

ಬೆಂಗಳೂರು: ಸುದೀಪ್ ಚಿತ್ರರಂಗಕ್ಕೆ ಬಂದ 26 ವರ್ಷಗಳ ಬಳಿಕ ಬೇರೆ ಬೇರೆ ಉದ್ಯಮದತ್ತ ಗಮನ ಹರಿಸಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ಜತೆಜತೆಗೇ ಪತ್ನಿ ಪ್ರಿಯಾ ಸುದೀಪ್ ನೇತೃತ್ವದಲ್ಲಿ ‘ಕಾಫಿ ಆ್ಯಂಡ್ ಬನ್ಸ್ ಇನ್ನೊವೇಷನ್ಸ್’ ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. ಆ ಮೂಲಕ ರೆಸ್ಟೋರೆಂಟ್, ಕೆಫೆ, ಕ್ರಿಕೆಟ್, ಎನ್ಎಫ್ಟಿ (ನಾನ್ ಫಂಜಿಬಲ್ ಟೋಕನ್ಸ್) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದಾರೆ.
ಈ ಕುರಿತು ಇತ್ತೀಚೆಗಷ್ಟೇ ಮಾತನಾಡಿದ ನಟ ಕಿಚ್ಚ ಸುದೀಪ್, ‘ನನಗೆ ಕುಕ್ಕಿಂಗ್ ಅಂದರೆ ಪ್ಯಾಷನ್. ನಮ್ಮ ಫ್ಯಾಮಿಲಿ ಬಿಸಿನೆಸ್ ಕೂಡ ಅದೇ ಆಗಿತ್ತು. ಹೀಗಾಗಿಯೇ ಅಡುಗೆ ರಕ್ತಗತವಾಗಿಯೇ ನನಗೂ ಬಂದಿದೆ. ನನ್ನ ತಂದೆ ತಮ್ಮ ಜೀವನದ ಬಹುತೇಕ ಸಮಯ ಹೋಟೆಲ್ ಉದ್ಯಮದಲ್ಲೇ ಇದ್ದರು. ಇತ್ತೀಚೆಗೆ ಅವರು ಅದರಿಂದ ನಿವೃತ್ತಿ ಪಡೆದಿದ್ದಾರೆ. ಅದೇ ವಾತಾವರಣದಲ್ಲಿ ಬೆಳೆದ ಕಾರಣ ಅದನ್ನು ಮುಂದುವರೆಸಬೇಕು ಎಂಬುದು ನನ್ನಾಸೆ. ಅವರಂತೆ ಸರೋವರದ ರೀತಿ ದೊಡ್ಡ ಸಂಸ್ಥೆ ಕಟ್ಟಲು ನನಗೆ ಸಾಧ್ಯವಾಗದೇ ಇರಬಹುದು. ಅದರಲ್ಲಿ ಒಂದಕ್ಷರದಷ್ಟಾದರೂ ನಾನು ಮಾಡಬಲ್ಲೆ ಎಂಬ ನಂಬಿಕೆಯಿದೆ. ಟೀ ಆಂಡ್ ಬನ್, ಕಾಫಿ ಆಂಡ್ ಕುಕ್ಕೀಸ್ ಅಂತ ಸಾಮಾನ್ಯವಾಗಿ ಕೇಳಿರುತ್ತೀರ. ಆದರೆ ಕಾಫಿ ಆಂಡ್ ಬನ್ ನನ್ನ ಕಾಂಬಿನೇಷನ್. ಹೀಗಾಗಿಯೇ ಕಾಫಿ ಅಂಡ್ ಬನ್ಸ್ ಇನ್ನೊವೇಷನ್ಸ್ ಕಂಪನಿ ಪ್ರಾರಂಭಿಸಿ ಅದರಡಿಯಲ್ಲಿ ಸಣ್ಣ ರೆಸ್ಟೋರೆಂಟ್ಗಳು, ಕೆಫೆಗಳನ್ನು ಶುರು ಮಾಡಲಿದ್ದೇವೆ’ ಎಂದು ಮತ್ತಷ್ಟು ಮಾಹಿತಿ ಹಂಚಿಕೊಂಡರು.
