ಯೆಸ್ ಬ್ಯಾಂಕ್ ಪತನ ಏನು ಕಾರಣ? ಯಾರು ಹೊಣೆ

YES BANK PHOTO F
Published on

ಪಿಎಂಸಿ, ರಾಘವೇಂದ್ರ ನಂತರ ಈಗ ಯೆಸ್ ಬ್ಯಾಂಕ್ ಸರದಿ. ಇದೆಲ್ಲವನ್ನು ನೋಡಿ ದೇಶದ ಜನರು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆಯೇ ಭ್ರಮನಿರಸನಗೊಳ್ಳುವಂತಾಗಿದೆ. ತಮ್ಮಹಣ ಬ್ಯಾಂಕುಗಳಲ್ಲಿ ಸುರಕ್ಷಿತವೇ ಎನ್ನುವ ಜಿಜ್ಞಾಸೆ ಆರಂಭವಾಗಿದೆ.

2019ರ ಸೆಪ್ಟೆಂಬರ್​ನಲ್ಲಿ ಮುಂಬೈ ಮೂಲದ ಪಂಜಾಬ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ಪತನಗೊಂಡ ನಂತರ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಅಡಳಿತ ಮಂಡಳಿಗಳು ಎಚ್ಚೆತ್ತುಕೊಂಡಿದ್ದು, ಬ್ಯಾಂಕುಗಳ ಪತನ ಮತ್ತು ದಿವಾಳಿ ಮರುಕಳಿಸದು ಎನ್ನುವ ಭಾವನೆ ಮೂಡಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ದೇಶದ ನಾಲ್ಕನೇ ಅತಿ ದೊಡ್ಡ ನವಪೀಳಿಗೆಯ ಖಾಸಗಿ ಬ್ಯಾಂಕ್ ಯೆಸ್ ಬ್ಯಾಂಕ್ ಕೂಡ ಪಿಎಂಸಿಯಂತೆಯೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ.

ಈ ಬ್ಯಾಂಕ್​ನ ನಿರ್ದೇಶಕ ಮಂಡಳಿಯನ್ನು ಆರ್​ಬಿಐ ಸೂಪರ್ ಸೀಡ್ ಮಾಡಿ, ಗ್ರಾಹಕರು ಹಣ ಹಿಂಪಡೆಯುವುದರ ಮೇಲೆ ಮಿತಿ ಹೇರಿದೆ. ಎಸ್​ಬಿಐನಂತಹ ಬೃಹತ್ ಬ್ಯಾಂಕ್​ನ ಮಧ್ಯಪ್ರವೇಶದಿಂದಾಗಿ, ಇದೀಗ ಯೆಸ್ ಬ್ಯಾಂಕ್​ನ ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದ್ದರೂ ನಿರ್ಬಂಧಗಳು ಎಷ್ಟು ಕಾಲ ಮುಂದುವರಿಯುತ್ತವೆ ಎಂಬುದು ತಿಳಿಯದಂತಿದೆ.

ದೇಶಾದ್ಯಂತ 1122 ಶಾಖೆಗಳು, 1220 ಎಟಿಎಂಗಳನ್ನು ಹೊಂದಿರುವ, 2.27 ಲಕ್ಷ ಕೋಟಿ ರೂ. ಠೇವಣಿಯೊಂದಿಗೆ, 2.41 ಲಕ್ಷ ರೂ. ಸಾಲ ನೀಡಿರುವ ಮತ್ತು 18238 ಜನರಿಗೆ ಉದ್ಯೋಗ ನೀಡಿರುವ, 3.01 ಲಕ್ಷ ಕೋಟಿ ರೂ. ಆಸ್ತಿ ತೋರಿಸುತ್ತಿರುವ ಈ ಯೆಸ್ ಬ್ಯಾಂಕ್ ಕುಸಿದಿದ್ದು ಹೇಗೆ ಎಂಬುದೇ ಈಗ ಎಲ್ಲರ ಎದುರಿಗಿರುವ ಪ್ರಶ್ನೆ.

