ಟ್ರಂಪ್​ ಮಹತ್ವದ ಘೋಷಣೆ: ಹೊಸ ಹಣಕಾಸು ವರ್ಷದ ಆರಂಭದಲ್ಲೇ ಭರ್ಜರಿ ಜಿಗಿತ ಕಂಡ ಷೇರು ಮಾರುಕಟ್ಟೆ! Stock Market

ಟ್ರಂಪ್​ ಮಹತ್ವದ ಘೋಷಣೆ: ಹೊಸ ಹಣಕಾಸು ವರ್ಷದ ಆರಂಭದಲ್ಲೇ ಭರ್ಜರಿ ಜಿಗಿತ ಕಂಡ ಷೇರು ಮಾರುಕಟ್ಟೆ! Stock Market
ಟ್ರಂಪ್​ ಮಹತ್ವದ ಘೋಷಣೆ: ಹೊಸ ಹಣಕಾಸು ವರ್ಷದ ಆರಂಭದಲ್ಲೇ ಭರ್ಜರಿ ಜಿಗಿತ ಕಂಡ ಷೇರು ಮಾರುಕಟ್ಟೆ! Stock Market
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 1ರ ಹೊಸ ಹಣಕಾಸು ವರ್ಷದ ಆರಂಭದಲ್ಲೇ ಭರ್ಜರಿಯಾಗಿ ಪುಟಿದೆದ್ದ ಷೇರು ಮಾರುಕಟ್ಟೆ
  • ಬಿಎಸ್​ಇ ಸೆನ್ಸೆಕ್ಸ್​ ಸುಮಾರು 1,901.59 ಅಂಕಗಳು ಅಥವಾ ಶೇ.2.64 ರಷ್ಟು ಜಿಗಿತ
  • ಇಂದು ಆರಂಭಿಕ ವಹಿವಾಟುವಿನಲ್ಲಿ ಏರಿಕೆ ಕಂಡ ಸುಮಾರು 2,994 ಷೇರುಗಳು
  • ಯುದ್ಧದ ಅಂತ್ಯದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾತನಾಡುತ್ತಿದ್ದಂತೆ ಮಾರುಕಟ್ಟೆ ಚೇತರಿಕೆ
Share Market : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಗ್ರಹಣ ಹಿಡಿದಂತೆ ಬಳಲಿ ಬೆಂಡಾಗಿದ್ದ ಜಾಗತಿಕ ಷೇರು ಮಾರುಕಟ್ಟೆ, ಏಪ್ರಿಲ್​ 1ರ ಹೊಸ ಹಣಕಾಸು ವರ್ಷದ ಆರಂಭದಲ್ಲೇ ಭರ್ಜರಿಯಾಗಿ ಪುಟಿದೆದ್ದಿದೆ. ಶೀಘ್ರದಲ್ಲೇ ನಾವು ಇರಾನ್​ ತೊರೆಯುತ್ತೇವೆ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಯುದ್ಧಕ್ಕೆ ಅಂತ್ಯವಾಡುವ ಮಾತುಗಳನ್ನಾಡುತ್ತಿದ್ದಂತೆ ಮಾರುಕಟ್ಟೆ ಚೇತರಿಸಿಕೊಂಡಿದೆ.
ಬುಧವಾರ (ಏಪ್ರಿಲ್​ 01) 9.30ರ ಸುಮಾರಿಗೆ ಭಾರತೀಯ ಮಾರುಕಟ್ಟೆ ಲಾಭದಲ್ಲಿ ವಹಿವಾಟು ಆರಂಭಿಸಿದೆ. ಬಿಎಸ್​ಇ ಸೆನ್ಸೆಕ್ಸ್​ ಸುಮಾರು 1,901.59 ಅಂಕಗಳು ಅಥವಾ ಶೇ.2.64 ರಷ್ಟು ಜಿಗಿತದೊಂದಿಗೆ 73,849.14ಕ್ಕೆ ತಲುಪಿದರೆ, ನಿಫ್ಟಿ 50 ಕೂಡ 587.45 ಪಾಯಿಂಟ್‌ಗಳಷ್ಟು ಅಥವಾ ಶೇ.2.63 ರಷ್ಟು ಜಿಗಿದು 22,918.85ರಲ್ಲಿ/ ವಹಿವಾಟು ಆರಂಭಿಸಿದೆ.
ಇಂದು ಆರಂಭಿಕ ವಹಿವಾಟುವಿನಲ್ಲಿ ಸುಮಾರು 2,994 ಷೇರುಗಳು ಏರಿಕೆಯನ್ನು ಕಂಡರೆ, 270 ಷೇರುಗಳು ಇಳಿಕೆಯನ್ನು ಅನುಭವಿಸಿವೆ ಮತ್ತು 122 ಷೇರುಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ.
ಇಂದು ಪ್ರಮುಖವಾಗಿ ಹಿಂದಾಲ್ಕೊ, ಟೆಕ್ ಮಹೀಂದ್ರಾ, ಕೋಲ್ ಇಂಡಿಯಾ, ಮಾರುತಿ ಸುಜುಕಿ ಮತ್ತು ಟಾಟಾ ಸ್ಟೀಲ್ ಕಂಪನಿಗಳು ಲಾಭ ಗಳಿಸಿದ ಕಂಪನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಮತ್ತೊಂದೆಡೆ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಮೇಲೆ ಒತ್ತಡ ಕಂಡುಬಂದಿದ್ದು, ಬಜಾಜ್ ಫೈನಾನ್ಸ್, ಶ್ರೀರಾಮ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಗೋ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಆರಂಭಿಕ ಹಂತದಲ್ಲಿ ನಷ್ಟ ಅನುಭವಿಸಿವೆ.

