ಎಲ್ಲರನ್ನೂ ಸಂತೈಸಲು ವಿತ್ತ ಸಚಿವೆಯ ಜಾಣನಡೆ

sudir cs feb 02 2020
Published on

ಸಿ.ಎಸ್.ಸುಧೀರ್

ಇಂಡಿಯನ್ ಮನಿ ಡಾಟ್​ಕಾಂ ಸಿಇಒ, ಸಂಸ್ಥಾಪಕ

ಬಜೆಟ್ ಇತಿಹಾಸದಲ್ಲೇ 2 ತಾಸು 40 ನಿಮಿಷಗಳ ದೀರ್ಘಾವಧಿ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್ ಎಲ್ಲರನ್ನೂ ಸಂತೈಸುವ ಪ್ರಯತ್ನ ಮಾಡಿದ್ದಾರೆ. ವಿತ್ತೀಯ ಕೊರತೆಯ ಚಿಂತೆ ಬದಿಗಿಟ್ಟು, ಜನರ ಕೈಯಲ್ಲಿ ದುಡ್ಡು ಕೊಟ್ಟು, ಹೂಡಿಕೆಯ ಮೂಲಕ, ಸೊರಗಿರುವ ಆರ್ಥಿಕತೆಗೆ ಬಲ ತುಂಬುವ ಕಸರತ್ತನ್ನು ನಡೆಸಿದ್ದಾರೆ. ಸದ್ಯ ಕುಂಠಿತವಾಗಿರುವ ಆರ್ಥಿಕತೆಗೆ ಬಲ ತಂಬುವ ದೃಷ್ಟಿಯಿಂದಲೋ ಏನೋ ಬಜೆಟ್​ನಲ್ಲಿ ಸೂಕ್ಷ್ಮ ಅರ್ಥಶಾಸ್ತ್ರದ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ‘ನಮ್ಮ ದೇಶ ದಾಲ್ ಸರೋವರದಲ್ಲಿನ ಕಮಲದಂತೆ ಅರಳುತ್ತಿದೆ’ ಎಂಬ ಕಾಶ್ಮೀರಿ ಕವಿಯೊಬ್ಬರ ಪದ್ಯ ಉಲ್ಲೇಖಿಸಿ ಬಜೆಟ್ ಭಾಷಣ ಆರಂಭಿಸಿದ ಸಚಿವರು, ಆದಾಯ ಮತ್ತು ಖರೀದಿ ಸಾಮರ್ಥ್ಯ ವೃದ್ಧಿಸಿ, ಜನರ ಆಶೋತ್ತರಗಳನ್ನು ಈಡೇರಿಸುವುದೇ ಸರ್ಕಾರದ ಗುರಿ ಎಂದು ಪ್ರತಿಪಾದಿಸಿ ಸಮಗ್ರ ಭಾರತೀಯರನ್ನು ಓಲೈಸುವ ಕಸರತ್ತು ನಡೆಸಿದರು.

