

ಭಾರತದ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಬಿಕ್ಕಟ್ಟು ಬಗೆಹರಿಯುತ್ತಲೇ ಇಲ್ಲ. ಬದಲಿಗೆ ದಿನೇದಿನೆ ಗಂಭೀರಸ್ವರೂಪ ತಳೆಯುತ್ತಿದೆ. ಗೃಹ, ವಾಹನ ಮತ್ತಿತರ ಸಾಲಗಳನ್ನು ನೀಡುವ ಈ ಸಂಸ್ಥೆಗಳಿಗೆ ಗ್ರಾಹಕರಿಂದ ಠೇವಣಿ ಸಂಗ್ರಹಿಸುವ ಅಧಿಕಾರ ಇಲ್ಲ. ಬ್ಯಾಂಕುಗಳು ಅಥವಾ ಷೇರುಪೇಟೆಯಿಂದಲೇ ಅವು ತಮ್ಮ ಹಣ ಕ್ರೋಡೀಕರಿಸಿಕೊಂಡು ಸಾಲ ನೀಡಬೇಕು. ದೊಡ್ಡ ಯೋಜನೆಗಳಿಗೆ ನೀಡಿದ ಭಾರೀ ಸಾಲ ಸರಿಯಾಗಿ ಮರುಪಾವತಿಯಾಗದೇ ಇವು ಬಿಕ್ಕಟ್ಟಿಗೆ ಸಿಲುಕಿವೆ. ಇದರಿಂದಾಗಿ ಸಾಲ ಅಗತ್ಯವಿರುವ ಸಣ್ಣ ಗ್ರಾಹಕರಿಗೆ ಅನ್ಯಾಯ ಆಗುತ್ತಿದೆಯಲ್ಲದೆ, ದೇಶದ ಆರ್ಥಿಕತೆಗೂ ಹೊಡೆತ ಬೀಳುತ್ತಿದೆ.
ಕೆಲವೊಂದು ಘಟನೆಗಳು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಘಟಿಸಬಾರದು ಎಂಬುದು ಎಲ್ಲರ ಆಶಯವಾಗಿರುತ್ತದೆ. ಆದರೆ ಯಾವುದು ಆಗಬಾರದಿತ್ತೋ ಅದು ವಾಸ್ತವದಲ್ಲಿ ಘಟಿಸಿಯೇ ಬಿಡುತ್ತದೆ. ಬಹುಶಃ ನಿಮಗೆಲ್ಲ ಸೆಪ್ಟೆಂಬರ್ 2008ರಲ್ಲಿ ಅಮೆರಿಕದಲ್ಲಿ ನಡೆದ ಲೇಮನ್ ಬ್ರದರ್ಸ್ ಕಂಪನಿಯ ಹಗರಣದ ಬಗ್ಗೆ ತಿಳಿದಿರುತ್ತದೆ. ಈ ಹಗರಣ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮ ಭೀಕರವಾದದ್ದು. ಆಗ ಒಮ್ಮೆಲೇ ಜಾಗತಿಕ ಆರ್ಥಿಕರಂಗ ಈ ಹಗರಣದಿಂದ ಬೆಚ್ಚಿಬಿದ್ದಿತ್ತು.
ಈಗ ನಮ್ಮದೇಶದ ಬ್ಯಾಂಕಿಂಗೇತರ ಸಂಸ್ಥೆಗಳು (ನಾನ್ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನೀಸ್- ಎನ್ಬಿಎಫ್ಸಿ) ದೇಶದ ಆರ್ಥಿಕತೆಗೆ ಸವಾಲಾಗುತ್ತಿವೆಯೇ? ಹೀಗೊಂದು ದಟ್ಟವಾದ ಪ್ರಶ್ನೆ ಈಗ ಏಳುತ್ತಿದೆ. 2018ರ ಅಕ್ಟೋಬರ್ವರೆಗೆ ಎನ್ಬಿಎಫ್ಸಿಗಳು ನಮಗೊಂದು ಸಮಸ್ಯೆಯಾಗುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಯಾವಾಗ ಐಎಲ್ಎಫ್ಎಸ್ (ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವಿಸಸ್) ಹಗರಣ ಬೆಳಕಿಗೆ ಬಂತೋ ಆಗಿನಿಂದ ಈ ಬ್ಯಾಂಕಿಂಗೇತರ ಸಂಸ್ಥೆಗಳ ಹುಳುಕುಗಳು ಒಂದಾದ ಮೇಲೊಂದು ಹೊರಗೆ ಬೀಳುತ್ತಲೇ ಇವೆ.
