

ಕರೊನಾತಂಕ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ತುತ್ತಾಗಿರುವ ಅನ್ನದಾತರಿಗೆ ಆಸರೆಯಾಗಲು ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಧಾವಿಸಿದ್ದು, ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಿದೆ.
ರೈತರಿಗೆ ಮಾರ್ಗಸೂಚಿಗಳು
ರೈತರು ತಮಗೆ ಅನುಕೂಲಕರವಾದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ವಾರದ ಯಾವುದೇ ದಿನ ಬೆಳಗ್ಗೆ 9 ಗಂಟೆ ನಂತರ ನೋಂದಣಿಗೆ ಅವಕಾಶ.
ಲಾಕ್ಡೌನ್ ಮುಂದುವರಿದಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಪ್ರಾರಂಭದಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆಯಡಿ ಬರುವ ‘ಪ್ರೂಟ್ಸ್’ (ಊಖಿಐಖಖ) ತಂತ್ರಾಂಶದಲ್ಲಿ ನೋಂದಣಿಯಾಗಿರುವ ಸಂಖ್ಯೆಯೊಂದಿಗೆ ಹಾಲಿನ ಸಂಘಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಸರಬರಾಜು ಮಾಡಲು ನೋಂದಾಯಿಸಿ ಸ್ವೀಕೃತ ಪತ್ರ ಪಡೆಯಬೇಕು. ‘ಫ್ರೂಟ್ಸ್’ ನೋಂದಣಿ ಪಡೆಯಲು ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಹತ್ತಿರದ ರೈತ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ.
ನೋಂದಣಿ ದೃಢೀಕರಣದೊಂದಿಗೆ ರೈತರು ಬೆಳೆದಿರುವ ಮೆಕ್ಕೆಜೋಳ ಮಾದರಿಯನ್ನು ಹಾಲು ಒಕ್ಕೂಟಗಳ ಮೂಲಕ ಪಶು ಆಹಾರ ಘಟಕಕ್ಕೆ ತಲುಪಿಸುವ ವ್ಯವಸ್ಥೆ.
ಘಟಕಕ್ಕೆ ತಲುಪಿದ ಮೆಕ್ಕೆಜೋಳ ಗುಣಮಟ್ಟ ಪರೀಕ್ಷೆಯಲ್ಲಿ ಸ್ವೀಕಾರವಾದಲ್ಲಿ ರೈತರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಮಾಹಿತಿ ರವಾನೆ. ನಿಗದಿಪಡಿಸಿದ ದಿನಾಂಕ, ಸಮಯ ಮತ್ತು ನಿಗದಿತ ಪ್ರಮಾಣದ ಮೆಕ್ಕೆಜೋಳವನ್ನು ನೋಂದಣಿ ರಶೀತಿ ಯೊಂದಿಗೆ ಈ ಹಿಂದೆ ನೀಡಿದ ಮಾದರಿ ಗುಣಮಟ್ಟದ ಪ್ರಕಾರ ಘಟಕಕ್ಕೆ ಕಳುಹಿಸಬೇಕು. ತೂಕದ ಮಾಹಿತಿ ಎಸ್ಎಂಎಸ್ ಮೂಲಕ ನೀಡಿಕೆ.
ಒಂದೊಮ್ಮೆ ಮಾದರಿ ತಿರಸ್ಕೃತಗೊಂಡರೂ ಎಸ್ಎಂಎಸ್ ಮೂಲಕ ಮಾಹಿತಿ ರವಾನೆ. ನೀಡಿದ್ದ ಮಾದರಿಗೆ ಬದಲಾಗಿ ಕಳಪೆ ಗುಣಮಟ್ಟದ ಮೆಕ್ಕೆಜೋಳ ತಂದಲ್ಲಿ ಗುಣಮಟ್ಟದ ಪರೀಕ್ಷೆಗೊಳಪಡಿಸಿ ತಿರಸ್ಕೃತಗೊಂಡಲ್ಲಿ, ಸ್ವಂತ ಖರ್ಚಿನಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋಗಬೇಕು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪರಿಮಾಣ ತಂದರೂ ರೈತರ ಸ್ವಂತ ಖರ್ಚಿನಲ್ಲೇ ವಾಪಸ್.
ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ. ಆಧಾರ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಸೀಡಿಂಗ್ ಆಗಿರುವ ಬಗ್ಗೆ ಪರಿಶೀಲನೆ.
ರೈತರಿಂದ ನೇರ ಖರೀದಿ ಪ್ರಕ್ರಿಯೆಯು ಕರ್ನಾಟಕ ಹಾಲು ಮಂಡಳಿಯಿಂದ ಅವಶ್ಯಕತೆಗೆ ಅನುಗುಣವಾಗಿ ಮುಂದುವರಿಸುವ ಉದ್ದೇಶ.
ಷರತ್ತುಗಳು
ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 20 ಕ್ವಿಂಟಾಲ್ ಸರಬರಾಜಿಗೆ ಸೀಮಿತ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ರೈತರೇ ನೇರವಾಗಿ ಸರಬರಾಜು. ರೈತರು ಕೆಎಂಎಫ್ ನಿಗದಿಪಡಿಸಿದ ಪಶು ಆಹಾರ ಘಟಕಕ್ಕೆ ಸ್ವಂತ ವೆಚ್ಚದಲ್ಲಿ ಸಾಗಾಣಿಕೆ ಉತ್ತಮ ಸ್ಥಿತಿಯಲ್ಲಿರುವ 50 ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿ ಸರಬರಾಜಿಗೆ ಸೂಚನೆ. ಗೋಣಿ ಚೀಲದ ಹಣ ನೀಡಲಾಗುವುದಿಲ್ಲ. ಪ್ಲಾಸ್ಟಿಕ್ ಚೀಲಕ್ಕೆ ಅವಕಾಶ ನಿರಾಕರಣೆ. ಮೆಕ್ಕೆಜೋಳ ಸರ್ಕಾರ/ ಕರ್ನಾಟಕ ಹಾಲು ಮಹಾಮಂಡಳ ನಿಗದಿಪಡಿಸಿದ ಕನಿಷ್ಠ ಗುಣಮಟ್ಟ ಹೊಂದಿರಬೇಕು.
