ಕಾಫಿ, ಕಾಳುಮೆಣಸಿಗೆ ಕಾಳೆ ರೋಗ

photo (1)
Published on

| ನಿತ್ಯಾನಂದ ಶಿವಗಂಗೆ, ಚಿಕ್ಕಮಗಳೂರು

ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ ಆರಂಭಗೊಂಡು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ಕಾಫಿ ಮತ್ತು ಕಾಳುಮೆಣಸು ಬೆಳೆಗಾರರಿಗೆ ತಿಂಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ನಿರಾಸೆ ಮೂಡಿಸಿದೆ. ನಿರಂತರ ಮಳೆ ಹಾಗೂ ವಿಪರೀತ ಶೀತ ವಾತಾವರಣದಿಂದಾಗಿ ಬೆಳೆಗೆ ಹಿಂದೆಂದೂ ಕಾಣದ ಕೊಳೆ ರೋಗ ಕಾಣಿಸಿಕೊಂಡಿದೆ. ಶೇ.30 ಕಾಫಿ, ಶೇ.60ಕ್ಕಿಂತಲೂ ಹೆಚ್ಚು ಕಾಳುಮೆಣಸು ನಷ್ಟವಾಗುವ ಸಾಧ್ಯತೆಯಿದೆ. ಕಾಳುಮೆಣಸು ಬೆಳೆಗಾರರಂತೂ ಬಳ್ಳಿಗಳು ಉಳಿದರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದಾರೆ.

ಮಾರ್ಚ್, ಏಪ್ರಿಲ್​ನಲ್ಲಿಯೇ ಮಳೆ ಆರಂಭಗೊಂಡಿದ್ದರಿಂದ ಎರಡೂ ಬೆಳೆಗಳು ಅತಿಹೆಚ್ಚು ಹೂವು ಕಚ್ಚಿದ್ದವು. ಆದರೆ ಮಳೆ ಬಿಡುವನ್ನೇ ನೀಡದಿದ್ದರಿಂದ ಈಗ ಕೊಳೆರೋಗಕ್ಕೆ ತುತ್ತಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಲಾರಂಭಿಸಿದೆ. ಕಾಫಿಯಲ್ಲಿ ನಿರೀಕ್ಷೆಗೂ ಮೀರಿ ಹೂವು ಬಂದಿತ್ತಾದರೂ ಕಾಳುಗಟ್ಟುವ ಸಮಯದಲ್ಲಿ ಮಳೆ ಬಿಡದ ಕಾರಣ ಕೊಳೆ ರೋಗ ಕಾಣಿಸಿಕೊಂಡಿತ್ತು. ಬಿಸಿಲೇ ಬಾರದ ಕಾರಣ ಕಾಯಿಗಟ್ಟಿದ ಕಾಫಿ ಉದುರಲಾರಂಭಿಸಿದೆ. ದೇಶದಲ್ಲಿ ವಾರ್ಷಿಕ 3.65 ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 2 ಲಕ್ಷ ಟನ್​ಗೂ ಹೆಚ್ಚು. ಆದರೆ ಈ ಬಾರಿ ಕರ್ನಾಟಕ ಒಂದರಲ್ಲೇ 75 ಸಾವಿರ ಟನ್ ಕಾಫಿ ನಷ್ಟವಾಗುವ ಅಂದಾಜಿದೆ.