ಏನಿದೆ ಹಣಕಾಸಿನ ಪರಿಸ್ಥಿತಿ?: ಬಜೆಟ್​ನಲ್ಲಿ 2020-21 ನೇ ಸಾಲಿಗೆ 22.46 ಲಕ್ಷ ಕೋಟಿ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ ಖರ್ಚಿನ ಬಾಬ್ತೇ 30.42 ಲಕ್ಷ ಕೋಟಿ ರೂ. ಇದೆ. ಸರ್ಕಾರ ಮಾಡಿರುವ ಸಾಲಗಳ ಮೇಲಿನ ಬಡ್ಡಿ ಪಾವತಿಗಾಗೇ 7.08 ಲಕ್ಷ ಕೋಟಿ ರೂ. ಅಗತ್ಯವಿದೆ. ಆದಾಯಕ್ಕಿಂತ ಖರ್ಚು ಹೆಚ್ಚಿದ್ದರೆ ಅದನ್ನು ವಿತ್ತೀಯ ಕೊರತೆ ಎನ್ನುತ್ತೇವೆ. 2019-20 ನೇ ಸಾಲಿನಲ್ಲಿ ಸರ್ಕಾರ ವಿತ್ತೀಯ ಕೊರತೆಯನ್ನು ಶೇ 3.3 ಕ್ಕೆ ತಗ್ಗಿಸುವ ಗುರಿ ಹೊಂದಿತ್ತು. ಆದರೆ ಕಾರ್ಪೆರೇಟ್ ತೆರಿಗೆ ಕಡಿತ ಸೇರಿ ಇನ್ನಿತರ ಕಾರಣಗಳಿಂದ ಸರ್ಕಾರಕ್ಕೆ ವರಮಾನದ ಕೊರತೆಯಾಗಿದ್ದು 2019-20 ನೇ ಸಾಲಿನಲ್ಲಿ ಇದನ್ನು ಶೇ 3.8 ಕ್ಕೆ ಏರಿಕೆ ಮಾಡಲಾಗಿದೆ. 2020-21 ನೇ ಸಾಲಿಗೆ ವಿತ್ತೀಯ ಕೊರತೆಯನ್ನು ಶೇ 3.5 ಕ್ಕೆ ಇಳಿಸುವ ಉತ್ಸಾಹದಲ್ಲಿರುವ ಸರ್ಕಾರ ಆರ್ಥಿಕ ಅಭಿವೃದ್ಧಿ ದರವನ್ನು (ಜಿಡಿಪಿ) ಶೇ 10 ಕ್ಕೆ ನಿಗದಿಮಾಡಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಇದೊಂದು ಸವಾಲಿನ ಗುರಿಯೇ ಸರಿ.

ಆದ್ಯತೆಯ ಕ್ಷೇತ್ರಗಳು: ಭಾರತದ ಆಕಾಂಕ್ಷೆ, ಆರ್ಥಿಕ ಪ್ರಗತಿ, ಸಾಮಾಜಿಕ ಕಾಳಜಿ ಎಂಬ ಮೂರು ಮುಖ್ಯ ಉದ್ದೇಶಗಳನ್ನು ಇಟ್ಟುಕೊಂಡು ಬಜೆಟ್ ರೂಪಿಸಲಾಗಿದೆ. ಹಾಗಾಗಿ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ನೈರ್ಮಲ್ಯ, ಶಿಕ್ಷಣ, ಕೌಶಲ್ಯ, ಮೂಲಸೌಕರ್ಯ, ಹೂಡಿಕೆ, ಉದ್ದಿಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಆದ್ಯತೆ ಸಿಕ್ಕಿದೆ. ಈ ಪ್ರಮುಖ ವಲಯಗಳಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕತೆ ಸರಿದಾರಿಗೆ ಬರಲಿದೆ ಎಂಬ ವಿಶ್ವಾಸದಲ್ಲಿ ಸರ್ಕಾರವಿದೆ. ಆದರೆ ಇದರ ಪರಿಣಾಮವನ್ನು ಕಾದುನೋಡಬೇಕಿದೆ.

ಬಜೆಟ್​ನಲ್ಲಿ ಸಿಕ್ಕ ಸಿಹಿ-ಕಹಿ: ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆ ವಿನಾಯಿತಿಯ ಸಿಹಿ ಸಿಕ್ಕಿದೆ. ಈಗ 5 ರಿಂದ 7.5 ಲಕ್ಷ ವರೆಗಿನ ಆದಾಯವಿರುವವರಿಗೆ ಶೇ 10 ರಷ್ಟು ತೆರಿಗೆ ವಿಧಿಸಲಾಗಿದೆ. 7.5 ರಿಂದ 10 ಲಕ್ಷ ಆದಾಯಕ್ಕೆ ಶೇ 15, 10 ರಿಂದ 12.5 ಲಕ್ಷ ಆದಾಯಕ್ಕೆ ಶೇ 20, 12.5 ರಿಂದ 15 ಲಕ್ಷದ ವರೆಗಿನ ಆದಾಯಕ್ಕೆ ಶೇ 25 ತೆರಿಗೆ ನಿಗದಿ ಮಾಡಿರುವುದು ದೊಡ್ಡ ಸುಧಾರಣೆಯಾಗಿದೆ. ಆದರೆ ಜತೆಗೆ ಈಗಾಗಲೇ ಇದ್ದ ಕೆಲ ವಿನಾಯಿತಿಗಳನ್ನು ರದ್ದು ಮಾಡಿರುವುದರಿಂದ ವಾಸ್ತವದಲ್ಲಿ ಜನರಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಲಾಭಾಂಶ ಹಂಚಿಕೆ ತೆರಿಗೆ( ಡಿಡಿಟಿ) ರದ್ದು ಮಾಡಿರುವುದು, ಸುಧಾರಿತ ಜಿಎಸ್​ಟಿ