ಕೆಎಂಎಫ್ ಗ್ರಾಫ್ ಮತ್ತಷ್ಟು ಎತ್ತರಕ್ಕೆ
ರಾಜ್ಯದಲ್ಲಿ ಹಾಲು ಉತ್ಪಾದಕರ ಆಪ್ತಮಿತ್ರನಾಗಿ, ಗ್ರಾಹರಿಂದಲೂ ವಿಶ್ವಾಸದ ಮುದ್ರೆಯೊತ್ತಿಸಿಕೊಂಡಿರುವ ಕರ್ನಾಟಕ ಹಾಲು ಮಹಾಮಂಡಳ ಈಗ ತನ್ನ ವ್ಯಾಪ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ‘ವಿಜಯವಾಣಿ’ ಫೋನ್-ಇನ್ ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯದಲ್ಲಿ ಹೈನೋದ್ಯಮ ವನ್ನು ಇನ್ನಷ್ಟು ಬೆಳೆಸುವ ಆಶಯ ಪ್ರಸ್ತುತಪಡಿಸಿದರು. ಕೆಎಂಎಫ್ ವಿಸ್ತರಣೆಗಿರುವ ಅಡ್ಡಿ-ಆತಂಕಗಳ ಸ್ಪಷ್ಟ ಅರಿವಿಟ್ಟುಕೊಂಡೇ ಅಡೆತಡೆ ದಾಟಿ ಮುನ್ನುಗ್ಗುವ ವಿಶ್ವಾಸ ವ್ಯಕ್ತಪಡಿಸಿರುವ ಜಾರಕಿ ಹೊಳಿ, ತಮಗಿರುವ ದೊಡ್ಡ ಕನಸನ್ನು ಪ್ರಚುರಪಡಿಸಿದರು. ಕೆಎಂಎಫ್ ಗ್ರಾಫ್ ಮತ್ತಷ್ಟು ಎತ್ತರಕ್ಕೇರಿ ಸಲು ಸೂತ್ರ ಸಿದ್ಧಮಾಡಿಕೊಂಡಿರುವ ಅವರು, ಸಹಕಾರಿ ತತ್ವ ಬಿಡದೆ ಕಾರ್ಪೆರೇಟ್ ಶೈಲಿಯಲ್ಲಿ ನುಗ್ಗಲು ತಂತ್ರ ಅನುಸರಿಸುವ ಬಗ್ಗೆ ಮಾತನ್ನಾಡಿದ್ದಾರೆ. ಮಾರುಕಟ್ಟೆ ವಿಸ್ತರಣೆಗೆ ಇರುವ ಹೊಸ ಅವಕಾಶಗಳ ಬಾಚಿತಬ್ಬಲು ಮಹಾಮಂಡಳವನ್ನು ಒಂದು ತಂಡವಾಗಿ ಪರಿಗಣಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮಾತನ್ನಾಡಿದ್ದಾರೆ.
ಪ್ರೀಮಿಯಂ ಚಾಕೊಲೇಟ್: ಡೈರಿಮಿಲ್ಕ್, ಕ್ಯಾಡಬರೀಸ್ನ ಪ್ರೀಮಿಯಂ ಚಾಕೊಲೇಟ್ ಮಾದರಿಯಲ್ಲಿ ಕೆಎಂಎಫ್ ಕೂಡ ಪ್ರೀಮಿಯಂ ಚಾಕೊಲೇಟ್ ಉತ್ಪಾದಿಸಲು ಯೋಜನೆ ಸಿದ್ಧಪಡಿಸುತ್ತಿದೆ. ಈಗಾಗಲೇ ಚಾಕೊಲೇಟ್ ಉತ್ಪಾದಿಸಲಾಗುತ್ತದೆ. ಆದರೆ, ಪ್ರೀಮಿಯಂ ಚಾಕೊಲೇಟ್ ಇರಲಿಲ್ಲ. ಈಗ ತಯಾರಿಸುವ ಉದ್ದೇಶವಿದೆ. ಈ ಮೂಲಕ ಚಾಕೊಲೇಟ್ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಜತೆಗೆ ವಿವಿಧ ಬಗೆಯ ಸ್ವೀಟ್ಗಳನ್ನು ಮಾಡುತ್ತಿದ್ದು, ಅವುಗಳಲ್ಲೂ ಕೆಲವನ್ನು ಬದಲಾವಣೆ ಮಾಡುವ ಉದ್ದೇಶವಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸುವಾಸಿತ ಹಾಲಿನ ಟೆಟ್ರಾ ಪ್ಯಾಕೇಟ್ ಸ್ವರೂಪ ಬದಲಿಸುವ ಬಗ್ಗೆ ಕೂಡ ಚರ್ಚೆ ನಡೆದಿದೆ. ಈಗ ಪ್ಯಾಕೇಟ್ ತೆರೆದರೆ ಒಂದೇ ಬಾರಿ ಅದನ್ನು ಬಳಸಬೇಕು. ಮುಚ್ಚಳದ ಸ್ವರೂಪ ಬದಲಿಸುವುದರಿಂದ ಅಗತ್ಯವಿದ್ದಷ್ಟು ಮಾತ್ರ ಗ್ರಾಹಕ ಬಳಸಿಕೊಳ್ಳಬಹುದು ಎಂದವರು ತಿಳಿಸಿದರು. ಕೆಎಂಎಫ್ ಅಧಿಕಾರಿ ವರ್ಗ ಹಾಗೂ ಮಾಜಿ ಶಾಸಕ ನಾಗರಾಜ್ ಉಪಸ್ಥಿತರಿದ್ದರು.
