

ವಿಜಯಪುರ: ತಂತ್ರಜ್ಞಾನದ ಇಂದಿನ ಯುಗದಲ್ಲಿ ಡಿಜಿಟಲ್ ಅಪರಾಧಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಅಂತರ್ಜಾಲದ ಬಳಕೆಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದ ಬಿಎಲ್‌ಡಿಇ ಸ್ವಾಯತ್ತ ವಿಶ್ವವಿದ್ಯಾಲಯದ ಕೇಂದ್ರಿಯ ಗ್ರಂಥಾಲಯದ ಸಭಾಂಗಣದಲ್ಲಿ ಕಾನೂನು ಶಾಲೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸೈಬರ್ ಕಾನೂನು ಮತ್ತು ಸೈಬರ್ ಅಪರಾಧಗಳ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ-2025’ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸೈಬರ್ ಅಪರಾಧಗಳು ಇಂದಿನ ಕಾಲದಲ್ಲಿ ಒಂದು ಸವಾಲಾಗಿದೆ. ಸೈಬರ್ ಅಪರಾಧಗಳು ಯಾವುದೇ ಗಡಿಯನ್ನು ಹೊಂದಿಲ್ಲ. ಹಲವಾರು ಅನಕ್ಷರಸ್ಥರು ಹಾಗೂ ಅಕ್ಷರಸ್ಥರು ಸಹ ಈ ಸೈಬರ್ ಅಪರಾಧ ಹಾಗೂ ವಂಚನೆಗೆ ಬಲಿಯಾಗಿರುವ ಅನೇಕ ಪ್ರಕರಣಗಳನ್ನು ಕಾಣಬಹುದಾಗಿದೆ ಎಂದರು.
ಇಂಟರ್ನೆಟ್ ಹೊಂದಿರುವ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿರುವ ಪರಿಣಾಮ ನಾಕ್ರೋಟಿಕ್ ಡ್ರಗ್ಸ್, ಡಾರ್ಕ್ವೆಬ್, ಮಾನವ ಕಳ್ಳಸಾಗಾಣಿಕೆಗಳಂತಹ ಅಪರಾಧ ಹಾಗೂ ವಂಚನೆವೆಸಗಲು ಅಪರಾಧಿಗಳಿಗೆ ಆನ್‌ಲೈನ್ ನಲ್ಲಿ ಅನೇಕ ಸಾಧನಗಳು ಲಭ್ಯವಿವೆ. ಸೈಬರ್ ಅಪರಾಧಗಳನ್ನು ಅಲ್ಲಗಳೆಯದೇ ಅವುಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿ ವಂಚಿತರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಯಾವುದೇ ಸೈಬರ್ ಅಪರಾಧಗಳು ಜರುಗಿದಲ್ಲಿ ಪ್ರಕರಣ ದಾಖಲಿಸಿ ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸಲು ಸುಮಾರು 100 ನುರಿತ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೂಲಕ ಜಿಲ್ಲಾದ್ಯಂತ ಸೈಬರ್ ಅಪರಾಧ ಹಾಗೂ ಅವುಗಳ ಪ್ರಕಾರಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ನೀಡಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿವಾರ ಸೈಬರ್ ಅಪರಾಧಗಳ ಕುರಿತು ಜಾಗೃತಿ ಅಭಿಯಾನ ಕೈಗೊಳ್ಳುವುದರಿಂದ ವಿದ್ಯಾರ್ಥಿಗಳು ಜಾಗೃತಿ ಹೊಂದುವುದರ ಜೊತೆಗೆ ಅವರ ಪಾಲಕ ಮತ್ತು ಪೋಷಕರು ಸಹ ಅರಿವು ಹೊಂದಲು ಸಹಕಾರಿಯಾಗಿದೆ ಎಂದರು.
ಸೈಬರ್ ಅಪರಾಧಕ್ಕೆ ಅಥವಾ ವಂಚನೆಗೆ ಬಲಿಯಾದರೆ ಧೈರ್ಯವಾಗಿ 1930 ಉಚಿತ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಿ ಎಂದ ಎಸ್‌ಪಿ ನಿಂಬರಗಿ ಅವರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಸುವಂತೆ ಅವರು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಕರೆ ನೀಡಿದರು.