ಆರ್ಬಿಐ ನಿಯಂತ್ರಣ ಇಲ್ಲ: ರಾಷ್ಟ್ರೀಯ ಬ್ಯಾಂಕ್ಗಳು ಸಾಲ ಕೊಡುವುದೊಂದೇ ಅಲ್ಲದೆ ಗ್ರಾಹಕರಿಂದ ಠೇವಣಿಗಳನ್ನು ಕೂಡ ಸಂಗ್ರಹಿಸುತ್ತವೆ. ಜತೆಗೆ ಹಣ ಪಾವತಿ, ವರ್ಗಾವಣೆಯಂತಹ ಇತರ ಸೌಲಭ್ಯಗಳನ್ನೂ ನೀಡುತ್ತವೆ. ಅಂದರೆ, ಬ್ಯಾಂಕುಗಳು ಸುರಕ್ಷಿತ ಎಂದರ್ಥ. ಆದರೆ ಈ ಎನ್ಬಿಎಫ್ಸಿಗಳು ಇವ್ಯಾವುದನ್ನೂ ಮಾಡುವುದಿಲ್ಲ. ಇವುಗಳ ಆದಾಯದ ಮೂಲವೇ ಮುಕ್ತ ಮಾರುಕಟ್ಟೆಗಳು, ಮ್ಯೂಚುವಲ್ ಫಂಡ್ ಇನ್ವೆಸ್ಟರ್ಗಳು. ಅನೇಕ ವಿಧದ ಎನ್ಬಿಎಫ್ಸಿಗಳು ನಮ್ಮ ನಡುವೆ ಕೆಲಸ ಮಾಡುತ್ತಿವೆ. ಕೆಲವು ಸಂಸ್ಥೆಗಳು ಬಂಗಾರವನ್ನು ಅಡವಿಟ್ಟುಕೊಂಡು ಸಾಲ ನೀಡಿದರೆ ಇನ್ನು ಕೆಲವು ಸಂಸ್ಥೆಗಳು ಕೇವಲ ವಾಹನಗಳ ಖರೀದಿಗೆ ಮಾತ್ರ ಸಾಲ ನೀಡುತ್ತವೆ. ಇನ್ನೊಂದಿಷ್ಟು ಸಂಸ್ಥೆಗಳು ಗೃಹಸಾಲ ಹಾಗೂ ವೈಯಕ್ತಿಕ ಸಾಲವನ್ನು ನೀಡುತ್ತವೆ. ಒಟ್ಟಿನಲ್ಲಿ ಸಾಲ ಕೊಡಲು ನಾ ಮುಂದು ತಾ ಮುಂದು ಎಂದು ಈ
ಎನ್ಬಿಎಫ್ಸಿಗಳು ಬಂದು ನಿಲ್ಲುತ್ತವೆ. ನಮ್ಮದೇಶದಲ್ಲಿ ಎನ್ಬಿಎಫ್ಸಿಗಳ ಮೇಲೆ ರಿಸರ್ವ್ ಬ್ಯಾಂಕ್ ಹೆಚ್ಚಿನ ನಿಯಂತ್ರಣವನ್ನು ಹೊಂದಿಲ್ಲ. ಹಾಗಾಗಿಯೇ ಈ ಸಂಸ್ಥೆಗಳು ಸ್ವೇಚ್ಛೆಯಿಂದ ವ್ಯವಹಾರ ಮಾಡಲು ಪ್ರಾರಂಭಿಸಿದವು. ವಿಪರೀತವಾಗಿ ಬೆಳೆದವು ಕೂಡ. ನಮ್ಮ ದೇಶದಲ್ಲಿ ಸುಮಾರು 11,400 ಎನ್ಬಿಎಫ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಇವು ನೀಡಿದ ಸಾಲದ ಮೊತ್ತ ರಾಷ್ಟ್ರೀಯ ಬ್ಯಾಂಕುಗಳು ನೀಡಿದ ಸಾಲವನ್ನೂ ಮೀರಿಸುವಷ್ಟಿದೆ. ಅಂದರೆ ಈ ಸಂಸ್ಥೆಗಳ ವ್ಯಾಪ್ತಿ ಎಷ್ಟು ಎಂಬುದನ್ನು ನೀವೇ ಅಂದಾಜಿಸಿಕೊಳ್ಳಿ.
