

ಕಾರವಾರ: ಶಿರೂರು ಗುಡ್ಡ ಕುಸಿತ (Landslide) ದಲ್ಲಿ ನಾಪತ್ತೆಯಾದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರ ನೀಡಲು ಮುಖ್ಯಮಂತ್ರಿ ಕಾರ್ಯಾಲಯ ಅನುಮತಿ ನೀಡಿದ್ದು, ಶೀಘ್ರದಲ್ಲಿ ಕುಟುಂಬಸ್ಥರಿಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಜು.16 ರಂದು ಅಂಕೋಲಾ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಗುಡ್ಡ ಕುಸಿದು(Landslide), ಹೆದ್ದಾರಿ ವಾಹನ ಸಂಚಾರ ಬಂದಾಗಿತ್ತು. ಸಾಕಷ್ಟು ಮಣ್ಣು ನದಿಯಲ್ಲಿ ತುಂಬಿಕೊಂಡಿತ್ತು. ದುರಂತದಲ್ಲಿ 11 ಜನ ನಾಪತ್ತೆಯಾಗಿದ್ದರು. ಅದರಲ್ಲಿ 8 ಜನರ ಶವಗಳು ನದಿಯಲ್ಲಿ ಸಿಕ್ಕಿದ್ದವು. 72 ದಿನಗಳ ನಂತರ ಗಂಗಾವಳಿ ನದಿಯಲ್ಲಿ ಬಾರ್ಜ್ ಮೂಲಕ ಕಾರ್ಯಾಚರಣೆ ನಡೆಸಿ, ಕೇರಳ ಮೂಲದ ಅರ್ಜುನ್ ಎಂಬ ಲಾರಿ ಚಾಲಕ ಮೃತ ದೇಹ ಪತ್ತೆ ಹಚ್ಚಲಾಗಿತ್ತು. ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿತ್ತು. ಹೊರ ರಾಜ್ಯದವರೂ ಸೇರಿ ಮೃತ ದೇಹ ಸಿಕ್ಕ ಎಲ್ಲರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಪರಿಹಾರವನ್ನು ಇದುವರೆಗೆ ನೀಡಲಾಗಿದೆ. (Landslide)ಘಟನೆಯಲ್ಲಿ ನಾಪತ್ತೆಯಾದವರಲ್ಲಿ ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಎಂಬುವರ ಮೃತ ದೇಹ ಅಥವಾ ದೇಹದ ಭಾಗಗಳು ಇದುವರೆಗೂ ಪತ್ತೆಯಾಗಿಲ್ಲ. ಹಾಗಾಗಿ ಎನ್ಡಿಆರ್ಎಫ್ ನಿಯಮಾವಳಿಯಂತೆ ಅವರಿಗೆ ಪರಿಹಾರ ನೀಡುವುದು ಕಷ್ಟವಾಗಿತ್ತು. ಇದರಿಂದ ಜಿಲ್ಲಾಽಕಾರಿ ಕಚೇರಿಯಿಂದ ಸರ್ಕಾರಕ್ಕೆ ಪತ್ರವೊಂದನ್ನು ಬರೆದು, ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪರಿಹಾರ ವಿತರಿಸಲು ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಪೊಲೀಸ್ ತನಿಖೆಯ ವಿವರಗಳನ್ನು ಸಲ್ಲಿಸಲಾಗಿತ್ತು. ಅದಕ್ಕೆ ಸಿಎಂ ಕಚೇರಿ ಒಪ್ಪಿದ್ದು, ಪರಿಹಾರ ವಿತರಣೆ ಮಾಡುವಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಕುಟುಂಬಗಳ ಬ್ಯಾಂಕ್ ಖಾತೆಯ ವಿವರಗಳನ್ನೊಳಗೊಂಡ ಮಾಹಿತಿಯನ್ನು ಜಿಲ್ಲಾಡಳಿತದಿಂದ ತರಿಸಿಕೊಂಡಿದೆ. ಶೀಘ್ರ ಜಿಲ್ಲಾಧಿಕಾರಿ ಪಿಡಿ ಖಾತೆಗೆ ಹಣ ಜಮಾ ಮಾಡುವ ಸಾಧ್ಯತೆ ಇದೆ.