ದಕ್ಷಿಣ ಧ್ರುವದಿಂದ ಉತ್ತರ ಧ್ರುವಕೂ
ಕೆಎಂಎಫ್ ವ್ಯಾಪ್ತಿಯ ಹಾಲು ಉತ್ಪಾದಕರ ದೊಡ್ಡ ಆತಂಕ ದೂರ ಮಾಡುವ ತೀರ್ವನವೊಂದು ಶೀಘ್ರವೇ ಹೊರಬೀಳಲಿದೆ. ಜತೆಗೆ ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯಲು ಮಹಾಮಂಡಳ ತಯಾರಾಗಿದೆ. ‘ನೊಂದಾಯಿತ ಹಾಲು ಉತ್ಪಾದಕರ ಹಸುವಿಗೆ ವಿಮೆ’, ‘1400 ಹೊಸ ಸೊಸೈಟಿ ಆರಂಭ’, ‘ರಾಜ್ಯಾದ್ಯಾಂತ ಏಕರೂಪ ದರ ಖಾತ್ರಿ’ ನೀಡುವ ಮಹತ್ವದ ನಿರ್ಧಾರ ಮಾಡಲಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಪ್ರತಿ ಹಾಲು ಒಕ್ಕೂಟದಲ್ಲಿ 100 ಹೊಸ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ದಕ್ಷಿಣ ಕರ್ನಾಟಕದಲ್ಲಿರುವಷ್ಟು ಸಂಘಗಳು ಉತ್ತರ ಕರ್ನಾಟಕದಲ್ಲಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಹೆಚ್ಚು ಸಹಕಾರ ಸಂಘಗಳಿದ್ದಾಗ ಹೆಚ್ಚು ಹಾಲಿನ ಸಂಗ್ರಹಣೆ ಸಾಧ್ಯ, ಜತೆಗೆ ರೈತರಿಗೂ ನೆರವಾಗಬಹುದು. ಇಲ್ಲವಾದರೆ ಖಾಸಗಿಯವರ ಪ್ರವೇಶವಾಗುತ್ತದೆ ಎಂಬುದನ್ನು ಒಕ್ಕೂಟಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, ಪ್ರತಿ ಒಕ್ಕೂಟದ ವ್ಯಾಪ್ತಿಯಲ್ಲಿ 100 ಹೊಸ ಸಂಘ ರಚಿಸಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು, ಅಧ್ಯಕ್ಷರ ಮಾತಿಗೆ ದನಿಗೂಡಿಸಿದರು.
ಹಸುವಿಗೆ ತೊಂದರೆಯಾದರೆ ಉತ್ಪಾದಕರಿಗೂ ಸಮಸ್ಯೆ ಆಗುತ್ತದೆ. ಈ ಕಾರಣಕ್ಕೆ ಉತ್ಪಾದಕರನ್ನು ಕಾಪಾಡಿಕೊಳ್ಳಲು ಅವರ ಹಸುಗಳನ್ನು ವಿಮಾ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಜಾರಕಿಹೊಳಿ ತಿಳಿಸಿದರು. ಹಸುವಿಗೆ ಹೆಚ್ಚು ಕಡಿಮೆಯಾದರೆ ಉತ್ಪಾದಕರಿಗೆ 50-60 ಸಾವಿರ ರೂ. ವಿಮಾ ಹಣ ಸಿಗಲಿದೆ. ಇತ್ತೀಚೆಗೆ ಹಾಲಿನ ಬೆಲೆ 2 ರೂ. ಹೆಚ್ಚಿಸಿದ್ದು, ಅದರಲ್ಲಿ 40 ಪೈಸೆಯನ್ನು ವಿಮೆಗಾಗಿಯೇ ಮೀಸಲಿಡಲಾಗಿದೆ. ಒಟ್ಟು 12 ಲಕ್ಷ ಹಸುಗಳಿವೆ ವಿಮೆ ಕಂತು ಪಾವತಿಸಲು 70 ಕೋಟಿ ರೂ. ಬಳಸಲಾಗುತ್ತದೆ. ಹಾಲು ಉತ್ಪಾದಕರು ವಿಮೆಗಾಗಿ ಯಾವುದೇ ಹಣ ಕೊಡಬೇಕಾಗಿಲ್ಲ ಎಂದವರು ಸ್ಪಷ್ಟಪಡಿಸಿದರು. 14 ಒಕ್ಕೂಟಗಳಲ್ಲಿ ಗ್ರಾಹಕರಿಗೆ ಒಂದೊಂದು ರೀತಿ ಬೆಲೆ ಸಿಗುತ್ತಿದೆ. ಜತೆಗೆ ಹಾಲಿನ ಉತ್ಪಾದನೆ ಹೆಚ್ಚಿದಾಗ ಉತ್ಪಾದಕರಿಗೆ ದರ ಕಡಿತ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದೆಲ್ಲೆಡೆ ಒಂದೇ ದರ ಇರಬೇಕೆಂಬ ಚಿಂತನೆ ಇದೆ. ಈ ಬಗ್ಗೆ ಚರ್ಚೆ ನಡೆಸಿ ಒಂದು ತೀರ್ಮಾನ ಮಾಡುತ್ತೇವೆ ಎಂದರು. ಏಕರೂಪ ಮತ್ತು ದರ ಖಾತ್ರಿ ಇದ್ದಾಗ ಉತ್ಪಾದಕರ ಆತ್ಮವಿಶ್ವಾಸ ಹೆಚ್ಚಿದಂತಾಗುತ್ತದೆ. ಗರಿಷ್ಠ ಉಪಯೋಗ ಆಗಬೇಕೆಂಬ ನಿಟ್ಟಿನಲ್ಲಿ ವಿಚಾರ ವಿನಿಮಯ ಮಾಡಲಾಗುತ್ತಿದೆ. ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಸೊಸೈಟಿಗಳಿಗೆ ಹೈಟೆಕ್ ಸ್ಪರ್ಶ