ಹಳದಿ ಬಣ್ಣಕ್ಕೆ ಮೆಣಸು ಬಳ್ಳಿ: ಕಾಳುಮೆಣಸಿನ ಬಳ್ಳಿಯನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ನಿರಂತರವಾಗಿ ಐದು ತಿಂಗಳಿಂದ ಮಳೆ ಸುರಿಯುತ್ತಿರುವುದರಿಂದ ಗರಿಗಳು ಉದುರಿದ್ದು, ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಲಾರಂಭಿಸಿವೆ. ಕಾಳುಮೆಣಸು ಗರಿ ಕಟ್ಟುವ ಅವಧಿಯಲ್ಲಿ ಬಿಸಿಲಿನ ವಾತಾವರಣ ಇದ್ದಲ್ಲಿ ಹೆಚ್ಚಿನ ಇಳುವರಿ ಬರುತ್ತದೆ. ಆದರೆ ಈ ಬಾರಿ ಜೂನ್, ಜುಲೈನಲ್ಲಿ ಬಿಸಿಲನ್ನೇ ಕಂಡಿಲ್ಲ. ಒಂದು ಬಾರಿ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿದಲ್ಲಿ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಮತ್ತಷ್ಟು ಬೆಲೆ ಇಳಿಕೆ ದಾಖಲಾಗಲಿದೆ ಎಂಬ ತಜ್ಞರ ವರದಿ ನಡುವೆಯೂ ಕಾಫಿ ಧಾರಣೆ ಏರಿಕೆಯಾಗುತ್ತಿರುವುದು ಬೆಳೆಗಾರರ ನೆಮ್ಮದಿಗೆ ಕಾರಣವಾಗಿದೆ. | ದಿನೇಶ್ ಸುಳ್ಳಕ್ಕಿ 10 ದಿನಗಳಿಂದ ಕಾಫಿ ಮಾರುಕಟ್ಟೆ ಏರುಗತಿಯಲ್ಲಿ ಸಾಗುತ್ತಿದ್ದು ಮತ್ತಷ್ಟು ಬೆಲೆ ಏರಿಕೆ ಸಾಧ್ಯತೆ ದಟ್ಟವಾಗಿದೆ. | ನಡಹಳ್ಳಿ ಕುಮಾರ್ ಕಾಫಿ ವರ್ತಕ

ಬೆಲೆ ವ್ಯತ್ಯಾಸ

ಕೊಡಗು, ಚಿಕ್ಕಮಗಳೂರು ಕಾಫಿ ಕ್ಯೂರಿಂಗ್ ವರ್ಕ್ಸ್​ಗಳಲ್ಲಿ ಭಾರಿ ಬೆಲೆ ವ್ಯತ್ಯಾಸವಿರುವುದರಿಂದ ಬೆಳೆಗಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ರೊಬಸ್ಟಾ ಕಾಫಿ ಧಾರಣೆ ಕೊಡಗಿನಲ್ಲಿ ಪ್ರತಿ ಇಪಿ ಧಾರಣೆ 390 ರಿಂದ 400 ರೂ. ನಮೂದಾಗಿದೆ. ಆದರೆ, ಚಿಕ್ಕಮಗಳೂರಿನಲ್ಲಿ 420ರಿಂದ 430 ರೂ.ವರೆಗೆ ದಾಖಲಿಸಲಾಗುತ್ತಿದೆ. ಇದರಿಂದ ಬೆಳೆಗಾರರು ಮಾರಾಟದ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುವಂತಾಗಿದೆ.

| ಕಾಂತರಾಜ್ ಹೊನ್ನೇಕೋಡಿ

ಸಕಲೇಶಪುರ ಕಾಫಿ ಧಾರಣೆಯ ನಿಧಾನಗತಿ ಏರಿಕೆ ಆತಂಕದಲ್ಲಿದ್ದ ಬೆಳೆಗಾರರ ಮುಖದಲ್ಲೀಗ ಮಂದಹಾಸ ಮೂಡುತ್ತಿದೆ. 2023-2024ನೇ ಸಾಲಿನ ಮಾರುಕಟ್ಟೆ ಅವಲೋಕಿಸಿದ್ದ ಬೆಳೆಗಾರರು ಕಾದುನೋಡುವ ತಂತ್ರ ಅನುಸರಿಸಿ ಬೆಳೆ ಶೇಖರಿಸಿಟ್ಟಿದ್ದರು. ಪ್ರಸಕ್ತ ವರ್ಷದ ಮಾರುಕಟ್ಟೆಯ ಆರಂಭದ 2 ತಿಂಗಳು ತೀವ್ರಗತಿಯಲ್ಲಿ ಏರಿಕೆ ಕಂಡ ಬೆಲೆ ನಂತರ ಇಳಿಕೆಯತ್ತ ಸಾಗಿದ್ದರಿಂದ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿತ್ತು.

