ಸಮೀಕ್ಷೆ ಪ್ರಕ್ರಿಯೆಯಲ್ಲಿ ಮುಂದುವರೆದ ಗೊಂದಲ; ವೀರಶೈವ ಮಹಾಸಭೆ, ಒಕ್ಕಲಿಗರ ಸಂಘ ಆರೋಪ,ಲೋಪ ಸರಿಪಡಿಸುವಂತೆ ಒತ್ತಾಯ

census
Published on

ಬೆಂಗಳೂರು: ರಾಜ್ಯದಲ್ಲಿ ಸೆ.22 ರಿಂದ ಹಿಂದುಳಿದ ಆಯೋಗ ನಡೆಸಲು ಮುಂದಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನ ಜಾತಿ ಗಣತಿಯ ಪ್ರಕ್ರಿಯೆಯಕ್ಕು ಗೊಂದಲಗಳು ಮುಂದುವರೆದಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ, ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅಭಾವೀಮ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ, ಕಳೆದ 10 ವರ್ಷಗಳ ಹಿಂದೆ ಕಾಂತರಾಜ್ ಆಯೋಗ ಮಾಡಿದ್ದ ಸಮೀಕ್ಷೆಯು ಹಲವು ಲೋಪಗಳಿಂದ ಕೂಡಿದೆ ಎಂದು ವಿವಿಧ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಅದರ ಬದಲಾಗಿ ಸುಮಾರು 420 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದುಳಿದ ಆಯೋಗ ಹೊಸದಾಗಿ ಮಾಡಲು ಹೊರಟಿರುವ ಸಮೀಕ್ಷೆ ಅದಕ್ಕಿಂತಲೂ ಲೋಪದಿಂದ ಕೂಡಿದ್ದು, ದಿನೇ ದಿನೇ ಗೊಂದಲಗಳು ಮುಂದುವರೆದಿವೆ. ಈಗಾಗಲೇ ಸಮೀಕ್ಷೆ ನಡೆಸಲು ಬಳಸುತ್ತಿರುವ ಸ್‌ಟಾವೇರ್ 6ನೇ ಆವೃತ್ತಿಯಾಗಿದೆ. ಆದರೂ ಲೋಪಗಳನ್ನು ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಾಗಿಲ್ಲ. ಉಪಜಾತಿಗಳಿಗೆ ಕೋಡ್ ನೀಡಿಲ್ಲ. 1500ಕ್ಕೂ ಹೆಚ್ಚಿಗೆ ಇರುವ ಉಪಜಾತಿಗಳನ್ನು ಹುಡುವುದು ಬಹಳ ಕಷ್ಟ. ಈಗಾಗಲೇ ಸಮೀಕ್ಷೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬುದರ ಕುರಿತು ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯ ನಮ್ಮ ವಾದಕ್ಕೆ ಪೂರಕವಾಗಿ ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕಾಗಲಿ, ಸಾರ್ವಜನಿಕವಾಗಿ ಸೋರಿಕೆಯಾಗದಂತೆ ಗೌಪ್ಯತೆ ಕಾಪಾಡಲು ಸೂಚನೆ ನೀಡಿ ಈ ಸಂಬಂಧ 24 ಗಂಟೆಯಲ್ಲಿ ಪ್ರಮಾಣಪತ್ರ ನೀಡುವಂತೆ ಗುರುವಾರವೇ ಸೂಚಿಸಿತ್ತು. ಆದರೆ ಈ ವರೆಗೆ ಪ್ರಮಾಣಪತ್ರವನ್ನು ಆಯೋಗ ಹೈಕೋರ್ಟಿಗೆ ಸಲ್ಲಿಸಿಲ್ಲ. ಆಯೋಗ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದರೂ; ಸಮೀಕ್ಷೆ ನಡೆಸುವ ಸಿಬ್ಬಂದಿಗಳಿಗಾದ ತೊಂದರೆ ನಿವಾರಿಸಲು ನೇರವಾಗಿ ಸಿಎಂ ಸಭೆ ನಡೆಸುತ್ತಾರೆ. ಕೆಲ ಸಚಿವರು ಆರೋಪಗಳಿಗೆ ಉತ್ತರಿಸಿ ಸರಿಪಡಿಸುವ ಭರವಸೆ ನೀಡುತ್ತಾರೆ. ಸಮೀಕ್ಷೆ ನಡೆಸುತ್ತಿರುವುದು ಆಯೋಗವೇ ಅಥವಾ ಸರ್ಕಾರವೇ ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಸಮೀಕ್ಷೆ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಎದುರಾಗಿರುವ ಲೋಪ-ದೋಷಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂಬುದಷ್ಟೆ ನಮ್ಮ ವಾದ ಎಂದರು. ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ಈಗಾಗಲೇ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಸೂಚನೆಗಳನ್ನು ನೀಡಿದೆ. ಜನರ ಮೇಲೆ ಒತ್ತಡ ಹೇರುವಂತಿಲ್ಲ, ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಇತ್ಯಾದಿ. ಆದರೆ ಸಮುದಾಯದ ಜನರು ಯಾವುದೇ ಕಾರಣಕ್ಕೂ ಸಮೀಕ್ಷೆಯಿಂದ ಹೊರಗುಳಿಯಬಾರದು. ಸ್ಪಷ್ಟವಾಗಿ ಎಲ್ಲ ಮಾಹಿತಿಯನ್ನು ನೀಡಬೇಕು. ಇದರಿಂದ ಸಮುದಾಯದ ಸಂಖ್ಯೆ ತಿಳಿಯುತ್ತದೆ. ಕೆಲವು ಕಡೆ ಸಮೀಕ್ಷಕರು ತಾವೇ ಮಾಹಿತಿಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನು ಕೆಲವೆಡೆ ಜನರು ನೀಡಿದ ಮಾಹಿತಿಗೆ ಭಿನ್ನವಾಗಿ ದಾಖಲಿಸುತ್ತಿದ್ದಾರೆ. ಆದ್ದರಿಂದ ಆಯೋಗ ಸಿಬ್ಬಂಧಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಅಭಾವಿಮ ಪದಾಧಿಕಾರಿಗಳಾದ ನಟರಾಜ್, ವಿಜಯ ಪಾಟೀಲ್, ಮಾಲತೇಶ, ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಅಶೋಕ ಗೌಡ್ರು, ಎಂ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಕಸದ ಬುಟ್ಟಿಗೆ ಸೇರುವ ಆತಂಕ