ರಾಜ್ಯದ ಕ್ಷೀರ ಕ್ರಾಂತಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಗೆ ಬೆನ್ನೆಲುಬಾಗಿರುವ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೈಟೆಕ್ ಸ್ಪರ್ಶ ಇಷ್ಟರಲ್ಲೇ ದೊರೆಯಲಿದೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ‘ವಿಜಯವಾಣಿ’ಯೊಂದಿಗೆ ನಡೆಸಿದ ಸಂವಾದದಲ್ಲಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಮಾಹಿತಿ ನೀಡಿದರು. ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕೈಗೆ ಟ್ಯಾಬ್ ನೀಡುವ ಚಿಂತನೆಯಿದ್ದು, ಮಂಗಳವಾರ (ಮೇ 12) ನಡೆಯಲಿರುವ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಅಂತಿಮಗೊಳಿಸಲಾಗುವುದು. ತಾಂತ್ರಿಕ ಇನ್ನಿತರ ಕಾರಣಗಳಿಂದ ಟ್ಯಾಬ್ ಖರೀದಿ ಪ್ರಕ್ರಿಯೆ ಪೂರ್ಣವಾಗಿಲ್ಲ. ಅಂದಾಜು 4 ಕೋಟಿ ರೂ. ವೆಚ್ಚದ ಈ ಪ್ರಕ್ರಿಯೆ ಕುರಿತು ಬೋರ್ಡ್ ಮೀಟಿಂಗ್ನಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದರು. ಟ್ಯಾಬ್ ಮೂಲಕ ದೈನಂದಿನ ವ್ಯವಹಾರ ನಿರ್ವಹಣೆಗೆ ಅಷ್ಟೇ ಅಲ್ಲ, ಸೊಸೈಟಿ ಸದಸ್ಯರು ಸಾಕಿದ ಪಶುಗಳ ವಿವರ ದಾಖಲಾಗುತ್ತವೆ. ಪ್ರತಿದಿನ ಎಷ್ಟು ಲೀಟರ್ ಹಾಲು ಕೊಡುತ್ತದೆ ಎನ್ನುವುದರಿಂದ ಹಿಡಿದು ಗುಣಮಟ್ಟ, ಪಶುಗಳ ಆರೋಗ್ಯ ರಕ್ಷಣೆ ಇನ್ನಿತರ ನಿಖರ ಮಾಹಿತಿ ಸಂಗ್ರಹವಾಗಲಿದ್ದು, ಕಾರ್ಯದರ್ಶಿ ಹಾಗೂ ಸಂಘದ ಸದಸ್ಯರಿಗೆ ಕೈಪಿಡಿ ಅಥವಾ ಮಾರ್ಗದರ್ಶಿ ರೀತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಹೈಟೆಕ್ ನಂದಿನಿ ಕೆಫೆ
ಕೆಫೆ ಕಾಫಿ ಡೇ ಮಾದರಿಯಲ್ಲಿ ಹೈಟೆಕ್ ನಂದಿನಿ ಕೆಫೆಗಳನ್ನು ರಾಜ್ಯಾದ್ಯಂತ ಪರಿಚಯಿಸಲು ಸಿದ್ಧತೆ ನಡೆಸಿದ್ದ ಕೆಎಂಎಫ್ಗೆ ಕರೊನಾ ಅಡ್ಡಿಪಡಿಸಿತು. ಪ್ರಸ್ತುತ ಬೆಂಗಳೂರಲ್ಲಿ ಒಂದು ನಂದಿನಿ ಕೆಫೆ ಆರಂಭಿಸಿದ್ದು, ಮುಂದಿನ ದಿನಮಾನಗಳಲ್ಲಿ 15 ಪ್ರಮುಖ ಬಡಾವಣೆಗಳಲ್ಲಿ ಇಂತಹ ಕೆಫೆ ಆರಂಭಿಸಲಾಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಂದಿನ ಕೆಫೆ ತೆರೆಯುವ ಕಲ್ಪನೆ ಇದೆ. ಕೆಫೆ ಆರಂಭಕ್ಕೆ ಒಂದು ನಿರ್ದಿಷ್ಟ ಸಾಮಾನ್ಯ ನಿರ್ವಹಣಾ ವಿಧಾನವಿದೆ. ಹೂಡಿಕೆದಾರರು ಷರತ್ತು ಪೂರೈಸಿದರೆ, ಅವರಿಗೆ ಕೆಎಂಎಫ್ನ 125 ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಅವರು ಈ ಉತ್ಪನ್ನಗಳ ಜತೆಗೆ ಅಲ್ಲೇ ಕೆಲವು ಸಿದ್ಧ ಆಹಾರ ತಯಾರಿಸಿಕೊಡಲು ಅವಕಾಶವಿರುತ್ತದೆ. ಹೈವೇಗಳ ಪಕ್ಕ, ಜಿಲ್ಲಾ ಮುಖ್ಯ ಕೇಂದ್ರದಲ್ಲಿ ಈ ಕೆಫೆಗಳು ಆರಂಭ ವಾಗಲಿವೆ ಎಂದು ಹೇಳಿದರು.
ಕೆ.ಆರ್.ಪೇಟೆಯಲ್ಲಿ ಪಶು ಆಹಾರ ಘಟಕ
ಬೆಂಗಳೂರು: ಕೆಎಂಎಫ್ ಪಶು ಆಹಾರಕ್ಕೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಹಾಸನ, ಧಾರವಾಡ, ಗುಬ್ಬಿ, ಶಿಕಾರಿಪುರ, ರಾಜಾನುಕುಂಟೆ ಘಟಕಗಳು ಪ್ರತಿನಿತ್ಯ 1950 ಟನ್ ಪಶು ಆಹಾರ ಉತ್ಪಾದನೆ ಮಾಡುತ್ತಿವೆ. ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ 300 ಟನ್ ಸಾಮರ್ಥ್ಯದ ಘಟಕ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಹಾಲು ಉತ್ಪಾದಕರನ್ನು ಉತ್ತೇಜಿಸಲು ಪ್ರತಿ ಟನ್ ಪಶು ಆಹಾರಕ್ಕೆ 1 ಸಾವಿರ ರೂ. ಕಡಿಮೆ ಮಾಡಿದ್ದು, ಕರೊನಾ ಹಿನ್ನೆಲೆ ಮೇ ಅಂತ್ಯದ ತನಕ ಈ ರಿಯಾಯಿತಿ ಯೋಜನೆ ವಿಸ್ತರಣೆ ಮಾಡಲಾಗಿದೆ ಎಂದರು.
