

ನವದೆಹಲಿ: ಹೊಸ ಸಂಸತ್ ಭವನ ನಿರ್ಮಾಣದ ಗುತ್ತಿಗೆಗೆ ಬಿಡ್ ಸಲ್ಲಿಸುವ ಪ್ರಕ್ರಿಯೆ ನಿನ್ನೆ ಆರಂಭವಾಗಿದೆ. ಸಂಸತ್ ಭವನ ನಿರ್ಮಾಣದ ಗುತ್ತಿಗೆ ಪಡೆಯುವ ವಿಚಾರದಲ್ಲಿ ಫ್ರಂಟ್ ರನ್ನರ್ ಆಗಿದ್ದ ಲಾರ್ಸೆನ್ ಆ್ಯಂಡ್ ಟೂಬ್ರೋ (ಎಲ್ಆ್ಯಂಡ್ ಟಿ) ಗೆ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.
ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ (ಸಿಪಿಡಬ್ಲ್ಯುಡಿ) ಟೆಂಡರ್ ಮಾಹಿತಿ ಪ್ರಕಾರ, ಹೊಸ ಸಂಸತ್ ಭವನದ ನಿರ್ಮಾಣದ ವೆಚ್ಚವಾಗಿ ಟಾಟಾ ಪ್ರಾಜೆಕ್ಟ್ಸ್ 861.90 ಕೋಟಿ ರೂಪಾಯಿಗಳ ಬಿಡ್ಡಿಂಗ್ ಸಲ್ಲಿಸಿದೆ. ಇದೇ ವೇಳೆ, ಎಲ್ ಆ್ಯಂಡ್ ಟಿ 865 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದೆ. ಇದರೊಂದಿಗೆ ಕನಿಷ್ಠ ಬಿಡ್ಡಿಂಗ್ ಸಲ್ಲಿಸಿದ ಕಂಪನಿಯಾಗಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಮುಂಚೂಣಿಗೆ ಬಂದಿದೆ.
ಈ ಹಿಂದೆ ಟೆಕ್ನಿಕಲ್ ಬಿಡ್ಡಿಂಗ್ ನಲ್ಲಿ ಮೂರು ಕಂಪನಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದವು. ಈ ಎರಡು ಕಂಪನಿಗಳ ಹೊರತಾಗಿ ಶಾಪೂರ್ಜಿ ಪಲ್ಲೋನ್ಜಿ ಆ್ಯಂಡ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕೂಡ ಟೆಕ್ನಿಕಲ್ ಬಿಡ್ಡಿಂಗ್ ಗೆದ್ದಿತ್ತು. ಆದರೆ, ಆರ್ಥಿಕ ಬಿಡ್ಡಿಂಗ್ ಸಲ್ಲಿಸಿದ್ದು ಎರಡು ಕಂಪನಿಗಳು ಮಾತ್ರವೇ. ನಿಯಮ ಪ್ರಕಾರ, ಕನಿಷ್ಠ ಆರ್ಥಿಕ ಬಿಡ್ಡಿಂಗ್ ಸಲ್ಲಿಸಿದ ಕಂಪನಿಗೆ ಗುತ್ತಿಗೆ ಸಿಗಲಿದೆ. ಹೀಗಾಗಿ ಹೊಸ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಗುತ್ತಿಗೆ ಟಾಟಾ ಪಾಲಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)