ಒಂದರ ಮೇಲೊಂದು ಹಗರಣ: ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ 2018ರ ಅಕ್ಟೋಬರ್ನಲ್ಲಿ ನಮ್ಮ ದೇಶದ ಅತ್ಯಂತ ಹಳೆಯ ಎನ್ಬಿಎಫ್ಸಿಗಳಲ್ಲಿ ಒಂದಾದ ಐಎಲ್ಎಫ್ಎಸ್ನ ಹಗರಣ ಬೆಳಕಿಗೆ ಬಂತು. ಅದಾದ ಮೇಲೆ ಡಿಎಚ್ಎಫ್ಎಲ್, ಅಲ್ಟಿಕೊ ಕ್ಯಾಪಿಟಲ್ ಲಿಮಿಟೆಡ್ ಹೀಗೆ ಒಂದರ ಮೇಲೆ ಒಂದು ಎನ್ಬಿಎಫ್ಸಿ ಹಗರಣಗಳು ಬೆಳಕಿಗೆ ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಮುಕ್ತ ಮಾರುಕಟ್ಟೆಯಿಂದ ಮನಸೋಇಚ್ಛೆ ಸಾಲ ಎತ್ತಿ, ಶಂಕಾಸ್ಪದವಾದ ಅನೇಕ ಯೋಜನೆಗಳಲ್ಲಿ ಹೂಡುವುದನ್ನು ಈ ಎನ್ಬಿಎಫ್ಸಿಗಳು ಮಾಡಿದವು.
ಗಮನಿಸಬೇಕಾದ ವಿಷಯವೆಂದರೆ, ಭಾರತದ ಕಾಪೊರೇಟ್ ಜಗತ್ತಿನ ಅನೇಕ ಗಣ್ಯರು ಇಂಥ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಲ್ಲಿ ಇದ್ದರು; ಈಗಲೂ ಇದ್ದಾರೆ. ಇವರೆಲ್ಲ ಇದ್ದೂ ಸಾಲ ಮರುಪಾವತಿ ಮಾಡಲಾಗದ ಪರಿಸ್ಥಿತಿ ನಿರ್ವಣವಾಯಿತು. ಇಂತಹ ಬೆಳವಣಿಗೆಗಳನ್ನು ನೋಡುತ್ತಾ ಮೂಕಪ್ರೇಕ್ಷಕರಾಗಿ ಉಳಿದು, ಕಂಪನಿಗಳಿಗೆ, ಹೂಡಿಕೆದಾರರಿಗೆ ಮತ್ತು ಸಾಲ ನೀಡಿದವರಿಗೆ ದ್ರೋಹ ಬಗೆಯುವ ಕೆಲಸವನ್ನು ಈ ನಿರ್ದೇಶಕರುಗಳೂ ಮಾಡಿದರು. ಈ ಕಂಪನಿಗಳು ಮಾಡಿರುವ ಹೂಡಿಕೆಯ ಗುಣಮಟ್ಟವನ್ನು ಪರಿಶೀಲಿಸುವಲ್ಲಿ ಆಂತರಿಕ ಮೌಲ್ಯಮಾಪನ ಸಮಿತಿಗಳೂ ವಿಫಲವಾದವು. ಆಂತರಿಕ ಲೆಕ್ಕಪರಿಶೋಧಕರು ಇಂತಹ ಅವ್ಯವಹಾರಗಳ ಕುರಿತು ಎಚ್ಚರಿಕೆ ನೀಡದೆ ಮೌನವಾಗುಳಿದರು.
