

ನವದೆಹಲಿ: ಕೇಂದ್ರ ಬಜೆಟ್ 2020ಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ ಒಂದಕ್ಕೆ ಬಜೆಟ್ ಮಂಡನೆಯಾಗಲಿದ್ದು, ಪೂರ್ವಭಾವಿಯಾಗಿ ಸೋಮವಾರ ಸಾಂಪ್ರದಾಯಿಕ ಹಲ್ವಾ ಸೆರೆಮೊನಿ ನಡೆಯಿತು. ಈ ಸಾಂಪ್ರದಾಯಿಕ ಕಾರ್ಯಕ್ರಮ ಬಜೆಟ್ ಮಂಡನೆಗೆ ಹತ್ತು ದಿನ ಮುಂಚಿತವಾಗಿ ನಡೆಯುತ್ತದೆ.
ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದರು. ಹಲ್ವಾ ಸೆರೆಮೊನಿ ಸೆಕ್ರೆಟೇರಿಯೇಟ್ ಬಿಲ್ಡಿಂಗ್ನ ನಾರ್ತ್ ಬ್ಲಾಕ್ನಲ್ಲಿ ಆಯೋಜಿಸಲ್ಪಡುತ್ತದೆ. ಇದೇ ಬ್ಲಾಕ್ ನಲ್ಲಿ ಹಣಕಾಸು ಸಚಿವಾಲಯ, ಗೃಹ ಸಚಿವಾಲಯಗಳ ಕಚೇರಿಗಳಿವೆ.
ಹಲ್ವಾ ಸೆರೆಮೊನಿಯ ಮಹತ್ವ: ಹಣಕಾಸು ಸಚಿವಾಲಯ ಆಯೋಜಿಸುವ ಹಲ್ವಾ ಸೆರೆಮೊನಿ ದಶಕಗಳಷ್ಟು ಹಳೆಯ ವಾಡಿಕೆ. ದೊಡ್ಡ ಕಡಾಯಿಯಲ್ಲಿ ಹಲ್ವಾ ಕಾಯಿಸಲಾಗುತ್ತಿದ್ದು, ಈ ಹಲ್ವಾವನ್ನು ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವಾಲಯದ ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ಸೆರೆಮೊನಿಯ ನಂತರ ಹಣಕಾಸು ಸಚಿವಾಲಯದ ಸಿಬ್ಬಂದಿಯನ್ನು ನಾರ್ತ್ ಬ್ಲಾಕ್ನ ಬೇಸ್ಮೆಂಟ್ಗೆ ಕಳುಹಿಸಲಾಗುತ್ತದೆ. ಅಲ್ಲಿರುವ ಕಚೇರಿಯಲ್ಲಿ ಮುಂಗಡ ಪತ್ರ ತಯಾರಾಗುತ್ತದೆ. ಹೀಗೆ ಒಳಗೆ ಹೋದವರು 10 ದಿನಗಳ ಕಾಲ ಅಲ್ಲಿಂದ ಹೊರಬರುವಂತೆ ಇಲ್ಲ. ಈ ಮುಂಗಡ ಪತ್ರದ ಯಾವುದೇ ಭಾಗ, ಅಂಶಗಳು ಸೋರಿಕೆ ಆಗಬಾರದೆಂಬ ಉದ್ದೇಶ ಇಲ್ಲಿದೆ.
ಈ ಎನ್ಡಿಎ ಸರ್ಕಾರದ ಏಳನೇ ಬಜೆಟ್: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನಿರಂತರವಾಗಿ ಮಂಡಿಸುತ್ತಿರುವ ಏಳನೇ ಮುಂಗಡಪತ್ರ ಇದಾಗಿದೆ. ಈ ಸಲದ ಬಜೆಟ್ ಫೆಬ್ರವರಿ ಒಂದರಂದು ಮಂಡನೆಯಾಗಲಿದೆ. (ಏಜೆನ್ಸೀಸ್)