ಮೂರು ಮೂರ್ತಿಗಳ ನಡುವೆ ಪೈಪೋಟಿ: ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹ ಆಯ್ಕೆಗೆ ಶುರುವಾಗಿದೆ ಮತದಾನ…

ram-1-1
Published on

ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ರಾಮ ಲಲ್ಲಾ ವಿಗ್ರಹ ಯಾವುದೆಂಬದನ್ನು ನಿರ್ಧರಿಸಲು ಡಿ. 29ರಂದು ಮತದಾನ ನಡೆಯಲಿದೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದ್ದು, ಇದಕ್ಕೂ ಮುಂಚೆ ವಿಗ್ರಹದ ಆಯ್ಕೆ ನಡೆಯಲಿದೆ. ಮೂರು ಮೂರ್ತಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಟ್ರಸ್ಟ್‌ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆಯಲ್ಲಿ ಈ ವಿಗ್ರಹ ಆಯ್ಕೆಗಾಗಿ ಮತದಾನವನ್ನು ನಡೆಸಲಾಗುತ್ತದೆ. ಬೇರೆ ಬೇರೆ ಶಿಲ್ಪಿಗಳು ರಚಿಸಿರುವ ಮೂರು ವಿಭಿನ್ನ ಮೂರ್ತಿಗಳ ನಡುವೆ ಆಯ್ಕೆ ನಡೆಯಲಿದೆ. ಈ ಮೂರು ಮೂರ್ತಿಗಳ ಪೈಕಿ ಯಾವ ವಿಗ್ರಹಕ್ಕೆ ಹೆಚ್ಚು ಮತಗಳು ಬೀಳುತ್ತವೆಯೋ ಆ ವಿಗ್ರಹವನ್ನು ಪ್ರತಿಷ್ಠಾಪನಾ ಸಮಾರಂಭದ ಸಮಯದಲ್ಲಿ ಗರ್ಭ ಗುಡಿಯೊಳಗೆ ಪ್ರತಿಷ್ಠಾಪಿಸಲಾಗುತ್ತದೆ.

ಐದು ವರ್ಷದ ರಾಮ ಲಲ್ಲಾನನ್ನು ಚಿತ್ರಿಸುವ 51 ಇಂಚು ಎತ್ತರದ ರಾಮನ ವಿಗ್ರಹಗಳು ಇವುಗಳಾಗಿದ್ದು, ಈ ಪೈಕಿ ಒಂದನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. "ಅತ್ಯುತ್ತಮ ದೈವಿಕತೆಯನ್ನು ಹೊಂದಿರುವ ಮತ್ತು ಮಗುವಿನಂತೆ ಕಾಣುವ ಮೂರ್ತಿಯನ್ನು ಆಯ್ಕೆ ಮಾಡಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಪ್ರಾಣ ಪ್ರತಿಷ್ಠಾ ಸಮಾರಂಭ ಸಮೀಪಿಸುತ್ತಿದ್ದಂತೆ, ಶ್ರೀರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಜನ್ಮಭೂಮಿ ಪಥ ಮತ್ತು ದೇವಾಲಯ ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

ಏಳು ದಿನಗಳ ಕಾಲ ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 16 ರಂದು ದೇವಾಲಯದ ಟ್ರಸ್ಟ್ ನೇಮಿಸಿದ ಆತಿಥೇಯರು ನಡೆಸುವ ಪ್ರಾಯಶ್ಚಿತ್ತ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಸಮಾರಂಭದಲ್ಲಿ ಭಗವಾನ್ ರಾಮನ ಮಗುವಿನಂತಹ ವಿಗ್ರಹವನ್ನು ಹೊತ್ತ ಮೆರವಣಿಗೆ, ಧಾರ್ಮಿಕ ಸ್ನಾನ, ಪೂಜೆ ಮತ್ತು ಅಗ್ನಿ ಆಚರಣೆ ಮುಂತಾದ ಧಾರ್ಮಿಕ ವಿಧಿಗಳು ನಡೆಯುತ್ತವೆ.

ಜನವರಿ 22 ರಂದು, ಬೆಳಗಿನ ಪೂಜೆಯ ನಂತರ, ಮಧ್ಯಾಹ್ನದ ಸಮಾರಂಭದಲ್ಲಿ ಮಂಗಳಕರವಾದ 'ಮೃಗಶಿರಾ ನಕ್ಷತ್ರ'ದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net