

ಬೆಂಗಳೂರು:ಪಕ್ಷದ ನಿಯಮ ಉಲ್ಲಂಘಿಸಿ ಸಚಿವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದು, ಇಂಥ ಚರ್ಚೆಗೆ ತಡೆ ಹಾಕಬೇಕು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂತ ಆತಂಕಿತವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ, ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಸಾರ
1. ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ವಿಷಯ ಚರ್ಚೆಯಾಗುತ್ತಿದೆ.
2. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದ ಪಕ್ಷದ ಇಮೇಜ್‌ಗೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.
3. ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹಾಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ.
4. ಸಚಿವರು ಜನರ ಸಮಸ್ಯೆ ಆಲಿಸುವುದು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು.