ಸಂಬಳ ಕೈಸೇರಿದ ತಕ್ಷಣ ‘ಎಫ್ಡಿ ಇಡು, ಪೋಸ್ಟ್ ಆಫೀಸ್ ಸೇವಿಂಗ್ಸ್ ಮಾಡು, ಚಿನ್ನ ಖರೀದಿಸು’ ಎನ್ನುತ್ತಿದ್ದ ಜಮಾನಾ ಮುಗಿಯಿತು. ‘ಷೇರುಪೇಟೆ ಅಂದ್ರೆ ಬರೀ ಜೂಜು’ ಎಂಬ ಎಚ್ಚರಿಕೆಯ ಮಾತೂ ಹಳತಾಯಿತು. ಇಂದಿನ ಜೆನ್ಜೀ ಮತ್ತು ಮಿಲೇನಿಯಲ್ ಪಡೆ, ತನ್ನ ಬಳಿ ಇರುವ ಕಡಿಮೆ ದುಡ್ಡಿನಲ್ಲೇ ಕೋಟಿಗಳ ಸಾಮ್ರಾಜ್ಯ ಕಟ್ಟಲು ಮುಂದಾಗಿದೆ. ಕೈಯಲ್ಲಿರುವ ಸ್ಮಾರ್ಟ್ಫೋನ್ ಮೂಲಕವೇ ಬಂಡವಾಳ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬರೀ ಹಣ ಉಳಿಸಿದರೆ ಪ್ರಯೋಜನವಿಲ್ಲ, ಆ ಹಣದಿಂದ ಮತ್ತಷ್ಟು ಹಣ ಗಳಿಸುವುದು ಹೇಗೆ ಎಂಬ ಸೂಕ್ಷ್ಮವನ್ನು ಯುವಪಡೆ ಕರಗತ ಮಾಡಿಕೊಳ್ಳುತ್ತಿದೆ. ರಿಸ್ಕುಗಳೇ ರಿವಾರ್ಡ್ ಆಗಿ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡುತ್ತಿವೆ.
ಕೆಲವೇ ವರ್ಷಗಳ ಹಿಂದಿನ ಮಾತಿದು. ಸಂಬಳ ಕೈ ಸೇರಿದ ತಕ್ಷಣ ಯುವಕರಿಗೆ ಮನೆಯ ಹಿರಿಯರು ನೀಡುತ್ತಿದ್ದ ಮೊದಲ ಸಲಹೆ- ‘ಸ್ವಲ್ಪ ಹಣ ಉಳಿಸು, ಅಂಚೆ ಕಚೇರಿ ಅಥವಾ ಬ್ಯಾಂಕ್ನಲ್ಲಿ ಫಿಕ್ಸೆಡ್ ಡಿಪಾಜಿಟ್ (ಎಫ್ಡಿ) ಮಾಡು, ಒಂದು ಎಲ್ಐಸಿ ಪಾಲಿಸಿ ಮಾಡಿಸು, ಸಾಧ್ಯವಾದರೆ ಸ್ವಲ್ಪ ಬಂಗಾರ ಕೊಂಡುಕೋ...’ ಇತ್ಯಾದಿ. ಅವರೆಲ್ಲ ಷೇರುಪೇಟೆಯ ಹೆಸರೆತ್ತಿದರೂ ಹೆದರುತ್ತಿದ್ದರು. ‘ಅದು ಜೂಜು ಇದ್ದ ಹಾಗೆ ಕಣಪ್ಪಾ, ನಮ್ಮಂತಹ ಮಧ್ಯಮ ವರ್ಗದವರಿಗೆ ಹೇಳಿಸಿದ್ದಲ್ಲ, ಕೈಸುಟ್ಟುಕೊಳ್ಳುತ್ತೀಯ ದೂರವಿರು...’ ಎಂದು ಎಚ್ಚರಿಕೆ ನೀಡುತ್ತಿದ್ದರು.