ರಾತ್ರೋರಾತ್ರಿ ನಡೆದಿದ್ದಲ್ಲ...: ಯೆಸ್ ಬ್ಯಾಂಕ್ ಪತನ ದಿನ ಬೆಳಗಾಗುವದರೊಳಗೆ ದಿಢೀರನೆ ನಡೆದ ಘಟನೆಯಲ್ಲ. ಕೇಂದ್ರ ಸರ್ಕಾರದ ಪ್ರಕಾರ 2017ರಲ್ಲೇ ಇದರ ಅಪಾಯದ ಸಂಕೇತಗಳು ಬರತೊಡಗಿದ್ದವು. ಅವುಗಳನ್ನು ಮೊಗ್ಗಿದ್ದಾಗಲೇ ಚಿವುಟಿ ಹಾಕದೇ ಇದ್ದದ್ದು ಈಗಿನ ಸ್ಥಿತಿಗೆ ಕಾರಣ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು. ಬ್ಯಾಂಕುಗಳಲ್ಲಿ ಕನಿಷ್ಠ 4-5 ರೀತಿಯ ತಪಾಸಣೆ, ಆಡಿಟ್ ಮತ್ತು ತನಿಖೆಗಳು ವರ್ಷಪೂರ್ತಿ ನಡೆಯುತ್ತಿರುತ್ತವೆ. ಹಲವು ರೀತಿಯ ಅಂತರಿಕ ಇನ್​ಸ್ಪೆಕ್ಷನ್​ಗಳೂ ನಡೆಯುತ್ತಿರುತ್ತವೆ. ಇದಕ್ಕೆ ಹೊರತಾಗಿ ಬಾಹ್ಯ ಲೆಕ್ಕಪರಿಶೋಧಕರು ಮತ್ತು ಹಲವು ವಿಶೇಷ ಸಂದರ್ಭಗಳಲ್ಲಿ ಕೇಂದ್ರ ವಿಚಕ್ಷಣ ಮತ್ತು ತನಿಖಾ ಸಂಸ್ಥೆಗಳು ಬ್ಯಾಂಕ್​ನ ಇನ್​ಸ್ಪೆಕ್ಷನ್ ಮಾಡುತ್ತವೆ. ಈ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ದಾಖಲೆ ತೋರಿಸಿ, ಮಾಹಿತಿ ನೀಡಿ ಸುಸ್ತಾಗುತ್ತಾರೆ! ಈ ಎಲ್ಲಾ ತನಿಖಾಧಿಕಾರಿಗಳು ಬ್ಯಾಂಕ್ ವ್ಯವಹಾರದಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡುತ್ತಾರೆ. ಸರಿಪಡಿಸುವಂತೆ ಸೂಚನೆ ನೀಡುತ್ತಾರೆ. ಆದರೂ ಇಂಥ ವೈಫಲ್ಯಗಳು ಕಾಣುವುದೇಕೆ ಎನ್ನುವುದು ಚಿದಂಬರ ರಹಸ್ಯ!

ಪಿಎಂಸಿ ಬ್ಯಾಂಕ್ ನೆಲಕಚ್ಚಿದಾಗ ರೆಗ್ಯುಲೇಟರ್​ಗಳನ್ನು ಮತ್ತು ಲೆಕ್ಕಪರಿಶೋಧಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು; ಅವರಿಗೆ ಹೊಣೆಗಾರಿಕೆ ನಿಗದಿಪಡಿಸುವ ಬಗ್ಗೆ ಭಾರೀ ಚರ್ಚೆ ಯಾಗಿತ್ತು. ಈಗ ಅದೇ ದೃಶ್ಯಾವಳಿಗಳು ಫ್ರೇಮ್ ಟು ಫ್ರೇಮ್ ಪುನರಾವರ್ತನೆ ಆಗುತ್ತಿವೆ. ಬ್ಯಾಂಕುಗಳ ‘ದೊಡ್ಡಣ್ಣ’ ಎಸ್​ಬಿಐ ನೆರವಿಗೆ ಧಾವಿಸದಿದ್ದರೆ ಯೆಸ್ ಬ್ಯಾಂಕ್ ಠೇವಣಿದಾರರ ಬದುಕು ಅಯೋಮಯವಾಗುತ್ತಿತ್ತು.