ವಿಶೇಷ ಅಂದರೆ ಸುದೀಪ್ ಪತ್ನಿ ಪ್ರಿಯಾ ಅವರೇ ಈ ಕಾಫಿ ಆ್ಯಂಡ್ ಬನ್ಸ್ ಚೇರ್ಮನ್ ಅಂತೆ. ಪತ್ನಿಯ ನೇತೃತ್ವದಲ್ಲೇ ಈ ಕಂಪನಿ ಮುಂದುವರೆಯಲಿದ್ದು, ‘ನಾನು ಸಿನಿಮಾಗಳಲ್ಲೆ ಹೆಚ್ಚು ತೊಡಗಿರುತ್ತೇನೆ’ ಎನ್ನುತ್ತಾರೆ ಸುದೀಪ್. ಬಳಿಕ ಮಾತನಾಡಿದ ಪ್ರಿಯಾ, ‘ಕಾಫೀ ಆಂಡ್ ಬನ್ಸ್, ಸುದೀಪ್ ಅವರ ಮಗು. ಅವರಿಗೆ ಕಾಫಿ ಮತ್ತು ಬನ್ ಕಾಂಬಿನೇಷನ್ ಅಂದರೆ ಇಷ್ಟ. ಹೀಗಾಗಿ ಅವರೇ ಹೆಸರಿಟ್ಟಿದ್ದು. ಒಂದು ಕಾರ್ಪೆರೇಟ್ ಬ್ರಾ್ಯಂಡ್ ಹುಟ್ಟುಹಾಕುವ ಐಡಿಯಾ ಇದೆ. 26 ವರ್ಷಗಳಿಂದ ಸಿನಿಮಾದಲ್ಲೇ ಇದ್ದಾರೆ. ಈಗಾದರೂ ಬೇರೆ ಉದ್ಯಮದತ್ತ ಕೊಂಚ ಗಮನ ಹರಿಸಬೇಕು ಅಂತನ್ನಿಸಿತು. ಕೆಫೆ, ಕ್ರಿಕೆಟ್ ಸೇರಿದಂತೆ ಸುದೀಪ್ ಅವರಿಗೆ ಇಷ್ಟವಾದ ನಾಲ್ಕು ಕ್ಷೇತ್ರಗಳಲ್ಲಿ ಮೊದಲು ಗಮನ ಹರಿಸಲಿದ್ದೇವೆ’ ಎಂದು ಹೊಸ ಉದ್ಯಮದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರು.
ಬರಲಿದೆ ಕಿಚ್ಚವರ್ಸ್: ಎನ್ಎಫ್ಟಿ ಅಂದರೆ ನಾನ್ ಫಂಜಿಬಲ್ ಟೋಕನ್. ಮೆಟಾವರ್ಸ್ ಎಂಬುದು ಆನ್ಲೈನ್ ಲೋಕ. ಇದರಲ್ಲಿ ಕಿಚ್ಚವರ್ಸ್ ಕೂಡ ಇರಲಿದೆ. ಅಲ್ಲಿ ಕಿಚ್ಚ ಸುದೀಪ್ ಅವರ ಆನ್ಲೈನ್ ಪ್ರಪಂಚಕ್ಕೆ ಯಾರು ಬೇಕಾದರೂ ಭೇಟಿ ನೀಡಬಹುದು. ಖುದ್ದು ಅವರೊಂದಿಗೆ ಮಾತನಾಡಬಹುದು. ಅವರು ಬಳಸಿದ ವಸ್ತುಗಳು ಖರೀದಿಸಬಹುದು. ಆದರೆ, ಆ ವಸ್ತುಗಳನ್ನು ನಿಮ್ಮ ಕೈಸೇರುವುದಿಲ್ಲ. ಬದಲಾಗಿ ಆನ್ಲೈನ್ನಲ್ಲೇ ಸೇಫ್ ಆಗಿ ಇರುತ್ತವೆ. ಬೇಡ ಅನ್ನಿಸಿದಾಗ ಅವನ್ನು ಮತ್ತೊಬ್ಬರಿಗೆ ಮಾರಲೂ ಬಹುದು. ‘ಕಿಚ್ಚವರ್ಸ್’ ಎಂಬ ಮೆಟವರ್ಸ್, ದುಬೈನಲ್ಲಿ ಇದೇ ಜುಲೈ 25ರಂದು ಲಾಂಚ್ ಆಗಲಿದೆ. ಹಾಗೆಯೇ 500 ಅಭಿಮಾನಿಗಳು 10 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೂ ಹಣ ಕೊಟ್ಟು ಸಿಲ್ವರ್, ಗೋಲ್ಡ್, ಪ್ಲಾಟಿನಂ, ಡೈಮಂಡ್ ಎಂಬ ಟಿಕೆಟ್ಗಳನ್ನು ಖರೀದಿಸಬಹುದು. ಅಂಥವರಿಗೆ ‘ವಿಕ್ರಾಂತ್ ರೋಣ’ ಚಿತ್ರವನ್ನು ದುಬೈನಲ್ಲಿ ಚಿತ್ರತಂಡದ ಜತೆ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್, ‘ಎನ್ಎಫ್ಟಿ ಮೂಲಕ ಅಭಿಮಾನಿಗಳಿಂದ ದುಡ್ಡು ಕಿತ್ಕೊಂಡು ನಾನು ಹಣ ಮಾಡಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. ನಾನು ಯಾವತ್ತು ಏನೇ ಹಣ ಮಾಡಿದರೂ, ಇನ್ನೊಂದು ಒಳ್ಳೆ ಕೆಲಸಕ್ಕೆ ಆ ಹಣವನ್ನು ಕೊಟ್ಟಿದ್ದೇನೆಯೇ ಹೊರತು, ನನಗಾಗಿ ಮಾಡಿಕೊಂಡಿದ್ದು ತುಂಬ ಕಡಿಮೆ’ ಎನ್ನುತ್ತಾರೆ.