

ನವದೆಹಲಿ: ಸಾಲಗಳನ್ನು ಮರುಹೊಂದಾಣಿಕೆ ಮಾಡುವ (ರೀಸ್ಟ್ರಕ್ಚರ್) ಅಧಿಕಾರ ಬ್ಯಾಂಕ್ಗಳಿಗೆ ಇದೆ. ಆದರೆ ಸಾಲದ ಕಂತುಗಳ (ಇಎಂಐ) ಮರುಪಾವತಿಗೆ ನೀಡಿರುವ ವಿನಾಯಿತಿ ಅವಧಿಯನ್ನು (ಮಾರಟೋರಿಯಂ) ಬಳಸಿಕೊಂಡು ಪ್ರಾಮಾಣಿಕ ಗ್ರಾಹಕರನ್ನು ಬ್ಯಾಂಕ್ಗಳು ದಂಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
2020ರ ಮಾರ್ಚ್ ಒಂದರಿಂದ ಎಲ್ಲ ಸಾಲಗಳ ಇಎಂಐ ಮರುಪಾವತಿಯನ್ನು ಮೂರು ತಿಂಗಳವರೆಗೆ ಮುಂದೂಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಕಾಶ ಕಲ್ಪಿಸಿತ್ತು. ನಂತರ ಆಗಸ್ಟ್ 31ರ ವರೆಗೆ ಅದನ್ನು ವಿಸ್ತರಿಸಲಾಗಿತ್ತು. ವಿನಾಯಿತಿ ಅವಧಿಯಲ್ಲಿ ಬಡ್ಡಿ ವಿಧಿಸುವುದು ಗ್ರಾಹಕರಿಗೆ ದೊಡ್ಡ ಹೊಡೆತ ಎಂದು ಕೋರ್ಟ್ಗೆ ಅರ್ಜಿದಾರರು ತಿಳಿಸಿದ್ದಾರೆ.
ಸಾಲದ ಕಂತುಗಳ ಮೇಲೆ ಬಡ್ಡಿ ವಿಧಿಸುವ ವಿಚಾರದ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠ ನಡೆಸುತ್ತಿದೆ. ವಿನಾಯಿತಿ ಅವಧಿಯನ್ನು ಎರಡು ವರ್ಷ ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.