ಪುನಶ್ಚೇತನದ ಸವಾಲು: ಪ್ರತಿ ಬಾರಿ ಒಂದು ಖಾಸಗಿ ಬ್ಯಾಂಕ್ ನೆಲಕಚ್ಚಿದಾಗ ಅದನ್ನು ಪುನಶ್ಚೇತನಗೊಳಿಸುವ ಜವಾಬ್ದಾರಿಯನ್ನು ಸಾರ್ವಜನಿಕ ರಂಗದ ಬ್ಯಾಂಕುಗಳ ಹೆಗಲಿಗೆ ಹೊರಿಸುವದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಈಗ ಕೇಳಿಬರತೊಡಗಿದೆ. 2004ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಬಾಗಿಲು ಮುಚ್ಚಿದಾಗ ಅದನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್​ನಲ್ಲಿ ವಿಲೀನಗೊಳಿಸಿ, ಠೇವಣಿದಾರರ ಹಿತ ಕಾಪಾಡಲಾಗಿತ್ತು. 2006ರಲ್ಲಿ ವೆಸ್ಟರ್ನ್ ಯೂನಿಯನ್ ಬ್ಯಾಕ್ ಬಾಗಿಲು ಮುಚ್ಚಿದಾಗ ಅದನ್ನು ಐಡಿಬಿಐ ಬ್ಯಾಂಕ್​ನಲ್ಲಿ ವಿಲೀನಗೊಳಿಸಲಾಗಿತ್ತು. ಈಗ ಯೆಸ್ ಬ್ಯಾಂಕ್ ಠೇವಣಿದಾರರಿಗೆ ಎಸ್​ಬಿಐ ಜೀವದಾನ ನೀಡುತ್ತಿದೆ. ಇವು ಠೇವಣಿದಾರರ ಹಿತದೃಷ್ಟಿಯಿಂದ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಉಳಿಸುವ ದೃಷ್ಟಿಯಿಂದ ಒಳ್ಳೆಯದೇ. ಆದರೆ, ಬಿದ್ದವರನ್ನು ಎತ್ತುವ ಪ್ರಕ್ರಿಯೆಯಲ್ಲಿ ಸದೃಢ ಬ್ಯಾಂಕುಗಳು ಬಲಹೀನವಾದರೆ? ಅಷ್ಟೇ ಅಲ್ಲ, ಈ ರೀತಿ ನೆರವು ಸಿಕ್ಕೇ ಸಿಗುತ್ತದೆ ಎಂಬ ಅಭಯವೇ ಇನ್ನಷ್ಟು ಖಾಸಗಿ ಬ್ಯಾಂಕುಗಳನ್ನು ಪತನದ ಅಂಚಿಗೆ ದೂಡಿದರೆ?

ಈ ಪತನಕ್ಕೆ ಕಾರಣ ಏನು?: ಯೆಸ್ ಬ್ಯಾಂಕ್ 2004ರಲ್ಲಿ ಆರಂಭವಾಗಿ ಬಹುಬೇಗ ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿದರೂ, ಅದು ಜನಸಾಮಾನ್ಯರ ಬ್ಯಾಂಕ್ ಆಗಿ ಕಾಣಿಸಿಕೊಳಲಿಲ್ಲ. ಬಹುತೇಕ ಒಂದನೆ ಮತ್ತು ಎರಡನೇ ಸ್ತರದ ನಗರ ಪಟ್ಟಣಗಳಿಗೆ ಸೀಮಿತವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಯಾರೂ ಈ ಬ್ಯಾಂಕಿನ ಹೆಸರೇ ಕೇಳಿರಲಿಲ್ಲ. ಗ್ರಾಹಕರಲ್ಲಿ ಐಟಿ ಕಂಪನಿಗಳು, ಕಾಪೋರೇಟ್ ಹೌಸ್​ಗಳು, 5-6 ಅಂಕಿಯ ಸಂಬಳ ಪಡೆಯುವವರೇ ಹೆಚ್ಚಾಗಿದ್ದರು. ಸಾರ್ವಜನಿಕ ರಂಗದ ಬ್ಯಾಂಕುಗಳಂತೆ, ರಸ್ತೆ ಬದಿ ವ್ಯಾಪಾರಿಗಳಿಗೆ, ಗೂಡಂಗಡಿಯವರಿಗೆ, ಗುಮಾಸ್ತರಿಗೆ, ದಿನಗೂಲಿಯವರಿಗೆ ಅಷ್ಟಾಗಿ ಸ್ಪಂದನೆ ಇರಲಿಲ್ಲವೆಂದು ಹೇಳಲಾಗುತ್ತಿದೆ.