ಮಾರುಕಟ್ಟೆ ವಿಸ್ತರಣೆಗೆ ಯೋಜನೆ: ಅಮೂಲ್ ಪ್ರತಿನಿತ್ಯ 2.5 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ 2ನೇ ಸ್ಥಾನದಲ್ಲಿರುವ ಕೆಎಂಎಫ್, ನೆರೆ ಹೊರೆ ರಾಜ್ಯಗಳಲ್ಲದೆ ವಿದೇಶಗಳಲ್ಲಿಯೂ ಮಾರುಕಟ್ಟೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೆಎಂಎಫ್ ಇನ್ನಷ್ಟು ಕಮಾಲ್ ಮಾಡಲು ಮುಂದಾಗಿದೆ.
ಹಾಲು ಖರೀದಿ ನಿಲ್ಲಿಸಲಿಲ್ಲ: ಕರೊನಾ ಸಂದರ್ಭ ನೆರೆ ರಾಜ್ಯಗಳಿಗೆ ಹೋಗುತ್ತಿದ್ದ ಹಾಲು ಬಂದ್ ಆಗಿತ್ತು. ಕ್ಷೀರ ಭಾಗ್ಯ ಯೋಜನೆಯ ಹಾಲು ಉಳಿದುಕೊಂಡಿತ್ತು. ಆಗ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಕಾರದಿಂದ ಸರ್ಕಾರವೇ ಹಾಲು ಖರೀದಿ ಮಾಡಿ ಉಚಿತವಾಗಿ ನೀಡಿತು. ಕೆಎಂಎಫ್ಗೆ ಎಷ್ಟೇ ಕಷ್ಟವಾದರೂ ಚಿಂತೆಯಿಲ್ಲ. ಯಾವ ಕಾರಣಕ್ಕೂ ಹಾಲು ಖರೀದಿ ನಿಲ್ಲಿಸಬಾರದೆಂದು ನಿರ್ಣಯ ತೆಗೆದುಕೊಂಡಿದ್ದನ್ನು ಅಕ್ಷರಶಃ ಕಾರ್ಯರೂಪಕ್ಕೆ ತರಲು ಎಲ್ಲರೂ ತಂಡವಾಗಿ ಕೆಲಸ ಮಾಡಿದ್ದಾರೆ.
ಕೆಎಂಎಫ್ಗೆ ಲಾಭ ತಂದ ಜಾರಕಿಹೊಳಿ
ಕರೊನಾ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳ ಪ್ರಗತಿ ಕುಂಠಿತ ಆಗಿರುವಾಗ ಕೆಎಂಎಫ್ನ ಪ್ರಗತಿ ಜಿಗಿತ ಕಂಡಿದೆ. ಸಂವಾದದ ವೇಳೆ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಅವರೇ ಈ ವಿಷಯ ಪ್ರಸ್ತಾಪಿಸಿದರು. ಬಾಲಚಂದ್ರ ಜಾರಕಿಹೊಳಿ ಅವರು ಸಂಸ್ಥೆಯ ಅಧ್ಯಕ್ಷರಾದ ನಂತರ ಕೆಎಂಎಫ್ ಮತ್ತಷ್ಟು ಪ್ರಗತಿ ಸಾಧಿಸಿದೆ, ಹಿಂದಿನ ಆರ್ಥಿಕ ವರ್ಷದಲ್ಲಿ 133 ಕೋಟಿ ರೂ. ಲಾಭ ಗಳಿಸಿದ್ದಾರೆ, ಕಳೆದ ಆರ್ಥಿಕ ವರ್ಷದಲ್ಲಿ 144 ಕೋಟಿ ರೂ. ಲಾಭವಾಗಿದೆ ಎಂದು ವಿವರಿಸಿದರು. ಎಂಡಿ ಮಾತಿಗೆ ನಗೆಯ ಪ್ರತಿಕ್ರಿಯೆ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರು, ಈ ಸಾಧನೆ ಹಿಂದೆ ಎಲ್ಲರ ಶ್ರಮ ಇದೆ ಎಂದರು. ಲಾಕ್ಡೌನ್ ಸಂದರ್ಭ ಉಳಿಕೆಯಾಗುತ್ತಿದ್ದ ಹಾಲನ್ನು ಸರ್ಕಾರವೇ ಖರೀದಿಸಬಹುದೆಂಬ ನಮ್ಮ ಪ್ರಸ್ತಾಪವನ್ನು ಸಿಎಂ ಯಡಿಯೂರಪ್ಪ ತಡಮಾಡದೆ ಒಪ್ಪಿಗೆ ನೀಡಿ ಮಹತ್ವದ ತೀರ್ಮಾನ ಮಾಡಿದರು. ಈ ನಿರ್ಧಾರದಿಂದ ರೈತರಿಗೂ ನೆರವಾಯಿತು, ಕೆಎಂಎಫ್ಗೆ ಕೂಡ ಅನುಕೂಲವಾಯಿತು. ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದೇ ವೇಳೆ ಪೋ›ತ್ಸಾಹಧನ ಸೇರಿ ವಿವಿಧ ಬಾಕಿಗಳನ್ನು ಚುಕ್ತಾಮಾಡಿ ಅಪ್ಡೇಟ್ ಮಾಡಿಕೊಳ್ಳಲಾಗುತ್ತಿದೆ. ಅಲ್ಲೊಂದು ಇಲ್ಲೊಂದು ಉದಾಹರಣೆ ಬಿಟ್ಟರೆ ಮತ್ತೆಲ್ಲ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ. ಸಂಸ್ಥೆ ಇನ್ನಷ್ಟು ಪ್ರಗತಿಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಜಾರಕಿಹೊಳಿ ತಿಳಿಸಿದರು. ಮುಂದಿನ ತಿಂಗಳಿಂದ ಪಾವತಿಗಳನ್ನು ಆಯಾ ತಿಂಗಳಲ್ಲೇ ನೀಡಲಾಗುತ್ತದೆ. ಬಾಕಿ ಪದ್ಧತಿ ಇರುವುದಿಲ್ಲ ಎಂದು ಅವರು ತಿಳಿಸಿದರು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿಣ ಹಾಲು
ಹಾಲು, ಸುವಾಸಿತ ಹಾಲು, ತುಪ್ಪ, ಐಸ್ಕ್ರೀಂ.. ಹೀಗೆ ವಿವಿಧ ಬಗೆಯ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿರುವ ಕೆಎಂಎಫ್, ಇದೀಗ ತನ್ನ ಹೊಸ ಪ್ರಾಡಕ್ಟ್ ‘ಅರಿಶಿಣ ಹಾಲು’ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ಪ್ರಸ್ತುತ ಪ್ರಯೋಗ ಹಂತದಲ್ಲಿದ್ದು, ಅರಿಶಿಣ, ಜೇನುತುಪ್ಪ ಮಿಶ್ರಿತ ಅರಿಶಿಣ ಹಾಲನ್ನು ಸುವಾಸಿತ ಹಾಲಿನ ಶ್ರೇಣಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚರ್ಚೆಗಳು ನಡೆದಿದೆ. ಕರೊನಾ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ಚರ್ಚೆಗಳು ನಡೆದಿರುವಾಗ, ಈ ಅರಿಶಿಣ ಹಾಲು ಹೆಚ್ಚು ಪ್ರಸ್ತುತವಾಗಬಹುದು ಎಂಬುದು ಕೆಎಂಎಫ್ ಅಧಿಕಾರಿಗಳ ವಿವರಣೆಯಾಗಿದೆ.