ರಿಟರ್ನ್ಸ್, ಆಧಾರ್ ಇದ್ದವರಿಗೆ ಪ್ಯಾನ್ ಕಾರ್ಡ್, ಬ್ಯಾಂಕ್ ಠೇವಣಿ ಇಟ್ಟವರಿಗೆ ಡೆಪಾಸಿಟ್ ಇನ್ಶೂರೆನ್ಸ್ 1 ರಿಂದ 5 ಲಕ್ಷಕ್ಕೆ ಹೆಚ್ಚಳ, ಸೇರಿ ಇನ್ನು ಕೆಲ ಯೋಜನೆಗಳು ಜನರಿಗೆ ಪೂರಕವಾಗಿವೆ.

ಬಜೆಟ್​ನಲ್ಲಿ ಅನ್ನದಾತನನ್ನು ಸಮಾಧಾನ ಪಡಿಸುವ ಪ್ರಯತ್ನವಾಗಿದೆ. 20 ಲಕ್ಷ ರೈತರಿಗೆ ಸೋಲಾರ್ ಪಂಪ್, ಕೃಷಿ ರೈಲು, ಕೃಷಿ ವಿಮಾನ, ಸಾಗರಮಿತ್ರ ಯೋಜನೆ, ಧಾನ್ಯಲಕ್ಷ್ಮಿ ಯೋಜನೆ, ಶೂನ್ಯ ಬಂಡವಾಳ ಕೃಷಿ, ಸೇರಿ ಕೃಷಿ ವಲಯದ ಪುನಶ್ಚೇತನಕ್ಕೆ ಸರ್ಕಾರ 16 ಅಂಶಗಳ ಕಾರ್ಯಕ್ರಮ ಘೊಷಿಸಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಇವೆಲ್ಲಾ ಸಕಾರಾತ್ಮಕ ಅಂಶಗಳಾದರೂ ಕೃಷಿ ವಲಯದಲ್ಲಿ ಇದರಿಂದ ಭಾರೀ ಸುಧಾರಣೆ ತರಲು ಸಾಧ್ಯವಾಗುವುದಿಲ್ಲ.

ಶಿಕ್ಷಣ ವಲಯಕ್ಕೆ 99,300 ಕೋಟಿ, ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ, ವಾಣಿಜ್ಯ ಮತ್ತು ಕೈಗಾರಿಕೆಗೆ 27,300 ಕೋಟಿ, ಮೂಲಸೌಕರ್ಯಕ್ಕೆ 103 ಲಕ್ಷ ಕೋಟಿ, ಎಸ್​ಸಿ ಸಮುದಾಯದ ಅಭಿವೃದ್ಧಿಗೆ 85,000 ಕೋಟಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ 53,700 ಕೋಟಿ ಮೀಸಲಿಡಲಾಗಿದೆ. ಆದರೆ ಹಣ ಮೀಸಲಿದ್ದರೂ ಯೋಜನೆಗಳಿಗೆ ಸರಿಯಾದ ನೀಲನಕ್ಷೆ ಇಲ್ಲ. ಡಿಗ್ರಿ ಮಟ್ಟದ ವಿದ್ಯಾಭ್ಯಾಸಕ್ಕೆ ಆನ್​ಲೈನ್ ಕೋರ್ಸ್, ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಆನ್​ಲೈನ್ ಪರೀಕ್ಷೆ, ಪ್ರತಿ ಜಿಲ್ಲೆಗೂ ಜನೌಷಧಿ ಕೇಂದ್ರ, ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಗೆ ಉತ್ತೇಜನ, 100 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ, ಚೆನ್ನೈ ಬೆಂಗಳೂರು

