ನಾಳೆ ಹೊಸ ಆರ್ಥಿಕ ವರ್ಷ ಆರಂಭ: ಆಗಲಿದೆ ಹಲವು ಬದಲಾವಣೆ

FY
Published on

2020-21ರ ಹೊಸ ಆರ್ಥಿಕ ವರ್ಷ ಏಪ್ರಿಲ್ 1ರಂದು ಆರಂಭವಾಗಲಿದ್ದು, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಅನೇಕ ಹೊಸ ನಿಯಮಗಳು ಜಾರಿಗೆ ಬರಲಿವೆ. ಆದಾಯ ತೆರಿಗೆ ಪದ್ಧತಿ, ಇಂಧನ ದರ ಏರಿಕೆ, ಬ್ಯಾಂಕ್ ವಿಲೀನ ಮಹತ್ವದ್ದಾಗಿದೆ. ನಾಳೆಯಿಂದ ಅನ್ವಯವಾಗುವ ಹಲವು ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.

ಆದಾಯ ತೆರಿಗೆಗೆ ಆಯ್ಕೆ

ವೈಯಕ್ತಿಕ ಆದಾಯ ತೆರಿಗೆ ಪಾವತಿಗೆ ಕೇಂದ್ರ ಸರ್ಕಾರ ಕಳೆದ ಬಜೆಟ್​ನಲ್ಲಿ ಹೊಸ ಪದ್ಧತಿ ಘೋಷಣೆ ಮಾಡಿದೆ. ತೆರಿಗೆದಾರರು ಹಳೆಯ ವ್ಯವಸ್ಥೆಯಲ್ಲೇ ಮುಂದುವರಿಯಬಹುದು ಅಥವಾ ಹೊಸ ತೆರಿಗೆ ಸಂರಚನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ತೆರಿಗೆ ಸ್ಲ್ಯಾಬ್​​ ಹೀಗಿದೆ

  • 5 ರಿಂದ 7.5 ಲಕ್ಷ ರೂ.- 10%
  • 7.5 ಲಕ್ಷದಿಂದ 10 ಲಕ್ಷ ರೂ.- 15%
  • 10ರಿಂದ 12.5 ಲಕ್ಷ ರೂ.- 20%.
  • 12.5 ಲಕ್ಷದಿಂದ 15 ಲಕ್ಷ ರೂ.- 25%.
  • 15 ಲಕ್ಷ ರೂ.ಗಿಂತ ಹೆಚ್ಚು - 30%

ಜಿಎಸ್​ಟಿ ರಿಟರ್ನ್ಸ್ ಸರಳ

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 31ನೇ ಸಭೆಯಲ್ಲಿ ನಿರ್ಧರಿಸಿ ದಂತೆ ಜಿಎಸ್​ಟಿ ವಿವರದ (ರಿಟರ್ನ್ಸ್) ಹೊಸ ನಿಯಮ ಜಾರಿ. ಇದು ಸರಳ ಹಾಗೂ ಸ್ವಯಂಚಾಲಿತವಾಗಿರುತ್ತದೆ. ಹೊಸ ವ್ಯವಸ್ಥೆಯಲ್ಲಿ ಎರಡು ಅರ್ಜಿಗಳಿರುತ್ತವೆ.

ಏರಿಕೆ, ಇಳಿಕೆ

# ವಿದೇಶ ಪ್ರವಾಸ ತೆರಿಗೆಯಲ್ಲಿ ಶೇ. 5 ಏರಿಕೆ.

# ಮೊಬೈಲ್ ಫೋನ್​ಗಳ ನಿರ್ದಿಷ್ಟ ಬಿಡಿಭಾಗಗಳ ಮೇಲಿನ ತೆರಿಗೆ ಹಾಲಿ ಶೇ 12ರಿಂದ ಶೇ 18ಕ್ಕೆ ಏರಿಕೆ

# ಗುಡಿಕೈಗಾರಿಕೆಯಲ್ಲಿ ತಯಾರಾದ ಬೆಂಕಿಕಡ್ಡಿ ಪೊಟ್ಟಣಕ್ಕೆ ಶೇ. 5 ಹಾಗೂ ಇತರ ಎಲ್ಲಾ ಬೆಂಕಿಕಡ್ಡಿ ಪೊಟ್ಟಣಕ್ಕೆ ಶೇ 18 ಜಿಎಸ್​ಟಿ ಇದೆ. ಅದನ್ನು ಎಲ್ಲ ಬಗೆಯ ಬೆಂಕಿ ಪೊಟ್ಟಣಗಳಿಗೆ ಶೇ. 12 ಮಾಡಲಾಗಿದೆ.

# ವಿಮಾನಗಳಿಗೆ ಸಂಬಂಧಿಸಿದ ನಿರ್ವಹಣೆ, ರಿಪೇರಿ ಮತ್ತು ಓವರ್​ಹೌಲ್ (ಎಂಆರ್​ಒ) ಜಿಎಸ್​ಟಿ ಶೇ. 18ರಿಂದ 5ಕ್ಕೆ ಇಳಿಕೆ

ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿ ಬರುವ ಆರು ಕೋಟಿಗೂ ಹೆಚ್ಚು ಇಪಿಎಫ್ ಪಿಂಚಣಿದಾರರಿಗೆ ದೊಡ್ಡ ಮೊತ್ತದ ಪಿಂಚಣಿ ಏ.1ರಿಂದ ಜಾರಿಗೆ ಬರಲಿದೆ.

ಬಡ್ಡಿ ದರ ಕಡಿತ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಶುಕ್ರವಾರ ರೆಪೊ ದರವನ್ನು 75 ಮೂಲ ಅಂಕಗಳಷ್ಟು (ಬಿಪಿಎಸ್) ಕಡಿತಗೊಳಿಸಿದೆ. ಅದಕ್ಕೆ ತಕ್ಕಂತೆ ಬ್ಯಾಂಕ್ ಆಫ್ ಬರೋಡ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸಾಲದ ಮೇಲಿನ ಬಡ್ಡಿ ದರಗಳನ್ನು ಇಳಿಸಿವೆ. ಬಡ್ಡಿ ದರ ಕಡಿತ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಬ್ಯಾಂಕ್​ಗಳ ವಿಲೀನ

ಸರ್ಕಾರಿ ಸ್ವಾಮ್ಯದ ಹತ್ತು ಬ್ಯಾಂಕ್​ಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕ್​ಗಳನ್ನಾಗಿ ಮಾಡಿದ ಮಹತ್ವದ ಕ್ರಮ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ. ವಿಲೀನ ಕುರಿತು ಮಾರ್ಚ್ 4ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ವಿಲೀನ ಕ್ರಮ ಮುಂದೂಡುವಂತೆ ಬ್ಯಾಂಕ್ ಉದ್ಯೋಗಿಗಳ ಸಂಘಗಳು ಮನವಿ ಮಾಡಿದ್ದರೂ ಏಪ್ರಿಲ್ 1ರಿಂದ ಅನುಷ್ಠಾನ ಗೊಳ್ಳುವುದು ಖಚಿತವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಯಾವ್ಯಾವ ಬ್ಯಾಂಕ್?

# ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ವಿಲೀನ.

# ಕೆನರಾ ಬ್ಯಾಂಕ್​ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನ.

# ಇಂಡಿಯನ್ ಬ್ಯಾಂಕ್​ನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನ.

# ಆಂಧ್ರ ಬ್ಯಾಂಕ್ ಮತ್ತು ಕಾರ್ಪೆರೇಷನ್ ಬ್ಯಾಂಕ್​ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net