

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಯೆಸ್ ಬ್ಯಾಂಕ್ ಅನ್ನು ಬ್ಯಾಂಕಿಂಗ್ ಪಾರ್ಟನರ್ ಆಗಿ ಇಟ್ಟುಕೊಂಡಿದ್ದ ಫೋನ್ ಪೇ ಗುರುವಾರದಿಂದ ಕೆಲಸ ಮಾಡುತ್ತಿರಲಿಲ್ಲ. ಶುಕ್ರವಾರ ಬೆಳಗ್ಗೆಯಿಂದ ಫೋನ್ ಪೇ ತೆರೆದರೆ ‘ವಿ ಆರ್ ಟೆಂಪರರಿಲಿ ಅನ್ಅವೇಲೆಬಲ್’ ಎಂಬ ಶೀರ್ಷಿಕೆಯೊಂದಿಗೆ ಸಂದೇಶವೊಂದು ಪರದೆ ಮೇಲೆ ಕಾಣಿಸಕೊಳ್ಳತೊಡಗಿತ್ತು.
ಶುಕ್ರವಾರ ಬೆಳಗ್ಗೆ ಫ್ಲಿಪ್ಕಾರ್ಟ್ನ ಸಮೀರ್ ನಿಗಮ್ ಎಂಬುವರು ಟ್ವೀಟ್ ಮೂಲಕ ಫೋನ್ ಪೇ ಗ್ರಾಹಕರ ಬಳಿಕ ಕ್ಷಮೆಯಾಚಿಸಿ, ಇಡೀ ತಂಡವೇ ಪರಿಸ್ಥಿತಿ ನಿಭಾಯಿಸುವುದಕ್ಕೆ ಕೆಲಸ ಮಾಡುತ್ತಿದ್ದು ರಾತ್ರಿವೇಳೆಗೆ ಎಲ್ಲವೂ ಸರಿ ಹೋಗಲಿದೆ. ಅಲ್ಲಿ ತನಕ ತಾಳ್ಮೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ಟ್ವೀಟ್ಗೆ ಉತ್ತರ ಎಂಬಂತೆ, ಫೋನ್ ಪೇಯ ರಾಹುಲ್ ಚಾರಿ ಆರು ಗಂಟೆಗಳ ಹಿಂದೆ, ಇಂದು ಸಂಜೆಯೊಳಗೆ ವ್ಯಾಪಾರಿಗಳ ಹಣಕಾಸು ಸೆಟಲ್ಮೆಂಟ್ ಮಾಡಿ, ನಂತರ ಎಲ್ಲ ಬಳಕೆದಾರರಿಗೂ ನಮ್ಮ ಎಲ್ಲ ಸೇವೆಗಳೂ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಉತ್ತರಿಸಿದ್ದರು. ಈಗ ಒಂದು ಗಂಟೆ ಹಿಂದೆ ಮತ್ತೆ ಅದೇ ಟ್ವೀಟ್ ಮುಂದುವರಿಸಿ, ನಮ್ಮ ವಾಗ್ದಾನದ ಪ್ರಕಾರವೇ ಎಲ್ಲ ವ್ಯಾಪಾರಿ ಸಂಬಂಧದ ವಹಿವಾಟುಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅದೇ ರೀತಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ನಮ್ಮ ಸೇವೆಗಳನ್ನು ಬಳಸಬಹುದು ಎಂಬ ಫೋನ್ ಪೇ ಟ್ವೀಟನ್ನು ಮರುಟ್ವೀಟ್ ಮಾಡಿದ್ದಾರೆ.
ಫೋನ್ ಪೇ ಮತ್ತು ಅವರ ಸಹವರ್ತಿಗಳ ತಂಡ ಬಹಳ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ವಿಶ್ವಾಸ ಬಳಕೆದಾರರಲ್ಲೂ ಕಂಡುಬಂದಿದ್ದು, ಯೆಸ್ ಬ್ಯಾಂಕ್ ಮೇಲಿನ ನಿರ್ಬಂಧದ ಕಾರಣಕ್ಕೆ ಸಂಕಷ್ಟಕ್ಕೀಡಾದ ಫೋನ್ ಪೇ ತನ್ನ ಯುಪಿಐ ಸೇವೆಗಳು ಇವತ್ತೇ ಮತ್ತೆ ಚಾಲ್ತಿಗೆ ಬರಲಿವೆ ಎಂಬ ವಿಶ್ವಾಸವೂ ಮೂಡಿದೆ. (ಏಜೆನ್ಸೀಸ್)