

ವಿಜಯವಾಣಿ ಸುದ್ದಿಜಾಲ ಶಿರ್ವ
ವಿದ್ಯಾರ್ಥಿಗಳು ಒತ್ತಡದಿಂದ ಕಷ್ಟಪಟ್ಟು ಓದದೆ ಸಂತಸದಿಂದ ಇಷ್ಟಪಟ್ಟು ಓದುವ ವಾತವರಣವನ್ನು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪಾಲಕರು ನಿರ್ಮಿಸಬೇಕು. ವಿದ್ಯಾರ್ಥಿಗಳು ಅಂಕ ಗಳಿಸುವ ಕಡೆಗೆ ಮಾತ್ರ ಗಮನ ನೀಡದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಪ್ರಜೆಗಳಾಗಬೇಕು ಎಂದು ಉಡುಪಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಹೇಳಿದರು.
ಶಿರ್ವ ಹಿಂದು ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ 2023-24ನೇ ಸಾಲಿನ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕಮದಲ್ಲಿ ಮಾತನಾಡಿದರು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಎಲ್ಲರ ಸಹಕಾರದೊಂದಿಗೆ ಆಡಳಿತ ಮಂಡಳಿ ಪ್ರಯತ್ನಿಸುತ್ತಿದ್ದು, ಸಂಸ್ಥೆಗಳ ಉತ್ತಮ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಸಾಧನೆ ಸಂತಸ ತಂದಿದೆ ಎಂದರು.
ಪದವಿಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ಒಂಬತ್ತು ವಿದ್ಯಾರ್ಥಿಗಳನ್ನು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ಪಡೆದ ವಿಷಯಗಳ ಶಿಕ್ಷಕರನ್ನು ಗೌರವಿಸಲಾಯಿತು. ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ದೀಪಾಲಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ದರ್ಶನ್ ಅನಿಸಿಕೆ ವ್ಯಕ್ತಪಡಿಸಿದರು.
ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕಿ ಶಕಿಲಾ, ಹಳೇ ವಿದ್ಯಾರ್ಥಿ ಸಂಘದ ಹಿಂದಿನ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆತ್ತವರು, ಬೋಧಕ- ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಭಾಸ್ಕರ ಎ. ಪ್ರಾಸ್ತಾವಿಕ ಮಾತನಾಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿ ಸ್ವಾಗತಿಸಿದರು. ಉಪನ್ಯಾಸಕ ಸುಂದರ ಮೇರಾ ವಂದಿಸಿದರು, ಶಿಕ್ಷಕಿ ಸುಪ್ರೀತಾ ಶೆಟ್ಟಿ ಮತ್ತು ಉಪನ್ಯಾಸಕಿ ಯಶೋದಾ ಕಾರ್ಯಕ್ರಮ ನಿರೂಪಿಸಿದರು.