ಪತ್ರಿಕಾಭವನ ಟ್ರಸ್ಟ್ ವರ್ತನೆ ಖಂಡಿಸಿ ದೂರು

presss
Published on

ಮಡಿಕೇರಿ: ಪತ್ರಿಕಾಭವನ ಟ್ರಸ್ಟ್ ಅವರ ವರ್ತನೆಯನ್ನು ಖಂಡಿಸಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು, ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ವೆಂಕಟರಾಜ್ ಅವರನ್ನು ಭೇಟಿ ಮಾಡಿ ದೂರು ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಪತ್ರಿಕಾಭವನದಲ್ಲಿ ಅಳವಡಿಸಲಾಗಿದ್ದ ಸಂಘದ ನಾಮಪಲಕವನ್ನು ಪತ್ರಿಕಾಭವನ ಟ್ರಸ್ಟ್‌ನವರು ತೆರವು ಮಾಡಿದ ಘಟನೆ ನಡೆದಿತ್ತು. ಇದರ ಜತೆಗೆ ಸಂಘದ ಕಚೇರಿಯ ಕೀಲಿಕೈಯನ್ನು ಪತ್ರಿಕಾಭವನದ ಟ್ರಸ್ಟಿಗಳು ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಕಚೇರಿಯನ್ನು ತೆರವು ಮಾಡುವಂತೆ ಈ ಹಿಂದೆ ಸಂಘಕ್ಕೆ ನೋಟಿಸ್ ನೀಡಿದ್ದರು. ಇದರ ವಿರುದ್ಧ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಸೇರಿ ಪತ್ರಿಕಾಭವನದಲ್ಲಿ ನೂತನ ನಾಮಪಲಕವನ್ನು ಅಳವಡಿಸಿದ ಬಳಿಕ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಸೋಮವಾರ ಸಂಜೆ ಪತ್ರಿಕಾಭವನಕ್ಕೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಮಂಗಳವಾರ ಸಂಘ ಹಾಗೂ ಟ್ರಸ್ಟ್‌ನವರನ್ನು ಪೊಲೀಸ್ ಠಾಣೆಗೆ ಕರೆದು ಡಿವೈಎಸ್ಪಿ ಸೂರಜ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಅಕ್ರಮವಾಗಿ ನಾಮಪಲಕ ತೆರವು ಹಾಗೂ ಕಚೇರಿ ಕೀಲಿಕೈ ನೀಡದೆ ಸತಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಕೂಡಲೇ ಯಥಾಸ್ಥಿತಿಯಂತೆ ಕಚೇರಿಯನ್ನು ತೆರೆದು ಸಂಘದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಲಾಯಿತು.

ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಂಘದ ಪ್ರಮುಖರು, ಕಟ್ಟಡದಲ್ಲಿ ಯಾವುದೇ ಕಾರಣಕ್ಕೂ ಮೇಲಂತಸ್ತು ಕಟ್ಟಲು ಅವಕಾಶ ನೀಡಬಾರದು. ಜೊತೆಗೆ ಸರ್ಕಾರ ಸಂಘದ ಕಟ್ಟಡಕ್ಕೆ ನೀಡಿರುವ ರೂ.೧೨.೫೦ ಲಕ್ಷ ಅನುದಾನವನ್ನು ನೀಡಬಾರದೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಸವಿತಾರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ, ರಾಜ್ಯ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಮಿತಿ ನಿರ್ದೇಶಕ ಮಂಜುನಾಥ್, ಸಂಘದ ಕಾನೂನು ಸಲಹೆಗಾರರಾದ ಪಿ.ಕೃಷ್ಣಮೂರ್ತಿ, ಜಿಲ್ಲಾ ಸಂಘದ ಉಪಾಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ತಾಲೂಕು ಸಂಘಗಳ ಅಧ್ಯಕ್ಷರು, ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net