

ಮುಂಬೈ: ಆರ್ಬಿಐ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ಇಂದು (ಮಾ.18)ಸಂಜೆ 6ಗಂಟೆಗೆ ಹಿಂಪಡೆದ ಕೂಡಲೇ ಯೆಸ್ ಬ್ಯಾಂಕ್ ತನ್ನ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನೂ ಮರುಪ್ರಾರಂಭ ಮಾಡಿದೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ಮಾ.5ರಂದು ನಿಷೇಧ ಹೇರಿತ್ತು. ಆಡಳಿತ ಮಂಡಳಿಯನ್ನು ರದ್ದುಗೊಳಿಸಿತ್ತು. ಹಾಗೇ ಗ್ರಾಹಕರ ಹಣ ವಿತ್ಡ್ರಾ ಮಿತಿಯನ್ನು 50 ಸಾವಿರ ರೂಪಾಯಿಗೆ ಮಿತಿಗೊಳಿಸಿತ್ತು.
ಮಾ.5ರಂದು ಹೇರಿದ್ದ ನಿಷೇಧ 30 ದಿನಗಳವರೆಗೆ ಇರಲಿದೆ ಎಂದು ಈ ಹಿಂದೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದರು. ಅದರ ಅನ್ವಯ ಏಪ್ರಿಲ್ 3ರವರೆಗೂ ನಿಷೇಧ ಇರಬೇಕಿತ್ತು. ಆದರೆ ಯೆಸ್ ಬ್ಯಾಂಕ್ನ ಪುನಶ್ಚೇತನಕ್ಕೆ ಎಸ್ಬಿಐ ಆಸಕ್ತಿ ತೋರಿಸಿ, 7,250 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದೆ. ಸಂಕಷ್ಟದಲ್ಲಿರುವ ಯೆಸ್ಬ್ಯಾಂಕ್ಗೆ ಎಸ್ಬಿಐ ಆಸರೆಯಾಗಿ ನಿಲ್ಲುವ ಯೋಜನೆ ಹಾಕಿಕೊಂಡಿದ್ದರಿಂದ ಆರ್ಬಿಐ ಹೇರಿದ್ದ ನಿಷೇಧವನ್ನು ಅವಧಿಗೂ ಮುಂಚಿತವಾಗಿಯೇ ಹಿಂಪಡೆದಿದೆ.
ಸದ್ಯ ಯೆಸ್ಬ್ಯಾಂಕ್ನ ಎಲ್ಲ ಸೇವೆಗಳೂ ಪ್ರಾರಂಭವಾಗಿದ್ದು, ಗ್ರಾಹಕರಿಗೆ ಲಭ್ಯವಿದೆ. ಮಾ.17ರಿಂದಲೇ ಬ್ಯಾಂಕ್ ಗ್ರಾಹಕರ ಮೊಬೈಲ್ಗಳಿಗೆ ಸಿಇಒ ಪ್ರಶಾಂತ್ ಕುಮಾರ್ ಹೆಸರಿನಲ್ಲಿ ಮೆಸೇಜ್ಗಳು ರವಾನೆಯಾಗುತ್ತಿದ್ದು, ಬ್ಯಾಂಕಿಂಗ್ ಸೇವೆಗಳು ಪ್ರಾರಂಭ ಆಗುವ ಬಗ್ಗೆ ತಿಳಿಸಲಾಗುತ್ತಿತ್ತು.
ಯೆಸ್ ಬ್ಯಾಂಕ್ನ ಹಿರಿಯ ನಾಗರಿಕ ಗ್ರಾಹಕರಿಗಾಗಿ ಮಾ.19ರಿಂದ 27ರವರೆಗೆ ಬ್ಯಾಂಕ್ನ ಸಮಯವನ್ನು 4.30 ರಿಂದ 5.30 ಗಂಟೆಗೆ ಏರಿಸಲಾಗುವುದು ಎಂದೂ ತಿಳಿಸಲಾಗಿದೆ. ಯೆಸ್ಬ್ಯಾಂಕ್ಗೆ ಸಂಬಂಧಪಟ್ಟ ನೆಟ್ ಬ್ಯಾಂಕಿಂಗ್, ಆ್ಯಪ್ಗಳು, ಯುಪಿಐ ಸೇವೆಗಳೂ ಕೂಡ ಪ್ರಾರಂಭವಾಗಿವೆ.(ಏಜೆನ್ಸೀಸ್)