ಆದರೆ, ಇವತ್ತು ಆ ಸಿದ್ಧಸೂತ್ರಗಳೆಲ್ಲ ಹಳತಾಗಿಬಿಟ್ಟಿವೆ. ಹಿರಿಯರು ಯಾವುದನ್ನು ಅಪಾಯ ಎಂದು ಕರೆಯುತ್ತಿದ್ದರೋ, ಇಂದಿನ ಜೆನ್ಜೀ ಮತ್ತು ಯುವ ಮಿಲೇನಿಯಲ್ಗಳು ಅದನ್ನೇ ಸಂಪತ್ತು ಸೃಷ್ಟಿಯ ಸಾಧನವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಬ್ಯಾಂಕ್ ಖಾತೆಗೆ ಮೊದಲ ತಿಂಗಳ ಸಂಬಳ ಜಮೆಯಾಗುತ್ತಿದ್ದಂತೆಯೇ ಇಂದಿನ ಯುವಕರು ಎಫ್ಡಿ ಫಾಮ್ರ್ ಹುಡುಕುವುದಿಲ್ಲ; ಬದಲಿಗೆ ಮೊಬೈಲ್ನಲ್ಲಿ ಮ್ಯೂಚುವಲ್ ಫಂಡ್ ಆಪ್ ಡೌನ್ಲೋಡ್ ಮಾಡಿ ಎಸ್ಐಪಿ (ಸಿಸ್ಟೆಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಆರಂಭಿಸುತ್ತಿದ್ದಾರೆ.
ಕಾರಣಗಳು ಹಲವು...
ಡಿಮ್ಯಾಟ್ ಖಾತೆಗಳ ಹೆಚ್ಚಳ: 2020ರ ಕರೊನಾ ಪೂರ್ವದಲ್ಲಿ ದೇಶದಲ್ಲಿದ್ದ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಸುಮಾರು 4 ಕೋಟಿ. ಆದರೆ ಇತ್ತೀಚಿನ ವರದಿಗಳ ಪ್ರಕಾರ, ದೇಶದ ಡಿಮ್ಯಾಟ್ ಖಾತೆಗಳ ಸಂಖ್ಯೆ 17 ಕೋಟಿಯ ಗಡಿ ದಾಟಿದೆ.
30ರೊಳಗಿನವರೇ ಹೆಚ್ಚು: ಸೆಬಿ (ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್) ಮತ್ತು ಎನ್ಎಸ್ಇ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಮಾರುಕಟ್ಟೆಗೆ ಹೊಸದಾಗಿ ಕಾಲಿಡುತ್ತಿರುವ ಹೂಡಿಕೆದಾರರಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಎಸ್ಐಪಿ ಎಂಬ ಮಾಸಿಕ ಹಬ್ಬ: ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್ಐ) ಡೇಟಾ ಪ್ರಕಾರ, ದೇಶದಲ್ಲಿ ಮಾಸಿಕ ಎಸ್ಐಪಿ ಹರಿವು ತಿಂಗಳಿಗೆ 23,000ದಿಂದ 25,000 ಕೋಟಿ ರೂ.ಗಳ ಹೊಸ ಎತ್ತರ ತಲುಪಿದೆ. ಇದರಲ್ಲಿ ಗಣನೀಯ ಪಾಲು ಕಾಲೇಜು ಮುಗಿಸಿ ವೃತ್ತಿಜೀವನ ಆರಂಭಿಸಿರುವ 20ರಿಂದ 28 ವರ್ಷದ ಯುವಕರದ್ದಾಗಿದೆ.
2, 3ನೇ ಸ್ತರದ ನಗರಗಳ ಪ್ರಾಬಲ್ಯ: ಮುಂಬೈ, ಬೆಂಗಳೂರು, ದೆಹಲಿಯಂತಹ ದೊಡ್ಡ ನಗರಗಳು ಮಾತ್ರವಲ್ಲದೆ ಹುಬ್ಬಳ್ಳಿ, ಮೈಸೂರು, ಜೈಪುರ, ಇಂದೋರ್, ಕೊಯಮತ್ತೂರಿನಂತಹ 2-3ನೇ ಸ್ತರದ ನಗರಗಳಿಂದ ಶೇ. 45ಕ್ಕೂ ಹೆಚ್ಚು ಹೊಸ ಯುವ ಹೂಡಿಕೆದಾರರು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.