ಬೆಂಗಳೂರು ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದ ಅತಿಥಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಗುರುವಾರ ರಾಜ್ಯದ ಮೂಲೆ ಮೂಲೆಗಳಿಂದ ಹಾಲು ಮಾರಾಟ, ಪಶು ಆಹಾರ, ಪ್ರೋತ್ಸಾಹ ಧನ ಹಾಗೂ ರೈತರ ಸಮಸ್ಯೆಗಳ ಕುರಿತು ಪ್ರಶ್ನೆಗಳು ತೂರಿ ಬಂದವು. ಅದಕ್ಕೆಲ್ಲ ಬಾಲಚಂದ್ರ ಸಾವಧಾನಚಿತ್ತವಾಗಿಯೇ ಉತ್ತರಿಸಿದರು. ಪ್ರಶ್ನೋತ್ತರ ವಿವರ ಇಲ್ಲಿದೆ.
ಹಾಲು ಉತ್ಪಾದಕರಿಗೆ ನೀಡು ತ್ತಿರುವ ಪ್ರೋತ್ಸಾಹ ಧನ ಹೆಚ್ಚಿಸಿ.
| ಸಂಪತ್ಗೌಡ ಬಳ್ಳಾರಿ
ಈ ಬಾರಿಯ ಬಜೆಟ್ನಲ್ಲಿ ಅದು ಸಾಧ್ಯವಾಗಿಲ್ಲ. 2020-21ನೇ ಸಾಲಿನ ಬಜೆಟ್ನಲ್ಲಿ 1 ರೂ. ಪ್ರೋತ್ಸಾಹ ಧನ ಹೆಚ್ಚಿಸಲಾಗುವುದು.
ಪ್ರೋತ್ಸಾಹ ಧನ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. 20 ತಿಂಗಳಿನಿಂದಲೂ ದೊರೆತಿಲ್ಲ?
| ಅಪ್ಪಾಜಿಗೌಡ ಶಿಡ್ಲಘಟ್ಟ
ಹಾಲು ಉತ್ಪಾದಕರಿಗೆ ಫೆಬ್ರವರಿವರೆಗಿನ ಪ್ರೋತ್ಸಾಹ ಧನ ಪಾವತಿಸಲಾಗಿದೆ. ತಾಂತ್ರಿಕ ಕಾರಣದಿಂದ ಕೆಲವೊಬ್ಬರಿಗೆ ಪಾವತಿಯಾಗಿಲ್ಲ ಎಂದು ಕಾಣುತ್ತದೆ. ಈ ಕುರಿತು ಪರಿಶೀಲಿಸಿ, ಕೂಡಲೇ ಪಾವತಿಸಲಾಗುವುದು.
ಹಾಲು ಉತ್ಪಾದಕರ ಸಂಘ ಸೇರಿ ಕೆಎಂಎಫ್ಗೆ ಸಂಬಂಧಿಸಿದ ಕಚೇರಿಗಳಲ್ಲಿ ಲಾಕ್ಡೌನ್ ಅವಧಿಯಲ್ಲಿ ಕೆಲಸ ಮಾಡಿದವರಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ತಿಳಿಸಲಾಗಿತ್ತು. ಈವರೆಗೂ ಹಣ ಬಂದಿಲ್ಲ?
| ಬಸವರಾಜ ಕುಷ್ಟಗಿ
ಕರೊನಾ ಭೀತಿ ನಡುವೆಯೂ ಕೆಲಸ ಮಾಡಿದ ನೌಕರರಿಗೆ ವೇತನ ಹೆಚ್ಚಳ ಸೇರಿ ಇನ್ನಿತರ ಸೌಲಭ್ಯ ಒದಗಿಸಲಾಗುವುದು. ಪ್ರೋತ್ಸಾಹ ಧನ ನೀಡುವ ಕುರಿತು ಇನ್ನೊಂದು ದಿನದಲ್ಲಿ ಆದೇಶಿಸಲಾಗುತ್ತದೆ.
ದನಗಳ ಖರೀದಿಗೆ ಸರ್ಕಾರದಿಂದ ಅಥವಾ ಕೆಎಂಎಫ್ನಿಂದ ಸಬ್ಸಿಡಿ ನೀಡಬೇಕು.
| ಪ್ರಧಾನಿ ನರಗುಂಡ
ಈ ಕುರಿತು ಪರಿಶೀಲಿಸಲಾಗುತ್ತದೆ. ಜತೆಗೆ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತಹ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದಲ್ಲಿನ 14 ಒಕ್ಕೂಟ ವ್ಯಾಪ್ತಿಯಲ್ಲೂ ಹಾಲಿನ ದರ ನಿಗದಿ ವಿಭಿನ್ನವಾಗಿದೆ. ಈ ತಾರತಮ್ಯ ನಿವಾರಿಸಿ.
| ಮುತ್ಯಪ್ಪ ವಿಜಯಪುರ
ರಾಜ್ಯದ ಎಲ್ಲ ಹಾಲು ಉತ್ಪಾದಕರಿಗೂ ಏಕರೂಪ ದರ ಸಿಗುವಂತೆ ಮಾಡಲು ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಆದೇಶಿಸಲಾಗುವುದು.
ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 35 ರೂ. ನೀಡಿದರೆ ಉತ್ತಮ...
| ಗೋವಿಂದರಾಜು ಶಿಡ್ಲಘಟ್ಟ
ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿಯೇ ಅತಿಹೆಚ್ಚು ಹಣ ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪರಿಶೀಲಿಸಲಾಗುತ್ತದೆ.
ಹಾಲು ಉತ್ಪಾದಕರ ಸಂಘಗಳು ಸ್ವಂತ ಕಟ್ಟಡ ಹೊಂದಲು ನಿವೇಶನ ಖರೀದಿಗೆ ಸಾಲ ಕೊಡಿಸುವ ಯೋಜನೆ ಜಾರಿಗೆ ತನ್ನಿ...
| ವಿಶ್ವನಾಥ ಪಾಟೀಲ್ ಚನ್ನಗಿರಿ
ಸಾಲ ನೀಡುವುದಕ್ಕೆ ಅವಕಾಶವಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಸಾಲ ಕೊಡಬಹುದಾದರೆ, ಖಂಡಿತ ನೀಡಲಾಗುವುದು.
ದನ ಖರೀದಿಗೆ ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡುವುದಕ್ಕೆ ಸರ್ಕಾರ ಮುಂದಾಗಬೇಕು...
| ಸಂತೋಷ್ ಪಾಟೀಲ್ ಅರಬಾವಿ
ಜಾನುವಾರು ಖರೀದಿ ಕುರಿತಂತೆ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ. ಆ ಕುರಿತು ತಿಳಿದುಕೊಳ್ಳುತ್ತೇನೆ. ಅಲ್ಲಿ ಅವಕಾಶವಿಲ್ಲದಿದ್ದರೆ, ಕೆಎಂಎಫ್ ಅಥವಾ ರಾಜ್ಯ ಸರ್ಕಾರದಿಂದ ಸಾಲ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ರ್ಚಚಿಸುತ್ತೇನೆ.
ಗೀರ್ ತಳಿ ಹಸು ಸಾಕಣೆ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಅದಕ್ಕೆ ಸಲಹೆ ನೀಡಿ...
| ಬಸವರಾಜು ಗೋಕಾಕ್
ಗೀರ್ ತಳಿ ಹಸು ಸಾಕಣೆಗೆ ಸಾಕಷ್ಟು ಖರ್ಚಾಗುತ್ತದೆ. ಅದನ್ನು ಭರಿಸುವ ಸಾಮರ್ಥ್ಯವಿದ್ದರೆ ಸಾಕಣೆ ಮಾಡಬಹುದು. ಅಲ್ಲದೆ, ಅದರ ಹಾಲು ಸೇರಿ ಇನ್ನಿತರ ಉತ್ಪನ್ನಗಳಿಗೆ ಭಾರಿ ಬೇಡಿಕೆಯೂ ಇದೆ. ಅದರಿಂದ ಘಿರ್ ಹಸು ಸಾಕಣೆ ಲಾಭದಾಯಕವಾಗಲಿದೆ.
ರಾಮನಗರದ ಕಣ್ವದಲ್ಲಿ ಆರಂಭಿಸಲಾಗಿರುವ ಹಾಲಿನ ಪುಡಿ ಉತ್ಪಾದನಾ ಘಟಕದಲ್ಲಿ ಉದ್ಯೋಗ ದೊರಕಿಸಿಕೊಡಿ.
| ನಾಗೇಶ್ ಚನ್ನಪಟ್ಟಣ
ಈ ಕುರಿತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಅರ್ಜಿ ಕಳುಹಿಸಿ. ಅವರೊಂದಿಗೆ ರ್ಚಚಿಸಿ ಯಾವ ಕೆಲಸ ಕೊಡಬಹುದು ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ.
ಹಾಲಿನ ಬದಲಿಗೆ ರೈತರಿಗೆ ನೀಡಲಾಗುವ ಹಣವನ್ನು ಯಾವ ಮಾನದಂಡದಲ್ಲಿ ನಿಗದಿ ಮಾಡಲಾಗಿದೆ?
| ರವಿಕುಮಾರ್ ಮಂಡ್ಯ
ಹಾಲಿನಲ್ಲಿನ ಕೊಬ್ಬಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಲಾಗುತ್ತದೆ. ಅಲ್ಲದೆ, ಒಕ್ಕೂಟದಲ್ಲಿ ಉತ್ಪತ್ತಿಯಾಗುವ ಹಾಲಿನ ಪ್ರಮಾಣ ಮತ್ತು ಒಕ್ಕೂಟದ ಆರ್ಥಿಕ ಪರಿಸ್ಥಿತಿ ಆಧರಿಸಿ ಹಣ ನೀಡಲಾಗುತ್ತದೆ.
ಹಾಲು ಮಾರಾಟ ಮಾಡುವ ಏಜೆಂಟ್ಗಳ ಭದ್ರತಾ ಠೇವಣಿ ಬಗ್ಗೆ ಗೊಂದಲವಿದ್ದು, ಅದನ್ನು ಸರಿಪಡಿಸಿ...
| ರಾಜು ಬೆಂಗಳೂರು
ಭದ್ರತಾ ಠೇವಣಿ ಕುರಿತ ಇರುವ ನಿಯಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ.
