ಮಧುಮೇಹಿಗಳಿಗೂ ಹಿತ ತೆಲಂಗಾಣ ಸೋನಾ ಭತ್ತ

photo (2)
Published on

| ಸುನೀಲ್ ಪೊನ್ನೇಟಿ, ಮಡಿಕೇರಿ

ದೇಶದ ಜನಸಂಖ್ಯೆಯ ಅರ್ಧ ಭಾಗಕ್ಕಿಂತಲೂ ಹೆಚ್ಚು ಜನರನ್ನು ಇಂದು ಮಧುಮೇಹ ಆವರಿಸಿಕೊಂಡಿದೆ. ಈ ಕಾಯಿಲೆ ಇರುವವರು ಅನ್ನ ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಧುಮೇಹ ಇರುವವರೂ ಸೇವಿಸಬಹುದಾದ ಭತ್ತದ ತಳಿಯೊಂದನ್ನು ಕೊಡಗಿನ ಬೇಗೂರು ಗ್ರಾಮದ ರೈತರು ನಾಟಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಇಲಾಖೆ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲೂ ಈ ತಳಿಯ ಭತ್ತದ ಬೀಜ ಲಭ್ಯವಿದೆ. ಆಸಕ್ತರಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.

ಭತ್ತದ ಕೃಷಿ ಬಗ್ಗೆ ರೈತರು ಆಸಕ್ತಿ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಪೋನ್ನಂಪೇಟೆ ತಾಲೂಕು ಬೇಗೂರು ಗ್ರಾಮದ ಮತ್ರಂಡ ಪ್ರವೀಣ್ 13 ಎಕರೆ ಭತ್ತದ ಗದ್ದೆಯನ್ನು ಗುತ್ತಿಗೆ ಪಡೆದು ಕೃಷಿಗೆ ಇಳಿದಿದ್ದಾರೆ. ವಿಶೇಷ ಅಂದರೆ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯ 2015ರಲ್ಲಿ ಬಿಡುಗಡೆ ಮಾಡಿದ ಆರ್​ಎನ್​ಆರ್-15048 ಭತ್ತದ ತಳಿ ಆಯ್ಕೆಮಾಡಿಕೊಂಡಿದ್ದಾರೆ.

ಶರ್ಕರಪಿಷ್ಟ ಶೇ.50 ಕಡಿಮೆ: ತಲೆಮಾರುಗಳಿಂದ ಪರಂಪರಾಗತವಾಗಿ ಭತ್ತದ ಕೃಷಿ ಮುಂದುವರಿಸಿಕೊಂಡು ಬಂದಿರುವ ಮತ್ರಂಡ ಪ್ರವೀಣ್ ಆರ್​ಎನ್​ಆರ್-15048 ಭತ್ತದ ತಳಿ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಹಲವು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ಬೇಗನೆ ಹಸಿವಾಗುವುದಿಲ್ಲ. ಹಾಗಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಬೇಗನೆ ಹೆಚ್ಚಾಗುವುದಿಲ್ಲ. ಬೇರೆಯ ಭತ್ತದ ತಳಿಗಳಿಗೆ ಹೋಲಿಸಿದರೆ ಶರ್ಕರಪಿಷ್ಟ ಶೇ.50 ಕಡಿಮೆ ಇರುತ್ತದೆ. ಶೇ.5 ಹೆಚ್ಚಿನ ಪ್ರಮಾಣದ ಪ್ರೊಟೀನ್ ಒಳಗೊಂಡಿರುತ್ತದೆ. ಆದ್ದರಿಂದ ಇದು ಮಧುಮೇಹದಿಂದ ಬಳಲುತ್ತಿರುವವರೂ ಸೇವಿಸಬಹುದಾಗಿದೆ.

125 ದಿನಗಳಲ್ಲಿ ಕಟಾವಿಗೆ: ಮುಖ್ಯವಾಗಿ ಬೆಂಕಿ ರೋಗ ತಡೆದುಕೊಂಡು ಬೆಳೆಯುವ ತಳಿಯಾಗಿದೆ. 120ರಿಂದ 125 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಮುಂಗಾರು ಮತ್ತು ಹಿಂಗಾರಿನಲ್ಲೂ ಬೆಳೆಯ ಬಹುದಾಗಿದೆ. 100 ಕೆಜಿ ಭತ್ತದಿಂದ ಸರಾಸರಿ 67 ಕೆಜಿ ಅಕ್ಕಿ ಸಿಗುತ್ತದೆ. ಸೋನಾ ಮಸೂರಿ ಅಕ್ಕಿಯಂತೆ ಇರುವುದರಿಂದ ಊಟಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಆಗಸ್ಟ್​ನಲ್ಲೂ ನಾಟಿ ಮಾಡಬಹುದಾಗಿದೆ. ಇದರ ಸರಾಸರಿ ಇಳುವರಿ ಕೊಡಗಿ ನಲ್ಲಿ ಪ್ರತಿ ಎಕರೆಗೆ 15-20 ಕ್ವಿಂಟಾಲ್ ಬರಲಿದೆ.