ಸ್ಮಾರ್ಟ್ ಹೂಡಿಕೆಯತ್ತ ಒಲವು
ಹಳೆಯ ತಲೆಮಾರಿಗೆ ಉಳಿತಾಯ (ಸೇವಿಂಗ್ಸ್) ಮುಖ್ಯವಾಗಿತ್ತು. ಇಂದಿನ ತಲೆಮಾರು ಬಂಡವಾಳ ಹೂಡಿಕೆಗೆ (ಇನ್ವೆಸ್ಟ್ಮೆಂಟ್) ಹೆಚ್ಚು ಆದ್ಯತೆ ನೀಡುತ್ತಿದೆ. ಈ ಬದಲಾವಣೆಗೆ ಹಲವು ಕಾರಣಗಳಿವೆ. ಇಂದಿನ ಯುವಕರಿಗೆ ಹಣದುಬ್ಬರದ (ಇನ್ಫ್ಲೇಷನ್) ಲೆಕ್ಕಾಚಾರ ಚೆನ್ನಾಗಿ ಅರ್ಥವಾಗುತ್ತಿದೆ. ಬ್ಯಾಂಕ್ ಎಫ್ಡಿಯಲ್ಲಿ ಸಿಗುವ ಶೇ. 6.5ರ ಬಡ್ಡಿಗೆ ತೆರಿಗೆ ಕಡಿತವಾದ ನಂತರ ಕೈಗೆ ಸಿಗುವುದು ಶೇ. 5 ಮಾತ್ರ. ದೇಶದ ಹಣದುಬ್ಬರವೇ ಶೇ. 5.5 ಇರುವಾಗ ಬ್ಯಾಂಕಿನಲ್ಲಿ ಇಟ್ಟ ಹಣ ವಾಸ್ತವವಾಗಿ ಬೆಳೆಯುತ್ತಿಲ್ಲ, ಕರಗುತ್ತಿದೆ ಎಂಬ ಕಟು ಸತ್ಯವನ್ನು ಜೆನ್ಜೀ ಅರಿತಿದೆ.
ಬೆರಳತುದಿಯಲ್ಲೇ ಎಲ್ಲವೂ ಲಭ್ಯ
ಯುವಜನತೆ ಮಾರುಕಟ್ಟೆಗೆ ಮುಗಿಬೀಳಲು ತಂತ್ರಜ್ಞಾನವೂ ಒಂದು ಪ್ರಮುಖ ಕಾರಣ. ಹತ್ತು ವರ್ಷಗಳ ಹಿಂದೆ ಷೇರು ಖರೀದಿಸಬೇಕೆಂದರೆ ಬ್ರೋಕರ್ ಬಳಿಗೆ ಹೋಗಬೇಕಿತ್ತು, ಹತ್ತಾರು ದಾಖಲೆಗಳಿಗೆ ಸಹಿ ಹಾಕಬೇಕಿತ್ತು. ಆದರೆ ಜೆರೋಧಾ, ಗ್ರೋ, ಏಂಜೆಲ್ ಒನ್ನಂತಹ ‘ಡಿಸ್ಕೌಂಟ್ ಬ್ರೋಕಿಂಗ್’ ಆಪ್ಗಳು ಇಡೀ ಆಟದ ನಿಯಮವನ್ನೇ ಬದಲಿಸಿವೆ.
ಆಧಾರ್, ಯುಪಿಐ ಕಮಾಲ್: ಆಧಾರ್ ಆಧಾರಿತ ಇ-ಕೆವೈಸಿ ಬಂದ ಮೇಲೆ ಕೇವಲ 5 ನಿಮಿಷಗಳಲ್ಲಿ ಡಿಮ್ಯಾಟ್ ಖಾತೆ ತೆರೆಯಬಹುದು. ಯುಪಿಐ ಮೂಲಕ ಆನ್ಲೈನ್ ಶಾಪಿಂಗ್ ಮಾಡಿದಷ್ಟೇ ಸುಲಭವಾಗಿ ಕ್ಷಣಾರ್ಧದಲ್ಲಿ ಹೂಡಿಕೆ ಮಾಡಬಹುದು.
100ರ ಎಸ್ಐಪಿ: ಪಾಕೆಟ್ ಮನಿಯಲ್ಲೇ ತಿಂಗಳಿಗೆ ನೂರು ರೂ.ನಷ್ಟು ಕಡಿಮೆ ಮೊತ್ತವನ್ನು ಹೂಡಿಕೆ ಮಾಡುವ ಸೌಲಭ್ಯವು ವಿದ್ಯಾರ್ಥಿಗಳನ್ನೂ ಹೂಡಿಕೆದಾರರನ್ನಾಗಿ ಮಾಡಿದೆ.
ಬಳಕೆದಾರಸ್ನೇಹಿ ಇಂಟರ್ಫೇಸ್: ಸಂಕೀರ್ಣ ಗ್ರಾಫ್ಗಳು, ಕ್ಲಿಷ್ಟಕರ ಬ್ಯಾಲೆನ್ಸ್ ಶೀಟ್ಗಳನ್ನು ಸರಳೀಕರಿಸಿ, ಮೊಬೈಲ್ ಗೇಮ್ ಆಡಿದಷ್ಟೇ ಸುಲಭವಾಗಿ ಪೋರ್ಟ್ಫೋಲಿಯೋ ನಿರ್ವಹಿಸುವ ತಂತ್ರಜ್ಞಾನ ಯುವಜನರನ್ನು ಆಕರ್ಷಿಸಿದೆ.
ಇನ್ಫ್ಲುಯೆನ್ಸರ್, ಸೋಶಿಯಲ್ ಮೀಡಿಯಾ ಪ್ರಭಾವ
ಹಿಂದೆ ಹಣಕಾಸು ಜ್ಞಾನ ಸಿಎ ಓದಿದವರಿಗೆ ಅಥವಾ ಬ್ಯಾಂಕರ್ಗಳಿಗೆ ಸೀಮಿತವಾಗಿತ್ತು. ಈಗ ಯುಟ್ಯೂಬ್, ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಪಾಡ್ಕಾಸ್ಟ್ಗಳು ಆರ್ಥಿಕ ಸಾಕ್ಷರತೆಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಂದಿವೆ.
ಸರಳ ಹಣಕಾಸು ಪಾಠಗಳು: ಫಿನ್ಫ್ಲುಯೆನ್ಸರ್ಗಳು ಚಕ್ರಬಡ್ಡಿಯ ಶಕ್ತಿ (ಪವರ್ ಆಫ್ ಕಂಪೌಂಡಿಂಗ್), ಇಂಡೆಕ್ಸ್ ಫಂಡ್ಗಳ ಮಹತ್ವ, ಪ್ರೖೆಸ್ ಟು ಅರ್ನಿಂಗ್ಸ್ (ಪಿ/ಇ) ರೇಷಿಯೋ ಮುಂತಾದ ವಿಷಯಗಳನ್ನು 60 ಸೆಕೆಂಡಿನ ರೀಲ್ಸ್ಗಳಲ್ಲಿ ‘ಯುವಕರ ಭಾಷೆ’ಯಲ್ಲೇ ವಿವರಿಸುತ್ತಿದ್ದಾರೆ.
