ತೈವಾನ್ ಪೇರಲ ಕೃಷಿ

perala mar 20
Published on

ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ದಿನಮಾನಗಳಲ್ಲಿ ತೋಟಗಾರಿಕೆ ಬೆಳೆಯಾದ ಪೇರಲ ಬೆಳೆದು ಹೆಚ್ಚು ಲಾಭ ಗಳಿಸುವ ಮೂಲಕ ಇಂಜಿನಿಯರಿಂಗ್ ಪದವೀಧರ ರವಿಪಾಟೀಲ್ ವ್ಯವಸಾಯದಲ್ಲಿ ಯಶ ಕಂಡಿದ್ದಾರೆ.

ತಾಲೂಕಿನ ಬಲ್ಲಟಗಿ ಗ್ರಾಮದ ಯುವಕ ರವಿ ಪಾಟೀಲ್ 2015ರಲ್ಲಿ ಇಂಜಿನಿಯರಿಂಗ್ ಮುಗಿಸಿ ಬಿಇಎಲ್​ನಲ್ಲಿ 7-8 ತಿಂಗಳು ಗುತ್ತಿಗೆದಾರರಾಗಿ ಕೆಲಸ ಮಾಡಿದರು. ಆ ಕೆಲಸ ಸರಿ ಹೋಗದೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಗ್ರಾಮಕ್ಕೆ ಆಗಮಿಸಿದರು. ಎಕರೆ ಹೊಲದಲ್ಲಿ ಪೇರಲ ಬೆಳೆಯಲು ನಿರ್ಧಾರ ಮಾಡಿ, ಈಗ ತಿಂಗಳಿಗೆ 70 ರಿಂದ 1 ಲಕ್ಷ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ತೈವಾನ್ ತಳಿಯ ಪೇರಲ ಗಿಡಗಳನ್ನು ಎಕರೆ ಹೊಲದಲ್ಲಿ 2 ಲಕ್ಷ ರೂ. ಖರ್ಚು ಮಾಡಿ 900ಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿ ನಾಟಿಯಾದ ಎಂಟು ತಿಂಗಳಲ್ಲಿ ಫಲ ನೀಡಲು ಆರಂಭಿಸಿದೆ. ವರ್ಷದಲ್ಲಿ 7-8 ತಿಂಗಳು ಫಲ ನೀಡುವ ಪೇರಲ, ತಿಂಗಳಿಗೆ 70 ರಿಂದ 1 ಲಕ್ಷ ರೂ.ವರೆಗೆೆ ಲಾಭ ಪಡೆಯುತ್ತಿದ್ದಾರೆ. ಬೆಳೆದ ಪೇರಲ ಹೊಲದಲ್ಲೆ ಮಾರಾಟವಾಗುತ್ತಿದೆ. ಬಿಡಿ ವ್ಯಾಪಾರಸ್ಥರು ತೋಟಕ್ಕೆ ಬಂದು ಹಣ್ಣುಗಳನ್ನು ಕೊಳ್ಳುತ್ತಿದ್ದಾರೆ. ಮೊದಲ ವರ್ಷ 30-40 ಸಾವಿರ ಲಾಭ ತಂದು ಕೊಟ್ಟಿರುವ ಪೇರಲ ಈ ವರ್ಷ ಅಧಿಕ ಲಾಭ ತರಲಿದೆ. ಪ್ರತಿದಿನ 2 ಕ್ವಿಂಟಲ್ ಪೇರಲ ಮಾರಾಟವಾಗುತ್ತಿದೆ. ಕೆಜಿಗೆ 30 ರೂ. ನಂತೆ ವ್ಯಾಪಾರಸ್ಥರು ತೋಟಕ್ಕೆ ಬಂದು ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರೈತ ರವಿ ಪಾಟೀಲ್. ಒಂದು ಎಕರೆಯಲ್ಲಿ ಬೆಳೆದ ಪೇರಲ ಗಿಡಗಳಿಗೆ ಕೊಳವೆ ಬಾವಿಯಿಂದ ಹನಿ ನೀರಾವರಿ ಮೂಲಕ ಬೆಳೆಸುತ್ತಿದ್ದಾರೆ.

ಮೂರ್ನಾಲ್ಕು ವರ್ಷಗಳಿಂದ ಕೃಷಿಯಲ್ಲಿ ಲಾಭ ಇಲ್ಲದೇ ರೈತರು ನಷ್ಟ ಅನುಭವಿಸುತ್ತಿದ್ದೇವೆ. ಈ ಕಷ್ಟ ಮಕ್ಕಳಿಗೆ ಬೇಡ ಎಂದು ಇಂಜಿನಿಯರಿಂಗ್ ಓದಿಸಿದೆ. ಈಗ ಕೃಷಿ ಮಾಡುತ್ತೇನೆ ಎಂದು ಪೇರಲ ಬೆಳೆಯುತ್ತಿದ್ದಾನೆ. ಅವನ ಇಷ್ಟದಂತೆ ಕೃಷಿ ಮಾಡಲಿ, ನಂಬಿದವರಿಗೆ ಭೂತಾಯಿ ಕೈ ಬಿಡೊದಿಲ್ಲ. | ಅಮರೇಶಪ್ಪಗೌಡ ಬಲ್ಲಟಗಿ ರವಿ ಪಾಟೀಲ್ ತಂದೆ ಇಂಜಿನಿಯರಿಂಗ್ ಮುಗಿದ ಮೇಲೆ ಏನಾದರೂ ಸಾಧಿಸುವ ಛಲವಿತ್ತು. ಸಾಕಷ್ಟು ಜನ ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುವುದರಿಂದ ನೌಕರಿ ಅಷ್ಟಕಷ್ಟೆ. ಕೃಷಿಯಲ್ಲಿ ಸಾಧಿಸುವ ಆಸೆ ಮೂಡಿತು. ತೈವಾನ್ ದೇಶದ ಪೇರಲ ತಳಿ ಈ ವಾತಾವರಣಕ್ಕೆ ಹೊಂದುತ್ತದೋ ಇಲ್ಲವೊ ಎಂಬ ಭಯ ಇತ್ತು. ಒಳ್ಳೆ ಇಳುವರಿಯಿಂದ ಈಗ ಭಯ ಹೊರಟು ಹೋಗಿದೆ. | ರವಿ ಪಾಟೀಲ್ ಬಲ್ಲಟಗಿ ರೈತ

ಶರಣಬಸವ ನೀರಮಾನ್ವಿ ಮಾನ್ವಿ (ರಾಯಚೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net