು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಂತೆ ಕಾಣುತ್ತಿಲ್ಲ” ಎಂದಿರುವ ಆರೋಗ್ಯ ಸಚಿವರು, ಭಾರತದ ಲಸಿಕೆ ಪ್ರಯಾಣದ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ “ಕೃತಜ್ಞತೆಯ ಅಭಾವ”ವಿದೆ ಎಂದಿದ್ದಾರೆ.
"ಸಂಕಷ್ಟದ ಸಂದರ್ಭಗಳಲ್ಲಿ ಜಗತ್ತನ್ನು ಲಸಿಕೆಗಳಿಂದ ಸಶಕ್ತಗೊಳಿಸಿದ್ದಕ್ಕಾಗಿ ನಮ್ಮ ವಿಜ್ಞಾನಿ ಸಮುದಾಯ ಮತ್ತು ಲಸಿಕೆ ತಯಾರಕರ ಬಗ್ಗೆ ಕೃತಜ್ಞತೆಯ ಒಂದೇ ಒಂದು ಮಾತನ್ನು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಇನ್ನೂ ಹೇಳದಿರುವುದು ಆಘಾತಕಾರಿ ಸಂಗತಿ. ಹೆಮ್ಮೆಯ ಭಾವವನ್ನು ತೋರಿಸುವ ಬದಲು, ಕಾಂಗ್ರೆಸ್ ಈ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸುಳ್ಳನ್ನು ಹರಡಲು ಅಸಾಧಾರಣ ಆಸಕ್ತಿ ವಹಿಸಿದೆ" ಎಂದಿದ್ದಾರೆ.
ಕಾಂಗ್ರೆಸ್ ಜನರಲ್ಲಿ "ಲಸಿಕೆ ಹಿಂಜರಿಕೆಯನ್ನು ಉತ್ತೇಜಿಸಿ, ದೇಶವಾಸಿಗಳ ಜೀವನದೊಂದಿಗೆ ಆಟವಾಡಿದೆ" ಎಂದು ಆರೋಪಿಸಿರುವ ಹರ್ಷವರ್ಧನ್, ಕಾಂಗ್ರೆಸ್ನ ಓರ್ವ ಮುಖ್ಯಮಂತ್ರಿಯೂ ಸೇರಿದಂತೆ ಉನ್ನತ ನಾಯಕರು ಲಸಿಕೆಯ ಬಗ್ಗೆ ಬಹಿರಂಗವಾಗಿ ನಕಾರಾತ್ಮಕ ಹೇಳಿಕೆಗಳನ್ನು ನೀಡಿ, ಖಾಸಗಿಯಾಗಿ ಹೋಗಿ ಲಸಿಕೆ ಪಡೆದಿದ್ದಾರೆ. ಕೆಲವು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಹಿರಿಯ ನಾಗರೀಕರು ಮತ್ತು ಮುಂಚೂಣಿ ಕಾರ್ಮಿಕರಿಗೆ ನೀಡಲಾದ ಲಸಿಕೆ ಪ್ರಮಾಣ ತುಂಬಾ ಕಡಿಮೆ ಇದ್ದು, ಈ ರಾಜ್ಯಗಳೇ ಕರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಕೊಡುಗೆ ನೀಡಿವೆ ಎಂದಿದ್ದಾರೆ.
ಮನಮೋಹನ್ಸಿಂಗ್ ಅವರು ವಿದೇಶೀ ಕರೊನಾ ಲಸಿಕೆಗಳಿಗೆ ಅನುಮತಿ ನೀಡಿ ಮತ್ತು ದೇಶೀಯ ಲಸಿಕೆ ಉತ್ಪಾದಕರಿಗೆ ಬೆಂಬಲ ನೀಡಿ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಷವರ್ಧನ್, ಈ ಕೆಲಸವನ್ನು ನಮ್ಮ ಸರ್ಕಾರ ಒಂದು ವಾರಕ್ಕೂ ಮುಂಚೆಯೇ ಮಾಡಿ ಆಗಿದೆ ಎಂದು ವಿವರಗಳನ್ನು ನೀಡಿದ್ದಾರೆ. ಆದಾಗ್ಯೂ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೀವು ನೀಡಿರುವ ಸಲಹೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿರುವ ಹರ್ಷವರ್ಧನ್, "ನಿಮ್ಮ ಅಮೂಲ್ಯ ಸಲಹೆಗಳನ್ನು ಮತ್ತು ಮಾರ್ಗದರ್ಶನವನ್ನು ನಿಮ್ಮ ಪಕ್ಷದವರಿಗೂ ಸ್ವಲ್ಪ ನೀಡಿ" ಎಂದೂ ಕುಟುಕಿದ್ದಾರೆ.
ಆದರೆ ಇಷ್ಟೆಲ್ಲಾ ಹೇಳಿರುವ ಸಚಿವ ಹರ್ಷವರ್ಧನ್ ಅವರು, ಮುಂದಿನ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಲಸಿಕೆಗಳ ಪೂರೈಕೆಗೆ ಆದೇಶ ನೀಡಿದೆ ? ಲಸಿಕಾ ಅಭಿಯಾನದ ತ್ವರಿತ ಸಾಧನೆಗೆ ಸಾಕಷ್ಟು ಲಸಿಕೆಗಳನ್ನು ಆರ್ಡರ್ ಮಾಡಿದ್ದೀರಾ ? ಎಂದು ಬಹಿರಂಗಪಡಿಸಿ ಎಂದು ಸಿಂಗ್ ಕೇಳಿರುವುದಕ್ಕೆ ಏನೂ ಉತ್ತರ ನೀಡಿಲ್ಲ. (ಏಜೆನ್ಸೀಸ್)