

ಬೆಂಗಳೂರು: ಚಲಿಸುವ ಕಾರಿನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಖಂಡಿಸಿರುವ ಮಾಜಿ ಸಿಎಂ ಸಿದ್ದ್ರಾಮಯ್ಯ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕಗ್ಗಲೀಪುರದ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದು ವಾರ ಕಳೆದಿಲ್ಲ ಅಷ್ಟರಲ್ಲೇ ಕೋರಮಂಗಲದ ಯುವತಿಯನ್ನು ನಾಲ್ವರು ರಾಕ್ಷಸರು ಅತ್ಯಾಚಾರಗೈದು ಅಟ್ಟಹಾಸ ಮೆರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಂಡಿದ್ದಾರೆ.
ದುಷ್ಟರನ್ನು, ಸಮಾಜಘಾತುಕರನ್ನು ಹಿಡಿದು ಸದೆಬಡಿಯಬೇಕಿದ್ದ ಬಿಜೆಪಿ ಸರ್ಕಾರ , ಬದಲಿಗೆ ರೌಡಿ ಶೀಟರ್ ಗಳು, ಕೊಲೆಗಡುಕರನ್ನು ರತ್ನಗಂಬಳಿ ಹಾಸಿ, ಸನ್ಮಾನಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರ ಫಲವನ್ನು ಜನಸಾಮಾನ್ಯರು ಉಣ್ಣಬೇಕಿದೆ. ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ ಮೈಮೇಲೆ ಕಂಬಳಿಹುಳ ಬಿದ್ದವರಂತೆ ಕುಣಿದಾಡಿ, ಎಗರಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಸಾಮರ್ಥ್ಯವೇ ಈ ಎಲ್ಲಾ ದೌರ್ಜನ್ಯಗಳಿಗೆ ಕಾರಣ ಎಂದು ಕಿಡಿಕಾರಿದ್ಧಾರೆ.
ಕಠಿಣ ಕ್ರಮದ ಭರವಸೆ ನೀಡುವ ಗೃಹಸಚಿವರು ಸ್ಯಾಂಟ್ರೋ ರವಿ ಹೇಳುವ ವರ್ಗಾವಣೆ ಮಾಡಿಸಲಷ್ಟೇ ಶಕ್ತರು ಎಂಬ ಜನರ ಮಾತು ನಿಜವಾಗಿದೆ. ಸಾಮರ್ಥ್ಯ, ನೈತಿಕತೆ ಈ ಯಾವುದೂ ಇಲ್ಲದೆ ಕುರ್ಚಿಗೆ ಅಂಟಿಕೊಂಡು ಕೂತಿರುವ ಆರಗ ಜ್ಞಾನೇಂದ್ರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕ ಎಂದು ಆಗ್ರಹಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅದಕ್ಷತೆಯಿಂದಾಗಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಹಾದಿ ತಪ್ಪಿದೆ. ಚುನಾವಣಾ ಕಾಲದಲ್ಲಿ ಈ ರೀತಿಯ ಪೊಲೀಸ್ ನಿಷ್ಕ್ರಿಯತೆ ಅಪಾಯಕಾರಿಯಾದುದು. ಆದ್ದರಿಂದ ಚುನಾವಣಾ ಆಯೋಗ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.