ಫೈರ್ ಪರಿಕಲ್ಪನೆ: ಫೈನಾನ್ಷಿಯಲ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ- (ಎಫ್ಐಆರ್ಇ- ಫೈರ್- ಆರ್ಥಿಕ ಸ್ವಾವಲಂಬನೆ, ಶೀಘ್ರ ನಿವೃತ್ತಿ) ಎಂಬುದು ಇಂದಿನ ಯುವಕರ ಧ್ಯೇಯವಾಗಿದೆ. 60 ವರ್ಷದವರೆಗೆ ಆಫೀಸಿನಲ್ಲಿ ಬೆವರು ಸುರಿಸುವ ಬದಲು, 35 ಅಥವಾ 40 ವರ್ಷಕ್ಕೆ ನಿವೃತ್ತಿ ಪಡೆದು ಜಗತ್ತನ್ನು ಸುತ್ತಬೇಕು ಎಂಬ ಕನಸು, 22ನೇ ವಯಸ್ಸಿನಿಂದಲೇ ಶಿಸ್ತಿನಿಂದ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದೆ.
ನಾಣ್ಯದ ಇನ್ನೊಂದು ಮುಖ
ಈ ಉತ್ಸಾಹದ ನಡುವೆಯೂ ಯುವಜನತೆ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಇತ್ತೀಚಿನ ಅಧ್ಯಯನಗಳು ಆತಂಕಕಾರಿ ಸತ್ಯಗಳನ್ನೂ ಹೊರಹಾಕಿವೆ.
ಎಫ್ ಆಂಡ್ ಒ ಎಂಬ ಸುಳಿ: ಸೆಬಿ ನಡೆಸಿದ ಅಧ್ಯಯನದ ಪ್ರಕಾರ, ಈಕ್ವಿಟಿ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವಿಭಾಗದಲ್ಲಿ ಟ್ರೇಡಿಂಗ್ ಮಾಡುವ ಶೇ. 90ಕ್ಕೂ ಹೆಚ್ಚು ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಅವರಲ್ಲಿ 30 ವರ್ಷದೊಳಗಿನ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾತ್ರೋರಾತ್ರಿ ಶ್ರೀಮಂತರಾಗುವ ಆಸೆಗೆ ಬಿದ್ದು, ಸಾಲ ಮಾಡಿ ಆಪ್ಷನ್ ಟ್ರೇಡಿಂಗ್ನಲ್ಲಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಫೋಮೋ (ಫಿಯರ್ ಆಫ್ ಮಿಸ್ಸಿಂಗ್ ಔಟ್): ಸ್ನೇಹಿತನೊಬ್ಬ ನಿರ್ದಿಷ್ಟ ಪೆನ್ನಿ ಸ್ಟಾಕ್ ಅಥವಾ ಕ್ರಿಪ್ಟೋಕರೆನ್ಸಿಯಲ್ಲಿ ದುಪ್ಪಟ್ಟು ಲಾಭ ಗಳಿಸಿದನೆಂದು ಕೇಳಿ, ಮೂಲಭೂತ ಅಂಶಗಳನ್ನು ಪರಿಶೀಲಿಸದೆ ಕಣ್ಮುಚ್ಚಿ ಹಣ ಸುರಿಯುವ ಪ್ರವೃತ್ತಿ ಅಪಾಯಕಾರಿಯಾಗಿದೆ.
ಅನಧಿಕೃತ ಸಲಹೆಗಾರರ ವಂಚನೆ: ‘ದಿನಕ್ಕೆ 10,000 ಗಳಿಸಿ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆಮಿಷವೊಡ್ಡುವ, ನೋಂದಣಿಯಾಗದ ನಕಲಿ ಟ್ರೇಡಿಂಗ್ ಟೆಲಿಗ್ರಾಂ ಚಾನೆಲ್ಗಳಿಗೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಕಡಿಮೆಯೇನಿಲ್ಲ.