ಅನಿಲ್ ಅಂಬಾನಿ, ಕೆಫೆ ಕಾಫೀ ಡೇ, ದಿವಾನ್ ಹೌಸಿಂಗ್, ಸಿಜಿ ಪವರ್, ವರದರಾಜ ಸಮೂಹ, ಎಸ್ಸೆಲ್ ಸಮೂಹ, ಕಾಕ್ಸ್ ಮತ್ತು ಕಿಂಗ್ಸ್, ಜೆಟ್ ಏರ್​ವೇಸ್, ರೇಡಿಯಂಟ್ ಡೆವಲಪರ್ಸ್, ಐಎಲ್​ಎಫ್​ಎಸ್, ಅಲವಿಕಾ ಮತ್ತು ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೀಡಿದ ಸಾಲ ಸುಸ್ತಿಯಾಗಿದ್ದು ಈ ಬ್ಯಾಂಕಿನ ಅವನತಿಗೆ ಒಂದು ಕಾರಣ. ವ್ಯವಹಾರ ವೃದ್ದಿಸಿ ತನ್ಮೂಲಕ ಲಾಭ ಹೆಚ್ಚಿ್ಚಲು ಬ್ಯಾಂಕಿನ ನೀತಿ ನಿಯಮಾವಳಿಗಳನ್ನು ನಿರ್ಲಕ್ಷಿಸಿ ದೊಡ್ಡ ಪ್ರಮಾಣದ ಸಾಲವನ್ನು ನೀಡಿದ್ದು ಇನ್ನೊಂದು ಕಾರಣ. ಬ್ಯಾಂಕಿನ ಹಣದಲ್ಲಿ ಸಿಎಂಡಿ ಐಷಾರಾಮಿ ಜೀವನ ಸಾಗಿಸಿದ್ದು ಮತ್ತೊಂದು ಕಾರಣ. ಬೇರೆ ಬ್ಯಾಂಕುಗಳಲ್ಲಿ ತಿರಸ್ಕರಿಸಲ್ಪಟ್ಟ ಸಾಲದ ಕೋರಿಕೆಯನ್ನು ಇಲ್ಲಿ ಮಾನ್ಯ ಮಾಡಿದ್ದು ಮಗುದೊಂದು ಕಾರಣ. ಹೀಗೆ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ.

ಕೇಳಿದವರಿಗೆಲ್ಲ ‘ಯೆಸ್’!: ಸಾಲ ಕೇಳಿದವರಿಗೆಲ್ಲ ಯೆಸ್ ಎಂದಿದ್ದೇ ಯೆಸ್ ಬ್ಯಾಂಕಿನ 54000 ಕೋಟಿ ರೂ. ನಷ್ಟಕ್ಕೆ ಕಾರಣವಾಯಿತು. ವಿಚಿತ್ರವೆಂದರೆ ಈ ಬ್ಯಾಂಕಿನಲ್ಲಿ ಠೇವಣಿಗಿಂತ (2.27 ಲಕ್ಷ ಕೋಟಿ ರೂ.) ಹೆಚ್ಚು ಸಾಲ (2.42 ಲಕ್ಷ ಕೋಟಿ ರೂ.) ನೀಡಿರುವುದು. ಇದನ್ನ ಬ್ಯಾಂಕಿಂಗ್ ಇತಿಹಾಸದ ಮಹಾದುರಂತ ಎಂದು ಬಣ್ಣಿಸುತ್ತಾರೆ ಬ್ಯಾಂಕರುಗಳು.

