16ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹಕ್ಕೊತ್ತಾಯ ಸಮಾವೇಶ

census
Published on

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಮಂಡಿಸಿ, ಅದರನ್ವಯ ಮುಂದಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ಬುಧವಾರ (ಅ. 16) ಸ್ವಾತಂತ್ರ್ಯ ಉದ್ಯಾನದಲ್ಲಿ "ಬೃಹತ್​ ಹಕ್ಕೊತ್ತಾಯ ಸಮಾವೇಶ' ಏರ್ಪಡಿಸಲು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ನಿರ್ಧರಿಸಿದೆ.

18ರಂದು ನಡೆಸಲಿರುವ ಸಚಿವ ಸಂಪುಟದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವರದಿ ಅಂಗೀಕರಿಸಿ ಬಿಡುಗಡೆ ಮಾಡಬೇಕು. ವರದಿ ಮಂಡಿಸಿದ್ದ ವೇಳೆ ಕೆಲವರು ಆಕ್ಷೇಪ ಎತ್ತಿ ಅದನ್ನು ಒಪ್ಪಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಅಭಿಪ್ರಾಯ ಸಂಪುಟ ಸಭೆಗೆ ಇದೆ. ಆದರೆ, ವರದಿಯನ್ನು ಮಂಡಿಸಬಾರದು ಎಂಬುದು ಗೂಂಡಾ ಪ್ರವೃತ್ತಿಯಾಗಿದೆ. ಇಂತಹ ಬೆದರಿಕೆಗೆ ತಲೆಕೆಡಿಸಿಕೊಳ್ಳದೆ ವರದಿ ಮಂಡನೆಗೆ ಸಿಎಂ ಮುಂದಾಗಬೇಕು ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವರದಿ ಬಗ್ಗೆ ಅಪಸ್ವರ ಬೇಡ:

ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್​ ಮಾತನಾಡಿ, ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮೀನ-ಮೇಷ ಎಣಿಸುವ ಅಗತ್ಯವಿಲ್ಲ. ಸಿಎಂ ಅವರು "ಇದು ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀೆಯಲ್ಲ. ರಾಜ್ಯದ ಏಳೂವರೆ ಕೋಟಿ ಕನ್ನಡಿಗರ ಸಮೀಕ್ಷೆಯಾಗಿದ್ದು, ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದಿದ್ದಾರೆ. ಈ ಮಾತಿಗೆ ಸಿಎಂ ಬದ್ಧರಾಗಿ ವರದಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಎನ್​.ಅನಂತನಾಯ್ಕ್​, ಎಣ್ಣೆಗೆರೆ ಆರ್​.ವೆಂಕಟರಾಮಯ್ಯ, ಪ್ರೊ.ಎನ್​.ವಿ. ನರಸಿಂಹಯ್ಯ, ಬಿ.ಟಿ. ಲಲಿತಾ ನಾಯಕ್​, ಚಿಂತಕ ಡಾ. ಎಸ್​. ಜಾಫೆಟ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net