ಇನ್ನೊಂದು ಮುಖ ಅರಿಯದ ತಲೆಮಾರು: 2020ರ ಕರೊನಾ ಕುಸಿತದ ನಂತರ ಮಾರುಕಟ್ಟೆ ಸತತವಾಗಿ ಏರುಗತಿಯಲ್ಲೇ ಸಾಗಿದೆ. ಈ ಅವಧಿಯಲ್ಲಿ ಪ್ರವೇಶಿಸಿದ ಬಹುತೇಕ ಯುವಕರು ‘ಬುಲ್ ಮಾರ್ಕೆಟ್’ ಮಾತ್ರ ನೋಡಿದ್ದಾರೆ. 2008ರಂತಹ ಭಾರಿ ಕುಸಿತ ಅಥವಾ ದೀರ್ಘಕಾಲದ ಬೇರ್ ಮಾರ್ಕೆಟ್ಅನ್ನು ಅವರಿನ್ನೂ ಅನುಭವಿಸಿಲ್ಲ. ಮಾರುಕಟ್ಟೆ ನಿರಂತರವಾಗಿ ಕುಸಿದಾಗ ತಾಳ್ಮೆ ಕಾಯ್ದುಕೊಳ್ಳುವುದು ಈ ಪೀಳಿಗೆಗೆ ನಿಜವಾದ ಅಗ್ನಿಪರೀಕ್ಷೆ.
ಯಶಸ್ಸಿನ ಕೆಲವು ಸೂತ್ರಗಳು
ಯುವಜನರ ಹೂಡಿಕೆ ಉತ್ಸಾಹ ತಾತ್ಕಾಲಿಕ ಹುಮ್ಮಸ್ಸಾಗದೆ, ಶಾಶ್ವತ ಸಂಪತ್ತಾಗಿ ಬದಲಾಗಬೇಕಾದರೆ ಕೆಲವು ಸೂತ್ರಗಳನ್ನು ಅನುಸರಿಸುವುದು ಅತ್ಯಗತ್ಯ.
ತುರ್ತು ನಿಧಿ ಮೊದಲು: ಷೇರುಪೇಟೆಗೆ ಕಾಲಿಡುವ ಮುನ್ನ ಕನಿಷ್ಠ 6 ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವನ್ನು ಉಳಿತಾಯ ಖಾತೆ ಅಥವಾ ಲಿಕ್ವಿಡ್ ಫಂಡ್ನಲ್ಲಿ ಇರಿಸಿಕೊಳ್ಳಬೇಕು.
ಆರೋಗ್ಯ, ಜೀವವಿಮೆ ಕಡ್ಡಾಯ: ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಟಮ್ರ್ ಇನ್ಶೂರೆನ್ಸ್ ಮತ್ತು ಆರೋಗ್ಯ ವಿಮೆ ಅತ್ಯಗತ್ಯ.
ಸಟ್ಟಾ ವ್ಯಾಪಾರ ಬೇಡ: ಇಂಟ್ರಾಡೇ ಅಥವಾ ಆಪ್ಷನ್ ಟ್ರೇಡಿಂಗ್ನಂತಹ ಊಹಾತ್ಮಕ ವಹಿವಾಟುಗಳಿಂದ ದೂರವಿದ್ದು, ಬಲಿಷ್ಠ ಕಂಪನಿಗಳ ಷೇರುಗಳಲ್ಲಿ ಅಥವಾ ಲಾರ್ಜ್ ಕ್ಯಾಪ್/ ಫ್ಲೆಕ್ಸಿಕ್ಯಾಪ್ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬೇಕು.
ತಾಳ್ಮೆ, ಶಿಸ್ತು: ಮಾರುಕಟ್ಟೆಯ ಏರಿಳಿತಗಳಿಗೆ ಹೆದರದೆ, ಪ್ರತಿ ತಿಂಗಳು ಸತತವಾಗಿ ಎಸ್ಐಪಿ ಮುಂದುವರಿಸುವ ಶಿಸ್ತು ಬೆಳೆಸಿಕೊಳ್ಳಬೇಕು. ಚಕ್ರಬಡ್ಡಿಯ ನಿಜವಾದ ಮ್ಯಾಜಿಕ್ ಕಾಣಲು ಕನಿಷ್ಠ 7ರಿಂದ 10 ವರ್ಷ ಬೇಕು.