ನಷ್ಟದ ಭಯ, ಮಾರುಕಟ್ಟೆ ಗೊಂದಲಗಳಿಗೆ ಲೈಫ್ ಸೈಕಲ್ ಹೂಡಿಕೆಯೇ ಸರಿಯಾದ ಪರಿಹಾರ! Life Cycle Investing

ಸುಹಾಸ್ ಪ್ರಭಾಕರ್ (ವೆಲ್ತ್​ ವೈದ್ಯ ಫೈನಾನ್ಶಿಯಲ್​ ಸರ್ವೀಸಸ್​)
ಸುಹಾಸ್ ಪ್ರಭಾಕರ್ (ವೆಲ್ತ್​ ವೈದ್ಯ ಫೈನಾನ್ಶಿಯಲ್​ ಸರ್ವೀಸಸ್​)
Published on: 
ನಮ್ಮ ಆರ್ಥಿಕ ಅಥವಾ ಹಣಕಾಸಿನ ಗುರಿಗಳು ಎಂದಿಗೂ ನಾವು ನಿರೀಕ್ಷಿಸಿದ ಸಮಯಕ್ಕೆ ತಕ್ಕಂತೆ ಬಂದ ನಮ್ ಕೈ ಸೇರುವುದಿಲ್ಲ. ಮಕ್ಕಳ ಶಿಕ್ಷಣ ಶುಲ್ಕ, ಮದುವೆ, ಸ್ವಂತ ಮನೆ ಅಥವಾ ನೆಮ್ಮದಿಯ ನಿವೃತ್ತಿಯಂತಹ ಪ್ರತಿಯೊಂದು ಮೈಲಿಗಲ್ಲುಗಳೂ ತಮ್ಮದೇ ಆದ ವಿಭಿನ್ನ ಕಾಲಮಿತಿಯನ್ನು ಹೊಂದಿರುತ್ತದೆ. ಹೀಗಾಗಿ ಅದಕ್ಕೆ ತಕ್ಕಂತೆ ಎಚ್ಚರಿಕೆ ಹಾಗೂ ಅಪಾಯದ ಸರಿಯಾದ ಸಮತೋಲನ ಬಹಳ ಮುಖ್ಯವಾಗಿದೆ. ದೀರ್ಘಕಾಲೀನ ಸಂಪತ್ತು ಸೃಷ್ಟಿಗೆ ಇಕ್ವಿಟಿಗಳು (ಷೇರುಪೇಟೆ) ಅತ್ಯಂತ ವಿಶ್ವಾಸಾರ್ಹ ಸಾಧನಗಳೆಂದು ಸಾಬೀತಾಗಿದ್ದರು ಕೂಡ ಅವುಗಳಲ್ಲಿನ ಅನಿರೀಕ್ಷಿತ ಏರಿಳಿತಗಳು ಗುರಿಯ ಹತ್ತಿರ ಬಂದಾಗ ಹೆಚ್ಚು ಆತಂಕವನ್ನು ಉಂಟುಮಾಡುತ್ತವೆ. ಹಾಗಾಗಿ, ಬದುಕಿನ ಪ್ರಮುಖ ಹಂತಗಳಲ್ಲಿ ಹಣಕಾಸಿನ ಗುರಿಗಳನ್ನು ಯೋಜಿಸುವುದು ಮತ್ತು ಮಾರುಕಟ್ಟೆಯ ಏಳುಬೀಳುಗಳನ್ನು ಅರಿತುಕೊಂಡು ಅದನ್ನು ಸಮರ್ಥವಾಗಿ ನಿಭಾಯಿಸುವುದು ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಅತ್ಯಂತ ನಿರ್ಣಾಯಕವಾಗಿದೆ.
ಅಂದಹಾಗೆ, ಮಾರುಕಟ್ಟೆ ಏರಿಳಿತಗಳು ಹೂಡಿಕೆದಾರರಿಗೆ ದೊಡ್ಡ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹೇಗೆಂದರೆ, ಸಮಯಕ್ಕಿಂತ ಮುಂಚೆಯೇ ಇಕ್ವಿಟಿಯಿಂದ ಹಣವನ್ನು ಹಿಂಪಡೆದರೆ ಉತ್ತಮ ಬೆಳವಣಿಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ, ಆದರೆ ಕೊನೆಯ ಕ್ಷಣದವರೆಗೆ ಇಕ್ವಿಟಿಯನ್ನು ಹಾಗೇ ಬಿಟ್ಟರೆ, ಹಣದ ಅಗತ್ಯವಿರುವ ಸಮಯದಲ್ಲೇ ಮಾರುಕಟ್ಟೆ ಕುಸಿದು ಇಡೀ ಗಳಿಕೆ ಒಂದೇ ಕ್ಷಣದಲ್ಲಿ ಕರಗಿಹೋಗುವ ಅಪಾಯವೂ ಇರುತ್ತದೆ. ಹೀಗಾಗಿ, ಯಾವ ಸಂದರ್ಭದಲ್ಲಿ ಷೇರುಪೇಟೆಯ ಹೂಡಿಕೆಯನ್ನು ಕಡಿಮೆ ಮಾಡಿ, ಅದನ್ನು ಸಾಲದ ಸಾಧನಗಳಿಗೆ ಬದಲಾಯಿಸಬೇಕು ಎಂಬುದನ್ನು ನಿರಂತರವಾಗಿ ಗಮನಿಸುತ್ತಿರುವುದು ಅಗತ್ಯವಾಗಿದೆ. ಆದರೆ, ಈ ಶಿಸ್ತನ್ನು ಕಾಪಾಡಿಕೊಳ್ಳುವುದು ಹೆಚ್ಚಿನ ಹೂಡಿಕೆದಾರರಿಗೆ ಕಷ್ಟವಾಗುತ್ತದೆ.