ಶೇ.51 ಗ್ಲೈಸಮಿಕ್ ಇಂಡೆಕ್ಸ್: ಯಾವುದೇ ಆಹಾರದಲ್ಲಿ ಶರ್ಕರಪಿಷ್ಟ ಎಷ್ಟು ಪ್ರಮಾಣದಲ್ಲಿ ಇರುತ್ತದೆ ಮತ್ತು ಇದರಿಂದ ಎಷ್ಟು ಬೇಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸುವ ಸೂಚಕವನ್ನು ಗ್ಲೈಸಮಿಕ್ ಇಂಡೆಕ್ಸ್ ಎನ್ನುತ್ತಾರೆ. ಸಾಮಾನ್ಯವಾಗಿ ಆಹಾರದಲ್ಲಿ ಗ್ಲೈಸಮಿಕ್ ಇಂಡೆಕ್ಸ್ ಅನ್ನು 0 ಯಿಂದ 100 ಅಳತೆ ಪ್ರಮಾಣದಲ್ಲಿ ನಿರ್ಧರಿಸಲಾಗುತ್ತದೆ. ಆರ್​ಎನ್​ಆರ್ ಭತ್ತದ ತಳಿಯಲ್ಲಿ ಗ್ಲೈಸಮಿಕ್ ಇಂಡೆಕ್ಸ್ 51ರ ಅಳತೆಯಲ್ಲಿ ಇದೆ. ಆದ್ದರಿಂದ ಇದು ಮಧುಮೇಹದಿಂದ ಬಳಲುತ್ತಿರುವವರೂ ಸೇವಿಸಬಹುದಾಗಿದೆ.

ಕೊಡಗು ಕೃಷಿ ಇಲಾಖೆಯು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಆರ್​ಎನ್​ಆರ್ ಭತ್ತದ ತಳಿ ಲಭ್ಯ ಇರುವಂತೆ ಮಾಡಿದೆ. ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ ಮೂಲಕ ಜಿಲ್ಲೆಯ ರೈತರು ಈ ತಳಿಯನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಷ ಬೇಗೂರಿನ ಕೆಲ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಭತ್ತ ಖರೀದಿಸಿ ನಾಟಿ ಮಾಡಿದ್ದಾರೆ. | ಡಾ.ವೀರೇಂದ್ರ ಕುಮಾರ್ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಭತ್ತ ಕೃಷಿ ಮಾಡುವುದರಿಂದ ಅಂತರ್ಜಲ ವೃದ್ಧಿ ಆಗುತ್ತದೆ. ಇದು ನಮ್ಮ ಪೂರ್ವಜರು ಮಾಡುತ್ತಿದ್ದ ಕೃಷಿ. ನಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಪಾಳು ಬಿದ್ದಿರುವ ಗದ್ದೆಗಳಲ್ಲಿ ಭತ್ತ ಬೆಳೆಯಲಾಗುತ್ತಿದೆ. ಕೃಷಿಗೆ ಯಂತ್ರಗಳ ಬಳಕೆ ಹೆಚ್ಚಾಗಿ ಮಾಡಲಾಗುತ್ತಿದೆ. ಇನ್ನೂ ಸಾವಿರ ಎಕರೆಯಲ್ಲಿ ಭತ್ತ ಬೆಳೆಯುವುದಕ್ಕೂ ಬೇಕಾದ ವ್ಯವಸ್ಥೆ ನಮ್ಮಲ್ಲಿದೆ. ಆರ್​ಎನ್​ಆರ್-15048 ಭತ್ತದ ತಳಿ ಮಧುಮೇಹಿಗಳೂ ಸೇವಿಸಬಹುದು ಎನ್ನುವುದು ಸೇರಿ ಹಲವು ವಿಶೇಷಗಳನ್ನು ಹೊಂದಿರುವುದರಿಂದ ಅದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. | ಮತ್ರಂಡ ಪ್ರವೀಣ್ ಕೃಷಿಕ ಬೇಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net