

ಮುಂಬೈ: ಚೀನಾದಲ್ಲಿ ಕಾಣಿಸಿಕೊಂಡ ಬಳಿಕ 35 ರಾಷ್ಟ್ರಗಳಿಗೆ ವ್ಯಾಪಿಸಿರುವ ಕರೊನಾ (ಕೋವಿಡ್-19) ಮಾರಿಯ ಆರ್ಭಟಕ್ಕೆ ವಿಶ್ವ ಆರ್ಥಿಕತೆಯಲ್ಲಿ ಕಂಪನ ಶುರುವಾಗಿರುವ ಬೆನ್ನಲ್ಲೇ ಶುಕ್ರವಾರ ಒಂದೇ ದಿನ ಕೇವಲ ಐದು ನಿಮಿಷದ ಅವಧಿಯಲ್ಲಿ ಭಾರತ ಷೇರು ಮಾರುಕಟ್ಟೆಯಲ್ಲಿ 5.50 ಲಕ್ಷ ಕೋಟಿ ರೂ. ಕರಗಿ ಹೋಗಿದೆ.
ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ನಲ್ಲಿ 1,448.37 (ಶೇ. 3.64) ಪಾಯಿಂಟ್ಗಳ ಮಹಾಪತನವಾಗಿ ದಿನದ ವಹಿವಾಟಿನ ಅಂತ್ಯಕ್ಕೆ 38,297.29ಕ್ಕೆ ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ 431.55 (ಶೇ.3.71) ಅಂಶ ಕುಸಿತ ಕಂಡು 11,201.75ಕ್ಕೆ ಸ್ಥಿರಗೊಂಡಿದೆ. ಸೆನ್ಸೆಕ್ಸ್ ಈ ವಾರದ ಆರಂಭದಿಂದಲೂ ಇಳಿಮುಖವಾಗಿಯೇ ಇದ್ದು, 30 ಪ್ರಮುಖ ಕಂಪನಿಗಳ ಷೇರು ಮೌಲ್ಯ ಶುಕ್ರವಾರದ ಕರಡಿ ಕುಣಿತಕ್ಕೆ ತಲ್ಲಣಿಸಿದೆ. ಮಹಿಂದ್ರಾ ಆಂಡ್ ಮಹಿಂದ್ರಾ, ಟೆಕ್ ಮಹಿಂದ್ರಾ, ಟಾಟಾ ಸ್ಟೀಲ್, ಎಚ್ಸಿಎಲ್ ಟೆಕ್, ಎಸ್ಬಿಐ, ಬಜಾಜ್ ಫೈನಾನ್ಸ್ ಕಂಪನಿಗಳ ಷೇರು ಬೆಲೆ ಶೇ. 8.14ರಷ್ಟು ಇಳಿದಿದೆ. ಈ ಹಿಂಜರಿತದ ಮಧ್ಯೆಯೂ ಐಟಿಸಿ ಷೇರು ಮೌಲ್ಯ ಸ್ಥಿರವಾಗಿತ್ತು. ನಿಫ್ಟಿಯಲ್ಲಿ ಲೋಹ, ಮಾಧ್ಯಮ ವಲಯದ ಷೇರು ಮೌಲ್ಯ ತರಗೆಲೆಯಂತೆ ಉದುರಿತು. ಶೇ. 7.34ರಷ್ಟು ನಷ್ಟ ಅನುಭವಿಸಿತು.