ಇದರೊಟ್ಟಿಗೆ ಬ್ಯಾಂಕಿನ ಸಂಪೂರ್ಣ ಹತೋಟಿ ಪಡೆಯಲು ರಾಣಾ ಕಪೂರ್ ಮತ್ತು ಅಶೋಕ್ ಕಪೂರ್​ರ ಪತ್ನಿ ಮಧು ಕಪೂರ್ ಮಧ್ಯೆ ನಡೆದ ಸುದೀರ್ಘ ಕಾಪೋರೇಟ್ ಕಾನೂನು ಹೋರಾಟ, ಬ್ಯಾಂಕಿನ ಆಡಳಿತ ವರ್ಗದ ಆಂತರಿಕ ಕಚ್ಚಾಟ ಕೂಡ ಬ್ಯಾಂಕಿನ ಪತನಕ್ಕೆ ಕಾರಣವಾದವು. ಈ ಮಧ್ಯೆ ಬ್ಯಾಂಕಿನ ಭವಿಷ್ಯದ ಬಗ್ಗೆ ವದಂತಿಗಳು ಹರಡಲು ಆರಂಭವಾಗಿದ್ದರಿಂದ ದೊಡ್ಡ ಪ್ರಮಾಣದ ಠೇವಣಿ ಹಿಂತೆಗೆತಕ್ಕೆ ಕಾರಣವಾಯಿತು. ಕೆಲವು ತಿಂಗಳ ಹಿಂದೆ ತಿರುಪತಿ ದೇವಸ್ಥಾನ ಸಮಿತಿ ತನ್ನ 1300 ಕೋಟಿ ರೂ. ಠೇವಣಿ ಹಿಂಪಡೆದಿದ್ದು ಬ್ಯಾಂಕಿನ ಜಂಘಾಬಲವನ್ನೇ ಉಡುಗಿಸಿತ್ತು. 2019ರ ಮಾರ್ಚ್​ನಿಂದ ಸೆಪ್ಟೆಂಬರ್​ವರೆಗೆ ಗ್ರಾಹಕರು 18000 ಕೋಟಿ ರೂ. ಠೇವಣಿ ಹಿಂತೆಗೆದುಕೊಂಡರು.

ರಾಷ್ಟ್ರೀಕರಣ ಮದ್ದೇ?

ಬ್ಯಾಂಕ್ ಕಾರ್ವಿುಕ ಸಂಘಗಳು ಕಳೆದ ಏಳು ದಶಕಗಳಿಂದ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಹೋರಾಡುತ್ತಲೇ ಇವೆ. ಕೋಟ್ಯಂತರ ಜನರ ಉಳಿತಾಯದ ದುಡ್ಡನ್ನು ಕೆಲವೇ ಉದ್ಯಮಿಗಳ ಕೈಯಲ್ಲಿ ನೀಡುವುದರಲ್ಲಿನ ಅಪಾಯವನ್ನು ಕೂಗಿ ಹೇಳುತ್ತಲೇ ಇವೆ. ಈ ಬೇಡಿಕೆಯ ಹಿಂದೆ ವೈಯಕ್ತಿಕ ಹಿತಾಸಕ್ತಿಯನ್ನು ಹುಡುಕುವ ಪ್ರಯತ್ನವಾಯಿತೇ ವಿನಾ ಸತ್ಯವನ್ನು ಅರಿಯುವ ಯತ್ನ ಆಗಲಿಲ್ಲ. ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿ ಮುಷ್ಕರ ಹೂಡಿದಾಗ ಬ್ಯಾಂಕ್​ಗಳ ಖಾಸಗೀಕರಣಕ್ಕೆ ಹಲವರು ಒತ್ತಾಯಿಸಿದರು. ಈಗ ಅವರೇನು ಹೇಳುತ್ತಾರೋ...?