ಶಿರೂರಿನ ಗಂಗಾವಳಿ ನದಿಯಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮಾನವನ ದೇಹದ ಎರಡು ಎಲುಬುಗಳು ಪತ್ತೆಯಾಗಿದ್ದವು. ಅವುಗಳ ಯಾರವು ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್ಎ ಪರೀಕ್ಷೆಗೆ ಹುಬ್ಬಳ್ಳಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳಿಸಲಾಗಿತ್ತು. ಆದರೆ, ಮಾದರಿ ಕಳಿಸಿ ತಿಂಗಳಾಗುತ್ತಾ ಬಂದರೂ ವರದಿ ಬಂದಿಲ್ಲ.
ಮಾದರಿಯನ್ನು ಕಳಿಸುವ ಪೂರ್ವ ಅಂಕೋಲಾದ ವೈದ್ಯರು ಮಾಡಿದ ಎಡವಟ್ಟಿನಿಂದ ಪ್ರಾಥಮಿಕ ಪರೀಕ್ಷೆಗಳಲ್ಲಿ ಎಲುಬುಗಳು ಯಾರವು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯೋಗಾಲಯ ತಿಳಿಸಿದೆ. ಮಾದರಿಯಿಂದ ಡಿಎನ್ಎ ವರದಿ ಸಿಗದೆಯೂ ಹೋಗುವ ಸಾದ್ಯತೆಗಳೂ ಇವೆ ಎನ್ನುತ್ತಾರೆ ತಜ್ಞರು.
ಮಾದರಿ ಪಡೆದ ಪ್ರಯೋಗಾಲಯಕ್ಕೆ ವರದಿ ನೀಡಲು 3 ರಿಂದ 6 ತಿಂಗಳು ಕಾಲಾವಕಾಶವಿರುತ್ತದೆ. ಕಾಯುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಮಾದರಿಗಳ ಡಿಎನ್ಎ ಪತ್ತೆ ಮಾಡಲು ನಮಗೆ ಇನ್ನಷ್ಟು ಕಾಲಾವಕಾಶ ಬೇಕಿದೆ. ಎಲ್ಲ ಪರೀಕ್ಷೆಗಳನ್ನು ಮಾಡಿದ ನಂತರವೇ ಏನೆಂದು ಹೇಳಬಹುದು ಎಂದು ಹುಬ್ಬಳ್ಳಿಯ ಪ್ರಯೋಗಾಲಯದ ಡಿಡಿ ಡಾ.ರಾಮಚಂದ್ರ ತಿಳಿಸಿದ್ದಾರೆ.
ಶಿರೂರು ದುರಂತದಲ್ಲಿ ನಾಪತ್ತೆಯಾದವರ ಕುಟುಂಬಗಳಿಗೂ ಪರಿಹಾರ ಒದಗಿಸಲು ಸಿಎಂ ಕಚೇರಿ ಒಪ್ಪಿಗೆ ನೀಡಿದೆ. ಡಿಸಿ ಪಿಡಿ ಖಾತೆಗೆ ಹಣ ಜಮಾ ಆದ ತಕ್ಷಣ, ಕುಟುಂಬಸ್ಥರಿಂದ ಅಫಿಡಾವಿಟ್ ಒಂದನ್ನು ಪಡೆದು, ತಲಾ 5 ಲಕ್ಷ ರೂ.ಗಳನ್ನು ಅವರ ಖಾತೆಗಳಿಗೆ ಹಸ್ತಾಂತರಿಸಲಾಗುವುದು. ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ https://www.vijayavani.net/exciseinspector-constable-suspended https://www.vijayavani.net/exciseinspector-constable-suspended