ಹಾಲಿನಲ್ಲಿ ಕೊಬ್ಬಿನ ಅಂಶ ಕಡಿಮೆಯಿದ್ದರೆ ಖರೀದಿಸುವುದಿಲ್ಲ. ಅದರ ಬದಲು ಕಡಿಮೆ ದರಕ್ಕೆ ಅಂತಹ ಹಾಲನ್ನು ಖರೀದಿ ಮಾಡಿದರೆ ಒಳಿತು...
| ಶಿವಣ್ಣ ತುಮಕೂರು
ಸದ್ಯ ಶೇ.89 ಉತ್ತಮ ಗುಣಮಟ್ಟದ ಹಾಲು ಬರುತ್ತಿದೆ. ಅದರ ಜತೆಗೆ ಕಡಿಮೆ ಕೊಬ್ಬಿನ ಹಾಲನ್ನು ಸೇರಿಸಿದರೆ ಗುಣಮಟ್ಟ ಹಾಳಾಗುತ್ತದೆ. ಆದರೂ, ಈ ಕುರಿತು ಪರಿಶೀಲನೆ ನಡೆಸಲಾಗುವುದು.
ನಮ್ಮ ಊರಿನಲ್ಲಿ ಪ್ರತಿನಿತ್ಯ 250 ಲೀ. ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಅದನ್ನು ಕೊಂಡೊಯ್ಯುವ ವ್ಯವಸ್ಥೆಯಿಲ್ಲ. ಹೀಗಾಗಿ ಊರಿಗೆ ಒಂದು ಸಂಘ ಸ್ಥಾಪಿಸಿ ಅಥವಾ ಹಾಲು ಕೊಂಡೊಯ್ಯಲು ವ್ಯವಸ್ಥೆ ಮಾಡಿ.
| ಎಂ.ಆಂಜನಪ್ಪ ಚಿಕ್ಕಬಳ್ಳಾಪುರ
ನಿಮ್ಮ ಊರಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲು ಸೂಚಿಸುತ್ತೇನೆ ಹಾಗೂ ಹಾಲನ್ನು ಕೊಂಡೊಯ್ಯಲು ಒಕ್ಕೂಟದಿಂದ ವ್ಯವಸ್ಥೆ ಮಾಡಲು ಸೂಚಿಸುತ್ತೇನೆ. ಜತೆಗೆ ಸಂಘ ಸ್ಥಾಪನೆ ಸಾಧ್ಯವೇ ಎಂಬುದರ ಬಗ್ಗೆಯೂ ರ್ಚಚಿಸುತ್ತೇನೆ.
ಶಾಲೆಗಳಿಗೆ ಸರಬರಾಜಾಗುತ್ತಿರುವ ಹಾಲಿನ ಪುಡಿ ಪ್ಯಾಕೆಟ್ಗಳ ಮೇಲೆ ಬಳಕೆ ದಿನಾಂಕ ಸರಿಯಾಗಿರುವುದಿಲ್ಲವಲ್ಲ?
| ಸೋಮಣ್ಣ ಸವದತ್ತಿ
ಮಕ್ಕಳಿಗೆ ನೀಡುವ ಹಾಲಿನ ಪುಡಿ ಗುಣಮಟ್ಟದಿಂದ ಕೂಡಿರಬೇಕು ಎಂಬುದು ನಮ್ಮ ಗುರಿ. ಹಾಲಿನ ಪುಡಿಯ ಎಕ್ಸ್ಪೈರಿ ದಿನಾಂಕ ಸರಿಯಾಗಿ ನಮೂದಿಸಲು ಕ್ರಮ ಕೈಗೊಳ್ಳಲಾಗುವುದು
ಲಾಕ್ಡೌನ್ ಅವಧಿಯಲ್ಲಿ ಯಾವುದೇ ರಾಜ್ಯ ರೈತರಿಂದ ಹಾಲು ಖರೀದಿಸಿಲ್ಲ. ಕೆಎಂಎಫ್ ಆ ಕಾರ್ಯ ಮಾಡಿ ರೈತರಿಗೆ ನೆರವಾಗಿದೆ. ಅದಕ್ಕೆ ಕೆಎಂಎಫ್ ಮತ್ತು ಸರ್ಕಾರಕ್ಕೆ ಧನ್ಯವಾದ...
| ನೀಲಕಂಠ ಬೀದರ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರದಿಂದ ರಾಜ್ಯದಲ್ಲಿ ಒಂದು ಹನಿ ಹಾಲು ವ್ಯರ್ಥವಾಗದಂತಾಗಿದೆ. ಆದರೂ, ಕಲಬುರಗಿ ಭಾಗದಲ್ಲಿ ಕೇವಲ 60 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು ಹೆಚ್ಚಿಸಲು ಅಲ್ಲಿನ ರೈತರು ಮುಂದಾಗಬೇಕು. ಜತೆಗೆ ಸಂಘಗಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು.
ಪ್ರವಾಹ ಸಂದರ್ಭ 2 ಹಸುಗಳು ಅಸುನೀಗಿದವು. ಈವರೆಗೆ ಅದಕ್ಕೆ ಪರಿಹಾರ ದೊರೆತಿಲ್ಲ.
| ಮಂಜುಳಾ ಕಿತ್ತೂರು
ಶುಕ್ರವಾರ ನಿಮ್ಮ ಊರಿಗೆ ಬಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಇನ್ನೊಂದು ವಾರದಲ್ಲಿ ಪರಿಹಾರ ದೊರಕಿಸುವ ಕೆಲಸ ಮಾಡಲಾಗುತ್ತದೆ.
ಹಾಲು ಉತ್ಪಾದನಾ ಒಕ್ಕೂಟದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಬಡ್ತಿ ನೀಡಿ.
| ನಾಗರಾಜ್ ಕೋಲಾರ
ಬಡ್ತಿ ವಿಳಂಬ ಗಮನಕ್ಕೆ ಬಂದಿದೆ. ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮೈಸೂರು ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಪಶು ಆಹಾರ ಘಟಕ ಸ್ಥಾಪಿಸಿ.
| ಗಣಪತಿ ಮೈಸೂರು
ಕೆ.ಆರ್.ಪೇಟೆಯಲ್ಲಿ ಪಶು ಆಹಾರ ಘಟಕ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ. ಅದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ರೈತರ ಪಶು ಆಹಾರ ಸಮಸ್ಯೆ ನಿವಾರಣೆಯಾಗಲಿದೆ.