ಹಾಗಾಗಿ, ಬಿಹೇವಿಯರಲ್ ಫೈನಾನ್ಸ್‌ (Behavioural Finance) ಎಂಬ ವಿಜ್ಞಾನವು ಅನೇಕ ಜನರು ಹೂಡಿಕೆ ವಿಷಯದಲ್ಲಿ ಏಕೆ ಸೋಲುತ್ತಾರೆ ಎಂಬುದಕ್ಕೆ ಸೂಕ್ತ ಕಾರಣವನ್ನು ನೀಡುತ್ತದೆ. ನಷ್ಟದ ಭಯವು ಹೂಡಿಕೆದಾರರನ್ನು ಮಾರುಕಟ್ಟೆಯಲ್ಲಿ ಸ್ವಲ್ಪ ಸಮಸ್ಯೆ ಎದುರಾದ ತಕ್ಷಣವೇ ತನ್ನ ಹೂಡಿಕೆಯನ್ನು ಹಿಂಪಡೆಯುವಂತೆ ಮಾಡುತ್ತದೆ. ಅದೇ ರೀತಿ ಗುಂಪಿನ ಮನಸ್ಥಿತಿ ಕೂಡ ಇತರರನ್ನು ನೋಡಿ ಮಾರುಕಟ್ಟೆಯಿಂದ ಹಿಂದೆ ಸರಿಯುವಂತೆ ಪ್ರೇರೇಪಿಸುತ್ತದೆ. ಇತ್ತೀಚಿನ ಟ್ರೆಂಡ್ ಮಾರುಕಟ್ಟೆ ಕುಸಿತವು ಮುಂದುವರಿಯುತ್ತದೆ ಎಂದು ನಂಬುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ, ಮಾರುಕಟ್ಟೆ ತಳಮಟ್ಟದಲ್ಲಿದ್ದಾಗ ಮಾರಾಟ ಮಾಡುವುದು ಮತ್ತು ಬೆಲೆಗಳು ಚೇತರಿಸಿಕೊಂಡ ನಂತ ಹೂಡಿಕೆಗೆ ಮರುಪ್ರವೇಶಿಸುವುದು ಪದೇ ಪದೇ ಪುನರಾವರ್ತನೆಯಾಗುತ್ತದೆ.
ಲೈಫ್​ ಸೈಕಲ್​ ಇನ್ವೆಸ್ಟಿಂಗ್ ಎಂಬ ವಿಧಾನ ಈ ಮೇಲಿನ ಸಮಸ್ಯೆಗಳಿಗೆ ಒಂದು ಪರಿಹಾರವಾಗಿದೆ. ಈ ವಿಧಾನದ ಒಳಗಿರುವ ಗ್ಲೈಡ್ ಪಾತ್ ಸ್ಟ್ರಾಟಜಿ ಈ ಸಮಸ್ಯೆಗೆ ನೇರವಾದ ಪರಿಹಾರವನ್ನು ಒದಗಿಸುತ್ತದೆ. ಹೂಡಿಕೆದಾರರ ಸ್ವಂತ ವಿವೇಚನೆಗೆ ಆಸ್ತಿ ಹಂಚಿಕೆಯನ್ನು ಬಿಡುವ ಬದಲು, ನಿರ್ದಿಷ್ಟ ಮುಕ್ತಾಯ ದಿನಾಂಕವನ್ನು ಹೊಂದಿರುವ ಫಂಡ್ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಷೇರುಪೇಟೆ ಹಂಚಿಕೆಯನ್ನು ಹೊಂದಿರುತ್ತದೆ (ಆಗ ಏರಿಳಿತಗಳನ್ನು ಎದುರಿಸಲು ಸಮಯವಿರುತ್ತದೆ). ಗುರಿ ದಿನಾಂಕ ಸಮೀಪಿಸುತ್ತಿದ್ದಂತೆ, ಇದು ಕ್ರಮೇಣ ಸಾಲದ (Debt) ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಯ ಸಮಯವನ್ನು ಲೆಕ್ಕಹಾಕುವ ಅಗತ್ಯವಿಲ್ಲದೆ ಅಥವಾ ಪ್ರತ್ಯೇಕ ಉತ್ಪನ್ನಗಳ ನಡುವೆ ಹಣವನ್ನು ವರ್ಗಾಯಿಸುವ ವೆಚ್ಚವಿಲ್ಲದೆ ಈ ಬದಲಾವಣೆಯು ಫಂಡ್ ಒಳಗೆಯೇ ಸ್ವಯಂಚಾಲಿತವಾಗಿ ಸಂಭವಿಸುತ್ತದೆ.