ತಜ್ಞರ ವಾದವೇನು?: ಷೇರುಪೇಟೆಯ ಮಹಾಪತನಕ್ಕೆ ಕರೊನಾ ಜತೆಗೆ ಆರ್ಥಿಕ ಹಿಂಜರಿತ, ಸಿಎಎ, ಎನ್ಆರ್ಸಿ ಕುರಿತ ಪ್ರತಿಭಟನೆ, ಉದ್ಯಮಿಗಳಲ್ಲಿ ಉಂಟಾಗಿರುವ ಅಭದ್ರತೆಯ ಭಾವವೂ ಕಾರಣವಾಗಿದೆ ಎಂಬುದು ಷೇರುಪೇಟೆ ತಜ್ಞರ ಅಭಿಪ್ರಾಯ. ಕರೊನಾ ಸೋಂಕಿನ ಪರಿಣಾಮ ಜಾಗತಿಕ ರಫ್ತು ಪ್ರಮಾಣ ಭಾರಿ ಕುಸಿತವಾಗಿದೆ. ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಕರೊನಾ ವೈರಸ್ ಸಾಂಕ್ರಾಮಿಕ ಸ್ವರೂಪ ಪಡೆಯುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಷೇರುಪೇಟೆಯಲ್ಲಿ ಗಾಢಾಂಧಕಾರ ಉಂಟಾಗಿದೆ. ಇದು ಈ ವರ್ಷ ಪೂರ್ವಾರ್ಧದವರೆಗೂ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ ಎಂದು ಜಾಗತಿಕ ಆರ್ಥಿಕತೆ ರೇಟಿಂಗ್ ಸಂಸ್ಥೆ ಮೂಡಿ‘ಸ್ ಅಭಿಪ್ರಾಯಪಟ್ಟಿದೆ.
ಗಂಭೀರ ಸವಾಲು: ಚೀನಾಗೆ ಕರೊನಾ ವ್ಯಾಪಿಸಿದ ನಂತರ ಭಾರತದ ವಿವಿಧ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಭಾರತದಿಂದ ರಫ್ತಾಗುತ್ತಿದ್ದ ಹಾಗೂ ಚೀನಾದಿಂದ ಆಮದಾಗುತ್ತಿದ್ದ ವಸ್ತುಗಳ ಪೂರೈಕೆ ವ್ಯತ್ಯಯವಾಗಿ ವಿವಿಧ ಉದ್ದಿಮೆಗಳು ನೆಲಕಚ್ಚಿವೆ. ಇದೀಗ 35 ರಾಷ್ಟ್ರಗಳಿಗೆ ಮಹಾಮಾರಿ ಲಗ್ಗೆ ಇಟ್ಟಿರುವುದರಿಂದ ಭವಿಷ್ಯದಲ್ಲಿ ಮತ್ತಷ್ಟು ಪರಿಣಾಮ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.
ಕುಸಿತಕ್ಕೆ ಕಾರಣ, ಪರಿಣಾಮ
ಯಾರಿಗೆ ಎಷ್ಟು ನಷ್ಟ?
ಜಿಡಿಪಿ ತುಸು ಏರಿಕೆ
2019-20ರ ಆರ್ಥಿಕ ಸಾಲಿನ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಮೂರನೇ ತ್ರೖೆಮಾಸಿಕದಲ್ಲಿ ದೇಶಿಯ ಒಟ್ಟು ಉತ್ಪನ್ನ ದರ (ಜಿಡಿಪಿ) ಶೇ. 0.2 ಸುಧಾರಿಸಿದ್ದು, ಶೇ. 4.07ಕ್ಕೆ ಸ್ಥಿರಗೊಂಡಿದೆ. ಎರಡನೇ ತ್ರೖೆಮಾಸಿಕದಲ್ಲಿ ಇದು ಶೇ. 4.5ಕ್ಕೆ ಕುಸಿದು ಆತಂಕಕ್ಕೆ ಕಾರಣವಾಗಿತ್ತು. ಅಂತಿಮ ಮೂರು ತಿಂಗಳಲ್ಲಿ ಜಿಡಿಪಿ ಶೇ. 5ಕ್ಕೆ ತಲುಪುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ಸೆನ್ಸೆಕ್ಸ್ 1,448, ನಿಫ್ಟಿ 431 ಅಂಶ ಪತನ ಯಾವ ಕ್ಷೇತ್ರಗಳಿಗೆ ಸಂಕಷ್ಟ