ಜಿಡಿಪಿ ಮೇಲೂ ಪರಿಣಾಮ: ಇದೆಲ್ಲದರ ಒಟ್ಟು ಪರಿಣಾಮದಿಂದ ಅತ್ಯಂತ ಸಾಮಾನ್ಯ ಮಟ್ಟದ ಪರಿಶೀಲನೆಯೂ ಇಲ್ಲವಾಯಿತು. ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಬ್ಯಾಂಕ್ಗಿಂತ ಹೆಚ್ಚು ನೆಚ್ಚಿಕೊಂಡಿದ್ದು ಮತ್ತು ಮೆಚ್ಚಿಕೊಂಡಿದ್ದು ಇದೇ ಎನ್ಬಿಎಫ್ಸಿಗಳನ್ನು. ಎನ್ಬಿಎಫ್ಸಿಗಳ ಶೇಕಡ 45ರಿಂದ 50ರಷ್ಟು ಆದಾಯ ಬರುತ್ತಿದ್ದುದು ಮ್ಯೂಚುವಲ್ ಫಂಡ್ಗಳಿಂದ. ಆದರೆ ಯಾವಾಗ ಐಎಲ್ಎಫ್ಎಸ್ ಹಗರಣ ಬೆಳಕಿಗೆ ಬಂತೋ, ಆಗ ಅನೇಕ ಮ್ಯೂಚುವಲ್ ಫಂಡ್ ಇನ್ವೆಸ್ಟ್ಮೆಂಟ್ ಕಂಪನಿಗಳು ಹೂಡಿಕೆ ಮಾಡಲು ಹಿಂಜರಿದವು. ಇದರ ಪರಿಣಾಮ ದೇಶದ ಜಿಡಿಪಿಯ ಮೇಲೂ ಆಯಿತು.
ಕನ್ಸೂ್ಯಮರ್ ಫೈನಾನ್ಸಿಂಗ್ನಲ್ಲಿ ಶೇಕಡ 40ರಷ್ಟು ಪಾಲು ಹೊಂದಿದ್ದ ಇದೇ ಎನ್ಬಿಎಫ್ಸಿಗಳು ಇವತ್ತು ಭಾಗಶಃ ಸ್ತಬ್ಧವಾಗಿವೆ. ಹಾಗಾದರೆ ಯಾಕೆ ಈ ಸ್ಥಿತಿ ಬಂತು? ಐಎಲ್ಎಫ್ಎಸ್, ಡಿಎಚ್ಎಫ್ಎಲ್ನಂತಹ ಸಂಸ್ಥೆಗಳಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅನೇಕ ವ್ಯಕ್ತಿಗಳು ವ್ಯವಹಾರವನ್ನು ಮುಚ್ಚಿಡಲು ಪ್ರಯತ್ನಿಸಿದರು. ಕಂಪನಿಯು ಭಾರಿ ನಷ್ಟದ ಹಾದಿಯಲ್ಲಿ ಸಾಗಿದ್ದರೂ ಪೂರ್ಣಕಾಲಿಕ ನಿರ್ದೇಶಕರು ಮಾತ್ರ ಸಿಬ್ಬಂದಿಗೆ ದೊಡ್ಡಮೊತ್ತದ ವೇತನದ ಚೆಕ್ಗಳನ್ನು ಬರೆಯಲು ಸೀಮಿತಗೊಂಡಿದ್ದರು. ಸಂಸ್ಥೆಗಳ ಮೌಲ್ಯಮಾಪನ ವಿಷಯದಲ್ಲಿ ಅನೇಕ ಮೌಲ್ಯಮಾಪನ ಸಂಸ್ಥೆಗಳು ಅಪ್ರಾಮಾಣಿಕವಾಗಿ ವರ್ತಿಸಿದವು. ಒದಗಬಹುದಾದ ಆಪತ್ತಿನ ಅರಿವಿದ್ದೂ, ಅದನ್ನು ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳುವಲ್ಲಿ ಕಂಪನಿಗಳು ವಿಫಲವಾದವು.
