

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ ತಪ್ಪಿಸಿಕೊಳ್ಳುವ ಹಾಗೂ ವಂಚನೆ ನಡೆಸುವವರ ವಿರುದ್ಧ ನಿಯಮವನ್ನು ಮತ್ತಷ್ಟು ಬಿಗಿ ಮಾಡಲಾಗಿದೆ. ತೆರಿಗೆ ಸಲ್ಲಿಸುವ ಉದ್ಯಮಿಗಳ ಬ್ಯಾಂಕ್ ಖಾತೆಯ ಮಾಹಿತಿಗಳನ್ನೂ ಜಿಎಸ್ಟಿ ಅಧಿಕಾರಿಗಳು ಪಡೆಯಬಹುದಾಗಿದೆ. ಇದರ ಮೂಲಕ ಉದ್ಯಮಿಗಳು ಸಲ್ಲಿಸುತ್ತಿರುವ ಜಿಎಸ್ಟಿ ಅವರ ಆದಾಯಕ್ಕೆ ಸಮನಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಜಿಎಸ್ಟಿ ವಿಭಾಗ, ಹಣಕಾಸು ಗುಪ್ತಚರ ಘಟಕ (ಎಫ್ಐಯು) ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧಿಕಾರಿಗಳು ಶೀಘ್ರದಲ್ಲೇ ರ್ಚಚಿಸಲಿದ್ದಾರೆ. ‘ಇ-ವೇ ಬಿಲ್ಗಳು ಮತ್ತು ಫಾಸ್ಟ್ಟ್ಯಾಗ್ ಮೂಲಕ ಸರಕುಗಳನ್ನು ನಿಜವಾಗಿಯೂ ಸಾಗಿಸಲಾಗಿದೆಯೇ ಎಂದು ನಾವು ಪರಿಶೀಲಿಸುತ್ತೇವೆ. ಇದರಲ್ಲಿ ನಿಜವಾದ ವಹಿವಾಟು ನಡೆದಿದೆಯೆ ಅಥವಾ ಆದಾಯದಲ್ಲಿ ನಕಲಿ ವಿವರಗಳನ್ನು ಭರ್ತಿ ಮಾಡಲಾಗಿದೆಯೇ ಎಂಬ ಬಗ್ಗೆ ಬ್ಯಾಂಕುಗಳ ಡೇಟಾ ನಮಗೆ ಸಹಾಯ ಮಾಡುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಕೈಗೊಂಡ ಕ್ರಮಗಳ ಪರಿಣಾಮದಿಂದಾಗಿ ಕಳೆದ ಡಿಸೆಂಬರ್ ವೇಳೆಗೆ ಜಿಎಸ್ಟಿಆರ್-3ಬಿ ಫಾಮ್ರ್ ಸಲ್ಲಿಕೆ ಶೇ.12 ಹೆಚ್ಚಳವಾಗಿದೆ.