ಜಗತ್ತಿನಲ್ಲೇ ಅತಿಹೆಚ್ಚು ಕಾಫಿ ಬೆಳೆಯುವ ಬ್ರೆಜಿಲ್, ಇಂಡೊನೇಷ್ಯಾದಲ್ಲಿ ಜೂನ್, ಜುಲೈಗೆ ಕೊಯ್ಲು ಆರಂಭವಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆ ದೇಶಗಳ ಕಾಫಿ ಮಾರುಕಟ್ಟೆ ಪ್ರವೇಶಿಸುತ್ತದೆ. ಇದರಿಂದಾಗಿ ದೇಶೀಯ ಕಾಫಿಗೆ ಮಾರುಕಟ್ಟೆ ದೊರಕುವುದು ಅಸಾಧ್ಯ ಎಂಬ ಮಾತುಗಳು ಹರಿದಾಡುತ್ತಿತ್ತು. ಆದರೆ, ಅದೆಲ್ಲ ಹುಸಿಯಾಗುವಂತೆ ಕಳೆದ 10 ದಿನಗಳಿಂದ ಕಾಫಿ ಧಾರಣೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ.

ಎಷ್ಟಿತ್ತು ಎಷ್ಟಾಗಿದೆ?: 2024-2025ನೇ ಸಾಲಿನ ಮಾರುಕಟ್ಟೆ ಆರಂಭದಲ್ಲಿ ಪ್ರತಿ 50 ಕೆಜಿ ರೋಬಸ್ಟಾ 11 ಸಾವಿರ ರೂ. ಇದ್ದರೆ ನಂತರದ ಎರಡು ತಿಂಗಳಿನಲ್ಲಿ 14 ಸಾವಿರ ರೂ. ವರೆಗೂ ಏರಿಕೆ ದಾಖಲಿಸಿತ್ತು. ಅರೇಬಿಕಾ ಚರಿ ಆರಂಭದಲ್ಲಿ 14 ಸಾವಿರ ರೂ.ಬೆಲೆ ದಾಖಲಿಸಿದ್ದರೆ ನಂತರದ ದಿನಗಳಲ್ಲಿ 18 ಸಾವಿರ ರೂ.ಗಳಿಗೆ ತಲುಪಿತ್ತು. ಅರೇಬಿಕಾ ಪಾರ್ಚಮೆಂಟ್(ಬೇಳೆ) 20 ಸಾವಿರ ರೂ.ಗಳಿಂದ ಆರಂಭವಾಗಿ 29 ಸಾವಿರ ರೂ.ಗಳಿಗೆ ತಲುಪಿ, ಮೂರು ತಿಂಗಳ ನಂತರ ಇಳಿಮುಖವಾಗತೊಡಗಿತ್ತು. ಬೆಳೆಗಾರರು, ಶೇಖರಿಸಿಟ್ಟ ಕಾಫಿಯನ್ನು ಮಾರಾಟ ಮಾಡಲು ಚಿಂತಿಸುವಂತಾಗಿತ್ತು. ಕಳೆದ ಎರಡು ತಿಂಗಳಿನಿಂದ ರೊಬಸ್ಟಾ ಚರಿ ಕಾಫಿ ಧಾರಣೆ 8,500 ರೂ. ಆಜುಬಾಜಿನಲ್ಲಿದ್ದರೆ, ಅರೇಬಿಕಾ ಚರಿ ಹಾಗೂ ಪಾರ್ಚಮೆಂಟ್ ಧಾರಣೆ ಮಾರುಕಟ್ಟೆಯ ಆರಂಭದ ದರಕ್ಕಿಂತ ಕಡಿಮೆಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆ ವಿದ್ಯಮಾನಗಳು ದೇಶೀಯ ಕಾಫಿ ಮಾರುಕಟ್ಟೆ ಮತ್ತಷ್ಟು ಕುಸಿಯಲಿದೆ ಎಂದು ಸೂಚಿಸುತ್ತಿದ್ದರಿಂದ ಸಾಕಷ್ಟು ಬೆಳೆಗಾರರು ಒಲ್ಲದ ಮನಸ್ಥಿತಿಯಲ್ಲೇ 8,500 ರೂ.ಗೆ ಮಾರಾಟ ಮಾಡಿದ್ದರು. ಆದರೆ ತಜ್ಞರ ನಿರೀಕ್ಷೆಗೆ ವ್ಯತಿರಿಕ್ತ ಎಂಬಂತೆ ಆಗಸ್ಟ್ ಮೊದಲ ವಾರದಲ್ಲಿ 50 ಕೆಜಿ ರೊಬಸ್ಟಾ ಧಾರಣೆ 8,500 ರೂ.ಗಳಿದ್ದರೆ ಕೇವಲ 10 ದಿನಗಳಲ್ಲಿ 10,500 ರೂ.ಗಳಿಂದ 11 ಸಾವಿರ ರೂ.ಗೆ ಏರಿಕೆ ಕಂಡಿದೆ. ಅರೇಬಿಕಾ ಗಣನೀಯ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆಯಾದರೂ ತಾಲೂಕಿನಲ್ಲಿ ಬೆಳೆಗಾರರ ಸಂಖ್ಯೆ ನಗಣ್ಯವಾಗಿದೆ.