ಬೇಕಾಬಿಟ್ಟಿ ಸಾಲ: ಆರ್ಬಿಐನ ಕಠಿಣ ನಿಯಮಗಳು ಅನ್ವಯವಾಗದೇ ಇರುವುದರಿಂದ, ಭದ್ರತೆಯಿಲ್ಲದೆ ಮಾರುಕಟ್ಟೆಯಿಂದ ಬೇಕಾಬಿಟ್ಟಿ ಸಾಲ ಎತ್ತುವಳಿ ಮಾಡಿದವು. ಭಾರತದಲ್ಲೇ ಅತ್ಯಂತ ಪ್ರತಿಷ್ಠಿತರು ಮತ್ತು ನಂಬಿಕಸ್ಥರು ಎನಿಸಿಕೊಂಡಿದ್ದ ನಿರ್ದೇಶಕ ಮಂಡಳಿ ಸದಸ್ಯರೇ ಇದ್ದ ಕಂಪನಿಗಳು ಅಪಾಯಕಾರಿ ಸ್ಥಳದಲ್ಲಿ ಹೂಡಿಕೆ ಮಾಡಿವೆ ಎಂಬುದನ್ನು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತಿದೆ. ಇದನ್ನು ಮೈಮರೆವು-ಅಸಾಮರ್ಥ್ಯ ಎನ್ನುವುದೋ, ದುರಾಸೆ- ದುರಹಂಕಾರ ಎಂದು ಬಣ್ಣಿಸುವುದೋ ಗೊತ್ತಾಗುತ್ತಿಲ್ಲ. ಅದೇನೇ ಇದ್ದರೂ ಅವರ ಮೇಲಿರಿಸಿದ್ದ ನಂಬಿಕೆ ನಶಿಸಿರುವುದಂತೂ ಸ್ಪಷ್ಟ.
ಎನ್ಬಿಎಫ್ಸಿಗಳಿಗೆ ಫಂಡ್ ಮಾಡುತ್ತಿದ್ದ ಅನೇಕ ಮ್ಯೂಚುವಲ್ ಫಂಡ್ ಇನ್ವೆಸ್ಮೆಂಟ್ ಕಂಪನಿಗಳೂ ಈಗ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ. ರಿಯಲ್ ಎಸ್ಟೇಟ್ ವಿಭಾಗದಲ್ಲಿ ಅನೇಕ ಬಿಲ್ಡರ್ಗಳು ಹಣ ತರುತ್ತಿದ್ದುದು ಇದೇ ಎನ್ಬಿಎಫ್ಸಿ ಗಳಿಂದ. ಆದರೆ ಯಾವಾಗ ಹಣದ ಹೂಡಿಕೆಯೇ ಇಲ್ಲವಾಯಿತೋ ಎನ್ಬಿಎಫ್ಸಿ ಗಳ ಬಳಿ ಬಿಲ್ಡರ್ಗಳಿಗೆ ನೀಡಲು ಹಣ ಇಲ್ಲದಾಯಿತು; ರಿಯಲ್ ಎಸ್ಟೇಟ್ ಸೆಕ್ಟರ್ನಲ್ಲಿನ ಅನೇಕ ಬಿಲ್ಡರ್ಗಳು ದೊಡ್ಡ ದೊಡ್ಡ ಯೋಜನೆಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು. ಇವೆಲ್ಲವೂ ಒಟ್ಟಿಗೆ ಸೇರಿ ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದವು.
ನೋಂದಣಿ ರದ್ದು: ಆರ್ಬಿಐ ಅಂದಾಜು 4 ಸಾವಿರ ಎನ್ಬಿಎಫ್ಸಿಗಳ ನೋಂದಣಿ ರದ್ದುಪಡಿಸಿ, ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಆಗಬೇಕಾದ ಬದಲಾವಣೆ ಅಥವಾ ನಿರ್ಧಾರಗಳು ಹಲವಾರು ಇವೆ. ಎನ್ಬಿಎಫ್ಸಿ ವ್ಯವಹಾರಗಳ ಮೇಲೆ ನಿಗಾ ಇಡುವುದರ ಜತೆಗೆ ಮಾನಿಟರ್ ಮಾಡುವ ಕೆಲಸವನ್ನೂ ಆರ್ಬಿಐ ಮಾಡಬೇಕಿದೆ. ಸಂಕಷ್ಟದ ಸುಳಿಗೆ ಸಿಲುಕಿರುವ ಎನ್ಬಿಎಫ್ಸಿಗಳನ್ನು ಪಾರು ಮಾಡಲು ಕೇಂದ್ರ ವಿತ್ತ ಸಚಿವಾಲಯ ಅನೇಕ ಕಾರ್ಯಸೂಚಿಗಳನ್ನು ಪ್ರಕಟಿಸಿದೆ. ದಿನಗಳು ಕಳೆದಂತೆ ಇನ್ನಷ್ಟು ಮತ್ತಷ್ಟು ಅಕ್ರಮಗಳು ಬಹಿರಂಗಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲು ಎನ್ಬಿಎಫ್ಸಿಗಳ ನಿಯಂತ್ರಣದ ಮಾದರಿಯಲ್ಲಿರುವ ನ್ಯೂನತೆಗಳನ್ನು ತೊಡೆದುಹಾಕುವುದಕ್ಕೆ ಆರ್ಬಿಐ ಮುಂದಾಗಬೇಕಿದೆ. ಇದಕ್ಕೆ ಪೂರಕವಾಗಿ ವಿತ್ತ ಸಚಿವಾಲಯ ಮಾರುಕಟ್ಟೆ ಪ್ರತಿನಿಧಿಗಳೊಂದಿಗೆ ರ್ಚಚಿಸಿ, ಮಾರುಕಟ್ಟೆಯಲ್ಲಿ ವಿಶ್ವಾಸ ಮರುಸ್ಥಾಪನೆಗೆ ಪ್ರಯತ್ನಿಸಬೇಕಿದೆ.
