ಪರೀಕ್ಷೆಗೆ ಹೆದರಿ ತರಕಾರಿ ಮಾರಾಟ ಬಂದ್

6 lxr 4
Published on

ಲಕ್ಷ್ಮೇಶ್ವರ: ಕರೊನಾ ಟೆಸ್ಟ್ ಮಾಡಿಸಲಾಗುವುದು ಎನ್ನುವ ವದಂತಿ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪಾರಸ್ಥರು ಗುರುವಾರ ಅಂಗಡಿಗಳನ್ನು ಬಂದ್ ಮಾಡಿದರು. ಪಟ್ಟಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣದ ದೃಷ್ಟಿಯಿಂದ ತರಕಾರಿ, ಹೂವು, ಹಣ್ಣು, ಬೀದಿಬದಿ ವ್ಯಾಪಾರಸ್ಥರು, ಕ್ಷೌರಿಕರು ಸೇರಿ ಇತರ ವ್ಯಾಪಾರಸ್ಥರನ್ನು ರ್ಯಾಂಡಂ ಪರೀಕ್ಷೆ ಮಾಡಿಸಬೇಕು. ವ್ಯಾಪಾರಸ್ಥರು ನಿತ್ಯ ನೂರಾರು ಜನರ ಸಂಪರ್ಕಕ್ಕೆ ಬರುತ್ತಾರೆ. ಇವರ ಆರೋಗ್ಯ ಪರೀಕ್ಷೆ ಮುಖ್ಯ ಎಂಬ ಬಗ್ಗೆ ಆರೋಗ್ಯ ಇಲಾಖೆ ಎರಡು ದಿನಗಳ ಹಿಂದೆ ಸಮಾಲೋಚನೆ ಸಭೆ ನಡೆಸಿತ್ತು. ಆದಾಗ್ಯೂ ಈ ಬಗ್ಗೆ ವ್ಯಾಪಾರಸ್ಥರಿಗೆ ಯಾರೂ ನೇರವಾಗಿ ಹೇಳಿಲ್ಲ. ಆದರೆ, ಈ ಮಾಹಿತಿ ಅದೇಗೋ ಹಬ್ಬಿದ್ದರಿಂದ ವ್ಯಾಪಾರಸ್ಥರು ಗುರುವಾರ ವ್ಯಾಪಾರದಿಂದ ದೂರ ಉಳಿದಿದ್ದಾರೆ.

ಸಾಮೂಹಿಕವಾಗಿ ರ್ಯಾಪಿಡ್ ಟೆಸ್ಟ್ ಮಾಡಿದಾಗ ಸಾಮಾನ್ಯವಾದ ಕಾಯಿಲೆ ಇದ್ದರೂ ಪಾಸಿಟಿವ್ ಬರುತ್ತದೆ. ವ್ಯಾಪಾರಸ್ಥರಲ್ಲಿ ಯಾರಾದರೊಬ್ಬರಿಗೆ ಪಾಸಿಟಿವ್ ಬಂದರೆ ಸಂಕೀರ್ಣವನ್ನೇ ಸೀಲ್​ಡೌನ್ ಮಾಡುತ್ತಾರೆ. ಎಲ್ಲ ವ್ಯಾಪಾರಸ್ಥರನ್ನೂ ಕ್ವಾರಂಟೈನ್ ಮಾಡುತ್ತಾರೆ. ಇದರಿಂದ ನಮ್ಮ ಇಡೀ ಕುಟುಂಬವೂ ಹೊರತಾಗಿರುವುದಿಲ್ಲ ಮತ್ತು 15 ದಿನಗಳ ಕಾಲ ವ್ಯಾಪಾರ ಬಂದ್ ಆಗುತ್ತದೆ. ವಿನಾಕಾರಣ ನಮ್ಮನ್ನು ಟೆಸ್ಟ್ ಮಾಡಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಆರೋಗ್ಯದಲ್ಲಿ ಏರುಪೇರಾದವರು ಹೋಗಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಲಿ ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿರುವ ತರಕಾರಿ ವ್ಯಾಪಾರಸ್ಥರು ವಿನಾಕಾರಣ ಕರೊನಾ ಪರೀಕ್ಷೆಗೆ ಹೆದರಿ ವ್ಯಾಪಾರ ಬಂದ್ ಮಾಡಿರುವುದು ತಪ್ಪು. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ವದಂತಿಗಳಿಗೆ ಕಿವಿಗೊಡದೆ ನಿತ್ಯದಂತೆ ವಹಿವಾಟು ಪ್ರಾರಂಭಿಸಬೇಕೆಂದು ವ್ಯಾಪಾರಿಗಳಿಗೆ ತಿಳಿಹೇಳುತ್ತೇವೆ. | ಶಂಕರ ಹುಲ್ಲಮ್ಮನವರ, ಪುರಸಭೆ ಮುಖ್ಯಾಧಿಕಾರಿ.

ರ್ಯಾಂಡಂ ಟೆಸ್ಟ್ ಮಾಡುವ ಕುರಿತು ಯಾವುದೇ ಸೂಚನೆ ನೀಡಿಲ್ಲ. ಕರೊನಾ ಬಗ್ಗೆ ಭಯ ಬೇಡ. ಇದು ಭಯಂಕರ ರೋಗವಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. | ಡಾ. ಗಿರೀಶ ಮರಡ್ಡಿ, ವೈದ್ಯಾಧಿಕಾರಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net