ಮಾರುಕಟ್ಟೆ ಚೇತರಿಕೆಗೆ ಕಾರಣವೇನು?

ಪ್ರಸ್ತುತ ಇರಾನ್ ಮೇಲೆ ನಡೆಯುತ್ತಿರುವ ಮಿಲಿಟರಿ ದಾಳಿಯನ್ನು ಮುಂದಿನ ಎರಡು ಮೂರು ವಾರಗಳಲ್ಲಿ ವಾಷಿಂಗ್ಟನ್ ಕೊನೆಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ಇರಾನ್​ ಅನ್ನು ತೊರೆಯುತ್ತೇವೆ ಮತ್ತು ಸಂಘರ್ಷ ಕಡಿಮೆಯಾಗಲು ಟೆಹ್ರಾನ್ ಯಾವುದೇ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಟ್ರಂಪ್​​ ತಿಳಿಸಿದ್ದಾರೆ. ಯಾವಾಗ ಟ್ರಂಪ್​, ಯುದ್ಧ ಕೊನೆಗಳಿಸುವ ಮಾತುಗಳನ್ನು ಆಡಿದರೋ ಏರುಗತಿಯಲ್ಲಿದ್ದ ಕಚ್ಚಾ ತೈಲಗಳ ಬೆಲೆ ಪ್ರತಿ ಬ್ಯಾರೆಲ್‌ಗೆ 105 ಡಾಲರ್​ಗೆ ಇಳಿದವು. ಅಲ್ಲದೆ, ಇರಾನ್​ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಆಶಾವಾದದಿಂದ ಏಷ್ಯಾದ ಮಾರುಕಟ್ಟೆಗಳು ಕೂಡ 3.7% ರಷ್ಟು ಏರಿಕೆ ಕಂಡವು.

ಯುದ್ಧದ ಬಗ್ಗೆ ಇರಾನ್​ ಹೇಳಿದ್ದೇನು?

ಇಂದು (ಏಪ್ರಿಲ್ 1) ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಐರೋಪ್ಯ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದೂರವಾಣಿ ಕರೆ ನಡೆಸಿದ್ದು, ಯುದ್ಧವನ್ನು ನಿಲ್ಲಿಸಲು ಇರಾನ್ "ಅಗತ್ಯವಿರುವ ಇಚ್ಛಾಶಕ್ತಿಯನ್ನು" ಹೊಂದಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಯುದ್ಧದ ಅಂತ್ಯಕ್ಕೆ ಇರಾನ್ ಒಂದು ಪ್ರಮುಖ ಷರತ್ತನ್ನು ವಿಧಿಸಿದೆ. ಅದೇನೆಂದರೆ, ಇರಾನ್ ಮೇಲೆ ಮತ್ತೆ ಇಂತಹ ದಾಳಿಗಳು ನಡೆಯದಂತೆ "ಖಚಿತವಾದ ಗ್ಯಾರಂಟಿ" ಅಥವಾ ಭರವಸೆಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇರಾನ್ ಎಂದಿಗೂ ಉದ್ವಿಗ್ನತೆ ಅಥವಾ ಯುದ್ಧವನ್ನು ಬಯಸಿಲ್ಲ ಆದರೆ, ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿದೆ ಎಂದು ಪೆಜೆಶ್ಕಿಯಾನ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಅಧ್ಯಕ್ಷರ ಈ ಹೇಳಿಕೆಯು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದ್ದು, ಷೇರು ಮಾರುಕಟ್ಟೆ ಚೇತರಿಸಿಕೊಳ್ಳಲು ಮತ್ತು ತೈಲ ಬೆಲೆಗಳು ಇಳಿಕೆಯಾಗಲು ಕಾರಣವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net