ಹಿಂಡೆನ್‌ಬರ್ಗ್ ಆರೋಪ; ಆ.22ರಂದು ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್​

Untitled-design-2024-08-13T164811.813
Published on

ನವದೆಹಲಿ: ಅಮೆರಿಕದ ಸಂಶೋಧನೆ ಮತ್ತು ಹೂಡಿಕೆ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪಗಳ ಕುರಿತು ಸೆಬಿ(ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಗಸ್ಟ್​​ 22ರಂದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್​​ ಮಂಗಳವಾರ(ಆಗಸ್ಟ್​​​ 13) ಪ್ರಕಟಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರ ಸಭೆ ನಡೆಸಿದ್ದೇವೆ. ಸಭೆಯಲ್ಲಿ 56 ಮುಖಂಡರು ಭಾಗವಹಿಸಿದ್ದರು, ಅವರಲ್ಲಿ 38 ಮಂದಿ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಅದಾನಿ ಗ್ರೂಪ್​​ ಮತ್ತು ಸೆಬಿಗೆ ಸಂಬಂಧಿಸಿದ ಹಗರಣವನ್ನು ಚರ್ಚಿಸಿದ್ದೇವೆ ಎಂದು ಸಭೆಯ ಬಳಿಕ ಕೆ.ಸಿ.ವೇಣುಗೋಪಾಲ್​ ತಿಳಿಸಿದರು.

ಆಗಸ್ಟ್​​​ 22ರಂದು ದೇಶಾದ್ಯಂತ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿ ರಾಜ್ಯದ ರಾಜಧಾನಿಯಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯನ್ನು ಘೇರಾವ್ ಮಾಡುತ್ತೇವೆ. ಎರಡು ಬೇಡಿಕೆಗಳಿಗಾಗಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಮೊದಲನೆಯದಾಗಿ ಸೆಬಿ ಅಧ್ಯಕ್ಷೆ ಮಧಬಿ ಪುರಿ ಬುಚ್​ ರಾಜೀನಾಮೆ ನೀಡಬೇಕು. ಮತ್ತೊಂದು ಅದಾನಿ ಗ್ರೂಪ್​ ಹಗರಣದ ತನಿಖೆಗೆ ಜೆಪಿಸಿ ರಚಿಸಬೇಕು. ನಾವು ಈ ಎರಡು ವಿಷಯಗಳಿಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್​ ಬುಚ್​​​ ಕಡಲಾಚೆಯ ಅದಾನಿ ಸಂಸ್ಥೆಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net