ಷೇರುಗಳ ಮಾರಾಟಕ್ಕೆ ಷರತ್ತು

ಮಾ. 13ರಂದು ಸರ್ಕಾರ ನೋಟಿಫೈ ಮಾಡಿರುವ ಯೆಸ್ ಬ್ಯಾಂಕ್​ನ ಅಂತಿಮ ಪುನರ್ನಿರ್ವಣ (ರಿಕನ್ಸ್​ಟ್ರಕ್ಷನ್) ಯೋಜನೆ ಅನ್ವಯ, ಈಗಿರುವ ಷೇರುದಾರರ ಶೇಕಡ 75ರಷ್ಟು ಷೇರುಗಳಿಗೆ 3 ವರ್ಷಗಳ ಲಾಕ್​ಇನ್ ಅವಧಿ ನಿಗದಿಪಡಿಸಲಾಗಿದೆ. ನೂರಕ್ಕಿಂತ ಕಡಿಮೆ ಷೇರು ಹೊಂದಿರುವವರು ಮಾತ್ರ ಎಲ್ಲ ಷೇರುಗಳನ್ನು ಮಾರಬಹುದು. ಭಾರತದ ಕಾರ್ಪೆರೇಟ್ ಇತಿಹಾಸದಲ್ಲೇ ಈ ರೀತಿಯ ಕ್ರಮ ಇದೇ ಮೊದಲು. ಯೆಸ್ ಬ್ಯಾಂಕ್​ನಲ್ಲಿ 16.18 ಲಕ್ಷ ರಿಟೇಲ್ ಷೇರುದಾರರಿದ್ದು, ಬಹುತೇಕರು ನೂರಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. 2018ರ

ಆಗಸ್ಟ್​ನಲ್ಲಿ ಈ ಬ್ಯಾಂಕು ಉನ್ನತ ಸ್ಥಿತಿಯಲ್ಲಿದ್ದಾಗಲೂ ಇದರ ನೂರು ಷೇರುಗಳು ಕೇವಲ 39,320 ರೂ. ಬೆಲೆ ಬಾಳುತ್ತಿದ್ದವು. ರಿಟೇಲ್ ಷೇರುದಾರರೆಂದರೆ 2 ಲಕ್ಷ ರೂ.ವರೆಗೆ ಷೇರು ಹೊಂದಿರುವವರು ಎಂದರ್ಥ. ಒಟ್ಟಾರೆ ರಿಟೇಲ್ ಷೇರುದಾರರು ಯೆಸ್ ಬ್ಯಾಂಕ್​ನ ಶೇಕಡ 43.66ರಷ್ಟು ಷೇರುಗಳನ್ನು ಹೊಂದಿದ್ದಾರೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಷೇರು ಹೊಂದಿರುವವರ ಪಾಲು ಶೇಕಡ 4.30ರಷ್ಟಿದೆ. ಮಾ. 16ರಂದು ಷೇರು ಮಾರುಕಟ್ಟೆ ಪುನರಾರಂಭವಾದಾಗ, ಯೆಸ್ ಬ್ಯಾಂಕ್​ನ ನೂರಕ್ಕಿಂತ ಹೆಚ್ಚು ಷೇರು ಹೊಂದಿರುವವರು ಶೇಕಡ 25ರಷ್ಟು ಷೇರುಗಳನ್ನು ಮಾತ್ರ ಮಾರಬಹುದು. ಉಳಿದವುಗಳಿಗೆ ಲಾಕ್​ಇನ್ ಅವಧಿ ಅನ್ವಯವಾಗುತ್ತದೆ. ‘‘ಇದರಿಂದ ಷೇರುದಾರರಿಗೆ ನಷ್ಟವೇನಿಲ್ಲ. ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯಂತೂ ಇಲ್ಲ. ಸಾಮಾನ್ಯ ಸ್ಥಿತಿಯಲ್ಲಿ ಈ ಷೇರುಗಳ ಬೆಲೆ ಸೊನ್ನೆಯಾಗಿರಬೇಕಾಗಿತ್ತು. ಸರ್ಕಾರ ಮುತುವರ್ಜಿ ವಹಿಸಿ, ಸ್ವಲ್ಪವಾದರೂ ಬೆಲೆ ಸಿಗುವಂತೆ ಮಾಡುತ್ತಿದೆ. 3 ವರ್ಷಗಳ ನಂತರವೂ ಬ್ಯಾಂಕು ಉಳಿದಿದ್ದರೆ ಷೇರುದಾರರಿಗೆ ಒಳ್ಳೆಯ ದರ ಸಿಗುತ್ತದೆ’’ ಎನ್ನುತ್ತಾರೆ ಐಡಿಬಿಐ ಕ್ಯಾಪಿಟಲ್​ನ ಸಂಶೋಧನಾ ವಿಭಾಗದ ಮುಖ್ಯಸ್ಥ ಎ.ಕೆ. ಪ್ರಭಾಕರ್. ಆದರೆ 3 ವರ್ಷಗಳ ನಂತರದ ಸ್ಥಿತಿ ಬಗ್ಗೆ ಯೆಸ್ ಬ್ಯಾಂಕ್ ಷೇರುದಾರರಿಗೆ ಆತಂಕ ಇರುವುದಂತೂ ಸುಳ್ಳಲ್ಲ.

