

ನವದೆಹಲಿ: ಲಾಕ್ಡೌನ್ ಸಮಯದಲ್ಲಿ ವಿವಿಧ ತಮಾಷೆಯ ವಿಡಿಯೋಗಳ ಮೂಲಕ ಗಮನಸೆಳೆದಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇದೀಗ ಅನ್ಲಾಕ್ ಸಮಯದಲ್ಲಿ ನಿಶ್ಚಿತಾರ್ಥದ ಮೂಲಕ ಸುದ್ದಿ ಮಾಡಿದ್ದಾರೆ. ಕೋರಿಯೋಗ್ರಾಫರ್ ಧನಶ್ರೀ ಜತೆಗೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಚಾಹಲ್ಗೆ ಟೀಮ್ ಇಂಡಿಯಾ ಸಹ-ಆಟಗಾರ ರೋಹಿತ್ ಶರ್ಮ ಮತ್ತು ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.
'ನಮ್ಮ ಕುಟುಂಬದ ಜತೆಗೆ ನಾವಿಬ್ಬರೂ ಯೆಸ್ ಎಂದೆವು' ಎಂಬ ಕಮೆಂಟ್ನೊಂದಿಗೆ ಶನಿವಾರ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದ ಚಾಹಲ್ಗೆ ರೋಹಿತ್ ಶರ್ಮ ಕಾಲೆಳೆಯುತ್ತಲೇ ಶುಭಾಶಯ ತಿಳಿಸಿದ್ದಾರೆ. ಆರ್ಸಿಬಿ ಅಟಗಾರ ಚಾಹಲ್ 2050ರ ಐಪಿಎಲ್ ವೇಳೆಗೆ ಹೇಗಿರಬಹುದು ಎಂಬ ಚಿತ್ರವನ್ನು ಪ್ರಕಟಿಸಿರುವ ರೋಹಿತ್ ಶರ್ಮ, ನಿಶ್ಚಿತಾರ್ಥಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇನ್ನು ವೀರೇಂದ್ರ ಸೆಹ್ವಾಗ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮೀಮ್ಸ್ ಮೂಲಕ ಚಾಹಲ್ಗೆ ಶುಭಾಶಯ ತಿಳಿಸಿದ್ದಾರೆ. 'ವಾಹ್ ಯುಜಿ-ಚಾಹಲ್, ಅಪ್ದಾ ಕೊ ಅವಸರ್ ಮೈ ಬದಲ್ ಡಾಲಾ, ಕಂಗ್ರಾಚುಲೇಷನ್ಸ್' ಎಂದು ಸೆಹ್ವಾಗ್ ಟ್ವೀಟಿಸಿದ್ದಾರೆ. ಈ ಮೂಲಕ ಚಾಹಲ್ ಲಾಕ್ಡೌನ್ ಸಮಯವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಬ್ಯಾಟುಗಾರ್ತಿ ಡೇನಿಯಲ್ ವ್ಯಾಟ್ ಕೂಡ ಚಾಹಲ್ ನಿಶ್ಚಿತಾರ್ಥಕ್ಕೆ ಅಭಿನಂದನೆ ತಿಳಿಸಿದ್ದಾರೆ. ಚಾಹಲ್ ಅವರ ಇನ್ಸ್ಟಾಗ್ರಾಂ ಪೋಸ್ಟ್ಗೆ ವ್ಯಾಟ್, 'ಕಂಗ್ರಾಟ್ಸ್ ಯೂಜಿ' ಎಂದು ಕಮೆಂಟ್ ಹಾಕಿದ್ದಾರೆ. ಚಾಹಲ್-ವ್ಯಾಟ್ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆಯುವ ಮೂಲಕ ಸುದ್ದಿಯಾಗಿದ್ದರು. ಆದರೆ ನಾವು ಎಂದೂ ಪರಸ್ಪರ ಭೇಟಿಯಾದದ್ದಿಲ್ಲ ಎಂದು ವ್ಯಾಟ್ ಹೇಳಿಕೊಂಡಿದ್ದರು.