ಎಕ್ಸ್​ಪ್ರೆಸ್ ರೈಲ್ವೆ ಮಾರ್ಗ, ಬೆಂಗಳೂರು ಉಪನಗರ ರೈಲು ಯೋಜನೆಗೆ ನೆರವು, ರಾಷ್ಟ್ರೀಯ ಗ್ಯಾಸ್ ಗ್ರಿಡ್ 27,000 ಕಿ.ಮೀ. ವಿಸ್ತರಣೆ ಸೇರಿ ಹಲವು ಯೋಜನೆಗಳು ಅನುಕೂಲಕರವಾಗಿವೆ.

ಬಜೆಟ್​ನಲ್ಲಿ ಕಹಿಯೇನು?

ಬಜೆಟ್​ನಲ್ಲಿ ಸಮಗ್ರ ಅರ್ಥಶಾಸ್ತ್ರದ ಅಂಶಗಳಿಗೆ ಆದ್ಯತೆ ಸಿಕ್ಕಿಲ್ಲ ಎನ್ನುವುದು ಒಂದೆಡೆಯಾದರೆ ಕೆಲ ವಲಯಗಳ ನಿರೀಕ್ಷೆಯೂ ಈಡೇರದಿರುವುದು ಮತ್ತೊಂದೆಡೆ. ಮ್ಯೂಚುವಲ್ ಫಂಡ್, ಇನ್ಶೂರೆನ್ಸ್, ರಿಯಲ್ ಎಸ್ಟೇಟ್, ಕಟ್ಟಡ ನಿರ್ವಣ, ಲಾಜಿಸ್ಟಿಕ್ಸ್, ರಸಗೊಬ್ಬರ, ಸಣ್ಣ ಕೈಗಾರಿಕೆ, ಬ್ಯಾಂಕ್​ಗಳು ಒಳಗೊಂಡಂತೆ ಇನ್ನು ಹತ್ತಾರು ಕ್ಷೇತ್ರಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಮ್ಯೂಚುವಲ್ ಫಂಡ್​ನಲ್ಲಿ ಎಲ್ ಟಿಸಿಜಿ ತೆರಿಗೆ ರದ್ದಾಗದಿರುವುದು ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ. ಎಲ್​ಐಸಿಯಲ್ಲಿ ಸರ್ಕಾರದ ಪಾಲು ಕಡಿಮೆ ಮಾಡುವ ನಿರ್ಧಾರದ ಬಗ್ಗೆ ಪರ ವಿರೋಧದ ಚರ್ಚೆ ಇದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಎಲ್​ಐಸಿ ಬಳಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಅದಾಗಿಯೂ ಎಲ್ ಐಸಿಯ ಆರಂಭಿಕ ಸಾರ್ವಜನಿಕ ಬಂಡವಾಳ ಹೂಡಿಕೆಯ ಮೊರೆ ಹೋಗುವುದು ನಿಶ್ಟಿತವಾಗಿದೆ. ಇದೆಲ್ಲದರ ಪರಿಣಾಮ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಬಜೆಟ್ ದಿನ 987 ಅಂಶಗಳ ಕುಸಿತ ಕಂಡಿದೆ. ಒಟ್ಟಾರೆಯಾಗಿ ಎಲ್ಲರನ್ನೂ ಸಂತೈಸುವ ಪ್ರಯತ್ನಕ್ಕೆ ಮುಂದಾಗಿರುವುದು ಎದ್ದು ಕಾಣುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net