ಬಿಎಲ್‌ಡಿಇ ಸ್ವಾಯತ್ತ ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ವೈ.ಎಂ. ಜಯರಾಜ ಮಾತನಾಡಿ, ಮನುಷ್ಯನ ಬೆಳವಣಿಗೆ ಹಾಗೂ ವಿಕಾಸವಾದಂತೆ ತಂತ್ರಜ್ಞಾನವು ಸಹ ಬೆಳೆದು ಸೈಬರ್ ಅಪರಾಧಗಳು ಹೆಚ್ಚಾಗಿವೆ ಕಂಡುಬರುತ್ತಿವೆ ಎಂದು ಹೇಳಿದರು.
ವೈದ್ಯಕೀಯ, ವ್ಯಾಪಾರ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಂತರ್ಜಾಲದ ಬಳಕೆದಾರರು ಹೆಚ್ಚಾಗಿದ್ದಾರೆ. ವಂಚಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ಸೌಲಭ್ಯ ನೀಡುವ ಆಸೆ ಹುಟ್ಟಿಸಿ ವಂಚಿಸುವ ಪ್ರಕರಣಗಳು, ಅಂತರ್ಜಾಲದ ಮೂಲಕ ಹೂಡಿಕೆಯ ನೆಪದಲ್ಲಿ ಹಣ ಪಡೆದು ವಂಚಿಸುವ ಪ್ರಕರಣಗಳು, ಡಿಜಿಟಲ್ ಅರೆಸ್ಟ್ ಸಂಬಂಧಿತ ವಂಚನೆಗಳು, ಸಿಮ್ ಸ್ವಾಪಿಂಗ್ ಪ್ರಕರಣಗಳು, ಹ್ಯಾಕಿಂಗ್ ಪ್ರಕರಣಗಳು ಸೈಬರ್ ಅಪರಾಧಕ್ಕೆ ಉದಾಹರಣೆಯಾಗಿವೆ ಎಂದು ಹೇಳಿದರು.
ನಮ್ಮ ಹಿರಿಯರು ಸಾಮಾಜಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಗಳನ್ನು ಎದುರಿಸಿದರು. ಪ್ರಸ್ತುತ ದಿನಗಳಲ್ಲಿ ನಾವು ಡಿಜಿಟಲ್ ಕ್ರಾಂತಿ ಹಾಗೂ ಸೈಬರ್ ವಂಚನೆಗಳನ್ನು ಎದುರಿಸುತ್ತಿದ್ದೇವೆ. ಸೈಬರ್ ಅಪರಾಧಗಳಿಗೆ ಅಂಜದೇ ಅವುಗಳಿಂದ ಜಾಗೃತರಾಗಿದ್ದು, ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಡಾ. ಸುನೀಲ್ ಬಗಾಡೆ, ಹೊಳೆನರಸೀಪುರದ ಸರ್ಕಾರಿ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಂ.ಕೆ. ಮಾಟೋಳ್ಳಿ, ಬೆಂಗಳೂರಿನ ಸೈಬರ್ ಕ್ರೈಂ ವಿಭಾಗದ ಸಿಐಡಿ ಡಿವೈಎಸ್‌ಪಿ, ಯಶವಂತ್‌ಕುಮಾರ, ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮತ್ತು ಆಡಳಿತ ಮಹಾವಿದ್ಯಾಲಯದ ಕಂಪ್ಯೂಟರ್ ಇಂಜಿನಿಯರ್ ವಿಭಾಗದ ಪ್ರಾಧ್ಯಾಪಕ ಡಾ. ಅನಂತಪ್ರಭು, ಪ್ರಾಂಶುಪಾಲ ಡಾ. ರಘುವೀರ ಕುಲಕರ್ಣಿ, ಸಹಾಯಕ ಪ್ರಾಧ್ಯಾಪಕ ಕೆ.ಶೇಷಾದ್ರಿ ಮತ್ತಿತರರಿದ್ದರು.