

ನವದೆಹಲಿ: ಆಮದು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಟೆಕ್ನಿಕಲ್ ಟೆಕ್ಸ್ಟೈಲ್ ಮಿಷನ್ ಜಾರಿಗೊಳಿಸುವ ಪ್ರಸ್ತಾವನೆಯನ್ನು ದೇಶದ ಮುಂದಿರಿಸಿದೆ. ಮುಂದಿನ ನಾಲ್ಕು ವರ್ಷದ ಅವಧಿಯಲ್ಲಿ 1,480 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಮದು ಕಡಿಮೆ ಮಾಡುವ ಕಾರ್ಯಯೋಜನೆ ಸಿದ್ಧವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸಲದ ಬಜೆಟ್ ಮಂಡಿಸಿದ ಅವರು, ಇಂಡಸ್ಟ್ರಿ ಮತ್ತು ಕಾಮರ್ಸ್ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಉತ್ತೇಜನೆಗಾಗಿ ಕೇಂದ್ರ ಸರ್ಕಾರ 27,300 ಕೋಟಿ ರೂಪಾಯಿ ನೀಡಲಾಗಿದೆ. ಈ ವರ್ಷದಿಂದ ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಂದ ರಫ್ತುದಾರರಿಗೆ ಸಲ್ಲಬೇಕಾದ ಸುಂಕ ಮತ್ತು ತೆರಿಗೆಯ ಹಣ ಡಿಜಿಟಲ್ ರೀಫಂಡ್ ಮೂಲಕ ಹಿಂತಿರುಗಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಮೂಲ ಸೌಕರ್ಯದ ವಿಚಾರಕ್ಕೆ ಬಂದರೆ, ಮೂಲ ಸೌಕರ್ಯ ಕ್ಷೇತ್ರಕ್ಕೆ ಪ್ರಾಜೆಕ್ಟ್ ಪ್ರಿಪರೇಷನ್ ಫೆಸಿಲಿಟಿಗಳನ್ನು ಒದಗಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಅಲ್ಲದೆ,ನ್ಯಾಷನಲ್ ಲಾಜಿಸ್ಟಿಕ್ಸ್ ಪಾಲಿಸಿ ಕೂಡ ಜಾರಿಗೆ ಬರುತ್ತಿದೆ.103 ಕೋಟಿ ರೂಪಾಯಿ ವೆಚ್ಚದ ಇನ್ಫ್ರಾ ಪೈಪ್ಲೈನ್ ಪ್ರಾಜೆಕ್ಟ್ ಕೂಡ ಡಿಸೆಂಬರ್ನಲ್ಲಿ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಕೆಲಸ 2023ರಲ್ಲಿ ಪೂರ್ಣಗೊಳ್ಳಲಿದೆ ಮತ್ತು ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಕೂಡ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೆ, ರೈಲ್ವೆ ನಿಲ್ದಾಣಗಳಲ್ಲಿ 550 ವೈಫೈ ಫೆಸಿಲಿಟಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. (ಏಜೆನ್ಸೀಸ್)