ಎನ್ಬಿಎಫ್ಸಿ ವಲಯದ ಹಗರಣದ ಪರಿಣಾಮದಿಂದಾಗಿ, ಬದಲಾವಣೆಯ ಹಾದಿಯಲ್ಲಿರುವ ರಾಷ್ಟ್ರದ ಆರ್ಥಿಕ ರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗದಿದ್ದರೆ ಸಾಕು.
ಏನಿವು ಎನ್ಬಿಎಫ್ಸಿಗಳು?
ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿಗಳು (ಎನ್ಬಿಎಫ್ಸಿ) ಎಂದರೆ ಬ್ಯಾಂಕ್ ಲೈಸೆನ್ಸ್ ಇಲ್ಲದೆ ಬ್ಯಾಂಕ್ ನೀಡುವ ಸಾಲಗಳ ಸೇವೆ ನೀಡುವ ಸಂಸ್ಥೆಗಳು. ಒಬ್ಬ ವ್ಯಕ್ತಿಯು ಕಾರನ್ನು ಖರೀದಿಸಲು ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಿರುತ್ತಾನೆ. ಆದರೆ ಬ್ಯಾಂಕ್ ಆತನ ಅರ್ಜಿಯನ್ನು ಪರಿಶೀಲಿಸಿ ಆ ವ್ಯಕ್ತಿಯ ಮರುಪಾವತಿ ಸಾಮರ್ಥ್ಯ ಪರೀಕ್ಷಿಸಿ ಹಣ ಮಂಜೂರು ಮಾಡಲು ಕನಿಷ್ಠ 20 ದಿನ ಬೇಕಾಗುತ್ತದೆ. ಅದೂ ಅಲ್ಲದೆ ಬ್ಯಾಂಕಿಂಗ್ ನಿಯಮಗಳ ಅಡಿಯಲ್ಲಿ ಅರ್ಜಿ ಪುರಸ್ಕಾರಗೊಳ್ಳದೆ ಸಾಲ ಮಂಜೂರು ಆಗದೆಯೂ ಇರಬಹುದು. ಆದರೆ ಇದೇ ವ್ಯಕ್ತಿಗೆ ಕೇವಲ ಎರಡು ದಿನಗಳಲ್ಲಿ ಕಾರ್ ಲೋನನ್ನು ಇನ್ನೊಂದು ಹಣಕಾಸು ಸಂಸ್ಥೆ ಮಂಜೂರು ಮಾಡುತ್ತದೆ. ಹೀಗೆ ಬ್ಯಾಂಕಿನ ನೆರಳಿನಂತೆ ಕೆಲಸ ಮಾಡುವ ಸಂಸ್ಥೆಗಳೇ ಎನ್ಬಿಎಫ್ಸಿಗಳು. ಹಾಗಾಗಿ ಇವುಗಳನ್ನು ಶ್ಯಾಡೋ ಬ್ಯಾಂಕಿಂಗ್ ಕಂಪನಿಗಳು ಎಂದು ಕೂಡ ಕರೆಯುತ್ತಾರೆ.
ಪ್ರಸನ್ನ ಕಂಬದಮನೆ