

ಬೆಂಗಳೂರು: ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಲ ತುಂಬಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಗ್ರಾಹಕರ ಹಿತ ರಕ್ಷಣೆಯ ಉದ್ದೇಶದಿಂದ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ದೇಶದ ಎಲ್ಲ ಸಹಕಾರಿ ಬ್ಯಾಂಕ್ಗಳು ಮತ್ತು ಬಹು-ರಾಜ್ಯ ಸಹಕಾರಿ ಬ್ಯಾಂಕ್ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಉಸ್ತುವಾರಿಗೆ ಒಳಪಡಿಸಲು ನಿರ್ಧರಿಸಿದೆ. ಈ ಕುರಿತ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
1482- ದೇಶದಲ್ಲಿರುವ ನಗರ ಸಹಕಾರಿ ಬ್ಯಾಂಕ್ಗಳು. 58 - ಬಹು ರಾಜ್ಯ ಸಹಕಾರಿ ಬ್ಯಾಂಕ್ಗಳು. 8.60 ಕೋಟಿ- ಈ ಬ್ಯಾಂಕ್ಗಳಲ್ಲಿರುವ ಠೇವಣಿದಾರರು.
ಪಂಜಾಬ್-ಮಹಾರಾಷ್ಟ್ರ ಬ್ಯಾಂಕ್, ಬೆಂಗಳೂರಿನ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಇತ್ತೀಚೆಗೆ ನಡೆದ ವಂಚನೆ ಪ್ರಕರಣದಿಂದ ಹತ್ತಾರು ಸಾವಿರ ಗ್ರಾಹಕರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬ್ಯಾಂಕ್ಗಳ ಮೇಲೆ ನಿರ್ಬಂಧ ಹೇರಿದ್ದ ಕಾರಣ ಠೇವಣಿದಾರರು ಹಣ ವಾಪಸು ಪಡೆಯಲು ಸಾಧ್ಯವಾಗಿರಲಿಲ್ಲ. ಮುಂದೆ ಇಂಥ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಹೊಸ ಸುಗ್ರೀವಾಜ್ಞೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಈ ಕಾಯ್ದೆ ಜಾರಿಗೆ ಬಂದ ಬಳಿಕ ಎಲ್ಲ ಸಹಕಾರಿ ಬ್ಯಾಂಕುಗಳು ಆರ್ಬಿಐ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಸಂಭಾವ್ಯ ಅಕ್ರಮ, ಅವ್ಯವಹಾರಗಳ ಪತ್ತೆಗೆ ಸಹಕಾರಿಯಾಗಲಿದೆ. ಬ್ಯಾಂಕ್ಗಳ ಠೇವಣಿದಾರರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವುದು ಈ ಕ್ರಮದ ಉದ್ದೇಶ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಸಾಲನೀಡಿಕೆಗೆ ಸಹಕಾರಿಯಾಗಲಿದೆ: ಸಹಕಾರಿ ಬ್ಯಾಂಕುಗಳು ಆರ್ಬಿಐ ವ್ಯಾಪ್ತಿಗೆ ಬಂದಿರುವುದು ಉತ್ತಮ ಬೆಳವಣಿಗೆ. ಯಾವುದೇ ಆತಂಕವಿಲ್ಲದೇ ಗ್ರಾಹಕರು ಹಣ ಹೂಡಿಕೆ ಮಾಡಬಹುದು ಎಂದು ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ. ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇರಿಸಿರುವ ಗ್ರಾಹಕರ ಹಿತವನ್ನು ಕಾಯುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು. ಸಾಲ ನೀಡಲು ಸಹಕಾರಿಯಾಗಿದೆ. ಸದ್ಯ ಸಹಕಾರಿ ಬ್ಯಾಂಕ್ಗಳಿಗೆ ಮಿತಿಗಿಂತ ಹೆಚ್ಚು ಸಾಲ ನೀಡಲು ಅವಕಾಶವಿಲ್ಲ. ಎಮ್ಸ್ಎಮ್ಗಳಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಸಾಲ ನೀಡುವಂತೆ ಉಳಿದ ಬ್ಯಾಂಕ್ಗೆ ಸೂಚಿಸಲಾಗಿತ್ತು. ಆದರೆ, ಎಮ್ಸ್ಎಮ್ ವಹಿವಾಟಿನ ಮೇಲೆ ಶೇ.30ರವರೆಗೆ ಸಾಲ ನೀಡಬಹುದು ಎಂದು ಬ್ಯಾಂಕ್ಗಳಿಗೆ ಆರ್ಬಿಐ ಬ್ಯಾಂಕ್ಗಳಿಗೆ ಸುತ್ತೋಲೆ ಹೊರಡಿಸಿತ್ತು. ಆದರೆ, ಕೋ-ಆಪರೇಟಿವ್ ಬ್ಯಾಂಕ್ಗಳಿಗೆ ಇದು ಅನ್ವಯಿಸುತ್ತಿರಲಿಲ್ಲ. ಈಗ ಆರ್ಬಿಐ ಅಡಿ ಬರುವುದರಿಂದ ಕೋ-ಆಪರೇಟಿವ್ ಬ್ಯಾಂಕ್ಗೂ ಈ ರೀತಿಯ ಪ್ಯಾಕೇಜ್ ಘೋಷಿಸಬಹುದು ಎಂದು ಅವರು ತಿಳಿಸಿದ್ದಾರೆ.