ಸುದೀರ್ಘ ಇತಿಹಾಸ

ಖಾಸಗಿ ಬ್ಯಾಂಕುಗಳ ವೈಫಲ್ಯಕ್ಕೆ ಈ ದೇಶದಲ್ಲಿ ದೀರ್ಘ ಇತಿಹಾಸ ಇದೆ. 1948ರಿಂದ 1968ರವರೆಗಿನ ಅವಧಿಯಲ್ಲಿ 736 ಖಾಸಗಿ ಬ್ಯಾಂಕುಗಳು ಮುಚ್ಚಿವೆ. 1969ರಿಂದ ಈವರೆಗೆ 38 ಬ್ಯಾಂಕ್​ಗಳು ಬಾಗಿಲು ಹಾಕಿವೆೆ. ಇವುಗಳಲ್ಲಿ ಬಹುತೇಕ ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳಲ್ಲಿ ವಿಲೀನಗೊಳಿಸಿ ಗ್ರಾಹಕರನ್ನು ರಕ್ಷಿಸಲಾಗಿದೆ.

ಐಡೆಂಟಿಟಿ ಉಳಿಸಿಕೊಳ್ಳುವುದು ಕಷ್ಟ

ಕಳೆದ ಒಂದು ವರ್ಷದಿಂದ ಈ ಬ್ಯಾಂಕನ್ನು ಕೋಟಕ್ ಮಹೀಂದ್ರ ಬ್ಯಾಂಕ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸುತ್ತಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಆರ್​ಬಿಐ ಕಡಿವಾಣದ ನಂತರ ಈಗಾಗಲೇ ಈ ಬ್ಯಾಂಕ್​ಗೆ ಎಸ್​ಬಿಐ ‘ಆಕ್ಸಿಜನ್’ ಪೂರೈಸಿ ಜೀವದಾನ ನೀಡಿದೆ. ಅಂತಿಮವಾಗಿ ಇದು ಸಂಪೂರ್ಣವಾಗಿ ಅದರ ಜೋಳಿಗೆಗೇ ಬಿದ್ದರೂ ಆಶ್ಚರ್ಯವಿಲ್ಲ. ಆಗ ಈ ಬ್ಯಾಂಕ್ ತನ್ನ ಐಡೆಂಟಿಟಿ ಉಳಿಸಿಕೊಳ್ಳುವುದು ಕಷ್ಟ.

ರಮಾನಂದ ಶರ್ಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net