3.5 ಕೋಟಿ ಜನಸಂಖ್ಯೆ ಇರುವ ತೆಲಂಗಾಣದಲ್ಲಿ ಸಮೀಕ್ಷೆಗೆ 65 ದಿನ ತೆಗೆದುಕೊಂಡಿದ್ದಾರೆ. ಅದರ ಎರಡುಪಟ್ಟು ಜನಸಂಖ್ಯೆ ಇರುವ ಕರ್ನಾಟಕದಲ್ಲಿ 15 ದಿನದಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಕಾರ್ಯದರ್ಶಿ ಎಂ.ನಾಗರಾಜ್ ಪ್ರಶ್ನಿಸಿದ್ದಾರೆ. ಈಗಾಗಲೇ 6 ದಿನ ಮುಗಿದಿದ್ದು ಕೇವಲ 12 ಲಕ್ಷ ಮಾತ್ರ ಗಣತಿ ಆಗಿದೆ ಎನ್ನಲಾಗುತ್ತಿದೆ. ನಾವಶ್ಯಕವಾಗಿ ಅವಸರದಲ್ಲಿ ಸಮೀಕ್ಷೆ ಮಾಡುವುದರಿಂದ ತಪ್ಪು ಮಾಹಿತಿ ದಾಖಲಾಗುತ್ತದೆ. ಇದರಿಂದ ವರದಿ ಅಸಮರ್ಪಕವಾಗಿ ಮತ್ತೆ ಕಸದಬುಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net