ಕೊಳೆ ರೋಗಕ್ಕೆ ಸಂಬಂಧಿಸಿ ದಂತೆ ಈಗಾಗಲೇ ಕಾಫಿ ಬೋರ್ಡ್ ನಿಂದ ಸರ್ವೆ ನಡೆಸಲಾಗುತ್ತಿದೆ. ಮಳೆ ಮುಂದುವರಿ ದಿರುವುದರಿಂದ ನಷ್ಟದ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಶೇ.33 ಬೆಳೆ ನಷ್ಟವಾದಲ್ಲಿ ಬೆಳೆಗಾರರಿಗೆ ಎನ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್​ನಿಂದ ಪರಿಹಾರ ಸಿಗಲಿದೆ. | ದಿನೇಶ್ ದೇವವೃಂದ, ಕಾಫಿ ಮಂಡಳಿ ಅಧ್ಯಕ್ಷ ನಿರಂತರವಾಗಿ ಸುರಿಯುತ್ತಿರು ವುದರಿಂದಾಗಿ ಕೊಳೆ ರೋಗ ಹೆಚ್ಚಾಗಿದೆ. ಕಾಫಿ ಬೆಳೆ ಶೇ.50 ಕೈಸೇರಬಹುದು. ಆದರೆ ಕಾಳು ಮೆಣಸಿನ ಬಳ್ಳಿಗಳನ್ನು ಉಳಿಸಿಕೊಳ್ಳುವುದು ಕಷ್ಟ. | ಹೊಲದಗದ್ದೆ ಗಿರೀಶ್ ರೈತ

ಆಮದು ಸ್ಥಿತಿ

ವಾರ್ಷಿಕ ಕರ್ನಾಟಕ ಒಂದರಲ್ಲಿಯೇ ಸರಾಸರಿ ಒಂದು ಲಕ್ಷ ಟನ್ ಕಾಳುಮೆಣಸು ಉತ್ಪಾದಿಸಲಾಗುತ್ತಿತ್ತು. ಆದರೆ ಈ ಬಾರಿ ಶೇ.50ಕ್ಕಿಂತಲೂ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಭಾರತದಿಂದ 20 ಸಾವಿರ ಟನ್​ಗೂ ಅಧಿಕ ಕಾಳುಮೆಣಸು ರಫ್ತು ಮಾಡಲಾಗುತ್ತಿತ್ತು. ಇದರಿಂದ ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿತ್ತು. ಈ ಬಾರಿ ಆಮದು ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ.

ಗುಣಮಟ್ಟ ಕುಸಿತ

ಸಾಮಾನ್ಯವಾಗಿ ನವೆಂಬರ್​ನಿಂದ ಜನವರಿವರೆಗೆ ಕೊಯ್ಲು ನಡೆಯುವ ಅರೇಬಿಕಾ ಕಾಫಿ ಹಾಗೂ ಡಿಸೆಂಬರ್​ನಿಂದ ಮಾರ್ಚ್​ವರೆಗೆ ಕೊಯ್ಲು ನಡೆಯುವ ರೊಬಸ್ಟಾ ಎಷ್ಟೇ ಕಾಳಜಿ ವಹಿಸಿ ಶೇಖರಿಸಿಟ್ಟರೂ ತೇವಾಂಶ ಹೀರುತ್ತದೆ. ಸಾಕಷ್ಟು ಬೆಳೆಗಾರರು ಶೇಖರಿಸಿಟ್ಟ ಕಾಫಿಯ ಗುಣಮಟ್ಟ ಹಾಳಾಗಿರುವುದರಿಂದ ಬೆಲೆ ಏರಿಕೆಯಾಗಿದ್ದರೂ ಉತ್ತಮ ಬೆಲೆ ದೊರಕದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net