ಯಾವುದೇ ಒಂದು ಆಸ್ತಿ ವರ್ಗವು ಪ್ರತಿ ಆರ್ಥಿಕ ಚಕ್ರದಲ್ಲೂ ಅತ್ಯುತ್ತಮ ಲಾಭವನ್ನು ನೀಡುವುದಿಲ್ಲ, ಇಕ್ವಿಟಿ, ಡೆಬ್ಟ್​, ಚಿನ್ನ ಮತ್ತು ಸ್ಥಿರ ಆಸ್ತಿಗಳು ಪ್ರತಿಯೊಂದೂ ಮುಂಚೂಣಿಗೆ ಬರುವ ಮತ್ತು ಹಿಂದುಳಿಯುವ ಸರದಿಯನ್ನು ಹೊಂದಿರುತ್ತವೆ. ವೈವಿಧ್ಯಮಯ ಹಾಗೂ ಕಾಲಮಿತಿಗೆ ಒಳಪಟ್ಟ ಲೈಫ್​ ಸೈಕಲ್​ ಇನ್ವೆಸ್ಟಿಂಗ್ ವಿಧಾನವು ಸಂಪೂರ್ಣವಾಗಿ ಅಪಾಯವನ್ನು ಇಲ್ಲವಾಗಿಸುವುದಿಲ್ಲವಾದರೂ, ಇದು ಊಹಾಪೋಹಗಳಿಗೆ ಬದಲು ಒಂದು ಸ್ಪಷ್ಟವಾದ ಯೋಜನೆಯನ್ನು ಒದಗಿಸುತ್ತದೆ. ಗಾಬರಿಗೊಂಡು ಕೈಬಿಡುವ ಯೋಚನೆಗಿಂತ, ಸ್ಥಿರವಾಗಿ ಅನುಸರಿಸುವ ಸರಿಯಾದ ಯೋಜನೆಯೇ ದೀರ್ಘಕಾಲದಲ್ಲಿ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.
ಈ ಹಿನ್ನೆಲೆಯಲ್ಲಿ, ಹೂಡಿಕೆದಾರರು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಸೈಕಲ್ ಫಂಡ್ಸ್ 2031, 2036 ಮತ್ತು 2041 (ICICI Prudential Life Cycle Funds 2031, 2036 and 2041) ಆಯ್ಕೆ ಮಾಡಿಕೊಳ್ಳಬಹುದು. ಇದು ಗುರಿ ಆಧಾರಿತ ಹೂಡಿಕೆಗಾಗಿ ವಿನ್ಯಾಸಗೊಳಿಸಲಾದ ಓಪನ್-ಎಂಡೆಡ್ ಫಂಡ್‌ಗಳಾಗಿವೆ. ಪ್ರತಿಯೊಂದು ಫಂಡ್‌ ಕೂಡ ನಿಗದಿತ ಮುಕ್ತಾಯ ವರ್ಷವನ್ನು ಹೊಂದಿದ್ದು, ಗುರಿ ಸಮೀಪಿಸುತ್ತಿದ್ದಂತೆ ಇಕ್ವಿಟಿ ಮತ್ತು ಡೆಬ್ಟ್​ (ಸಾಲ) ಹೂಡಿಕೆಯ ಪ್ರಮಾಣವನ್ನು ಬದಲಾಯಿಸುವ ಗ್ಲೈಡ್ ಪಾತ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಫಂಡ್ ಇಕ್ವಿಟಿ, ಡೆಬ್ಟ್​, ಚಿನ್ನ, ಬೆಳ್ಳಿ ಮತ್ತು ಇನ್ವಿಟ್ಸ್ (InvITs) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯಮಯ ಹೂಡಿಕೆಯ ಅವಕಾಶವನ್ನು ಒದಗಿಸುತ್ತದೆ. ಈ ಹೊಸ ನಿಧಿ ಕೊಡುಗೆಯು (NFO) 2026ರ ಆಗಸ್ಟ್ 26ರಿಂದ ಸೆಪ್ಟೆಂಬರ್ 09ರವರೆಗೆ ತೆರೆದಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net