ಇರಾನ್​ ಯುದ್ಧದ ಮಧ್ಯೆ ಏರಿದ ಕಚ್ಚಾ ತೈಲ ಬೆಲೆ: ಷೇರುಮಾರುಕಟ್ಟೆಯಲ್ಲಿ ತಲ್ಲಣ, ಕರಗಿತು ಹೂಡಿಕೆದಾರರ 4 ಲಕ್ಷ ಕೋಟಿ! Share Market

ಇರಾನ್​ ಯುದ್ಧದ ಮಧ್ಯೆ ಏರಿದ ಕಚ್ಚಾ ತೈಲ ಬೆಲೆ: ಷೇರುಮಾರುಕಟ್ಟೆಯಲ್ಲಿ ತಲ್ಲಣ, ಕರಗಿತು ಹೂಡಿಕೆದಾರರ 4 ಲಕ್ಷ ಕೋಟಿ! Share Market
ಇರಾನ್​ ಯುದ್ಧದ ಮಧ್ಯೆ ಏರಿದ ಕಚ್ಚಾ ತೈಲ ಬೆಲೆ: ಷೇರುಮಾರುಕಟ್ಟೆಯಲ್ಲಿ ತಲ್ಲಣ, ಕರಗಿತು ಹೂಡಿಕೆದಾರರ 4 ಲಕ್ಷ ಕೋಟಿ! Share Market
Published on

ಪ್ರಮುಖ ಮುಖ್ಯಾಂಶಗಳು

  • ಮದ್ಯಪ್ರಾಚ್ಯ ಯುದ್ಧದ ಅನಿಶ್ಚಿತತೆ ಮುಂದುವರಿದಿದ್ದು ಕಂಗಾಲಾಗಿರುವ ಹೂಡಿಕೆದಾರರು
  • ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂಪಡೆದು ಮಾರಾಟ ಮಾಡುತ್ತಿರುವುದರಿಂದ ಮಾರುಕಟ್ಟೆ ಕುಸಿತ
  • ಸೋಮವಾರ ತೀವ್ರ ಕುಸಿತದೊಂದಿಗೆ ವಹಿವಾಟು ಆರಂಭಿಸಿ ಸೆನ್ಸೆಕ್ಸ್​ ಮತ್ತು ನಿಫ್ಟಿ
  • ಆರಂಭಿಕ ವಹಿವಾಟಿನಲ್ಲಿ ಸುಮಾರು 4.34 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕಳೆದುಕೊಂಡ ಹೂಡಿಕೆದಾರರು
ನವದೆಹಲಿ : ಮದ್ಯಪ್ರಾಚ್ಯ ಯುದ್ಧದ ಅನಿಶ್ಚಿತತೆ ಮುಂದುವರಿದಿದ್ದು, ಇದರಿಂದ ಕಂಗಾಲಾಗಿರುವ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂಪಡೆದು ಮಾರಾಟ ಮಾಡುತ್ತಿರುವುದರಿಂದ ಜಾಗತಿಕ ‘ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಸಾಗಿದೆ. ಭಾನುವಾರ ರಜೆ ಮುಗಿಸಿ, ಸೋಮವಾರ ಓಪನ್​ ಆದ ಷೇರು ಮಾರುಕಟ್ಟೆ ( Share Market ) ಆರಂಭದಲ್ಲೇ ತೀವ್ರ ನಷ್ಟ ಅನುಭವಿಸಿದೆ. ಭಾರತೀಯ ಮಾರುಕಟ್ಟೆಯ ಸೆನ್ಸೆಕ್ಸ್​ ಮತ್ತು ನಿಫ್ಟಿ ತೀವ್ರ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.
ಇಂದು ಬೆಳಗ್ಗೆ 9.30ರ ಸುಮಾರಿಗೆ ಬಿಎಸ್​ಇ ಸೆನ್ಸೆಕ್ಸ್​ ಸುಮಾರು 1,066.36 ಪಾಯಿಂಟ್‌ಗಳಷ್ಟು ಕುಸಿದು 72,516.86 ಕ್ಕೆ ತಲುಪಿದರೆ, ನಿಫ್ಟಿ 50 ಕೂಡ 316.30 ಪಾಯಿಂಟ್‌ಗಳಷ್ಟು ಕುಸಿದು 22,503.30 ಕ್ಕೆ ತಲುಪಿತು. ಸದ್ಯ ಮಾರುಕಟ್ಟೆಯ ಎಲ್ಲಾ ಸೆಕ್ಟರ್‌ಗಳೂ ಕುಸಿತಕಂಡಿದೆ.
ಮಾರುಕಟ್ಟೆಯ ವಹಿವಾಟು ಆರಂಭವಾಗುತ್ತಿದ್ದಂತೆಯೇ ಭಾರೀ ಕುಸಿತ ಕಂಡುಬಂದಿದ್ದು, ಬಿಎಸ್​ಇ (BSE) ನಲ್ಲಿ ವಹಿವಾಟಾದ ಒಟ್ಟು 4,501 ಷೇರುಗಳಲ್ಲಿ ಕೇವಲ 761 ಷೇರುಗಳು ಏರಿಕೆ ಕಂಡಿದ್ದರೆ, ಬರೋಬ್ಬರಿ 3,615 ಷೇರುಗಳು ಇಳಿಕೆಯನ್ನು ಅನುಭವಿಸಿವೆ. ಸುಮಾರು 125 ಷೇರುಗಳಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಇನ್ನು ಎನ್​ಎಸ್​ಇ (NSE) ನಲ್ಲೂ ಇದೇ ರೀತಿಯ ಟ್ರೆಂಡ್ ಮುಂದುವರಿದಿದ್ದು, ಬೆಳಗ್ಗೆಯ ವೇಳೆಗೆ 503 ಷೇರುಗಳು ಲಾಭದಲ್ಲಿದ್ದರೆ, ಸುಮಾರು 2,813 ಷೇರುಗಳು ನಷ್ಟದಲ್ಲಿ ವಹಿವಾಟು ನಡೆಸುತ್ತಿವೆ.
ಆರಂಭಿಕ ವಹಿವಾಟಿನ ನಂತರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯ ಷೇರುಗಳು ಶೇ. 1.14 ರಷ್ಟು ಏರಿಕೆಯಾಗಿ ಮುನ್ನಡೆ ಸಾಧಿಸಿತು. ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಷೇರುಗಳು ಶೇ. 0.46 ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಷೇರುಗಳು ಶೇ. 0.07 ರಷ್ಟು ಏರಿಕೆ ಕಂಡವು.
ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಷೇರುಗಳು ಶೇ.4.02 ರಷ್ಟು ತೀವ್ರ ಕುಸಿತ ಕಂಡಿತು. ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಶೇ.3.68, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ ಶೇ.2.17, ಟ್ರೆಂಟ್ ಲಿಮಿಟೆಡ್ ಶೇ.2.12, ಮತ್ತು ಬಜಾಜ್ ಫಿನ್‌ಸರ್ವ್ ಲಿಮಿಟೆಡ್ ಷೇರುಗಳು ಶೇ.2.11 ರಷ್ಟು ಕುಸಿತ ಕಂಡವು.
ಇನ್ನು ಮಾರುಕಟ್ಟೆಯ ಚಂಚಲತೆ ಹೆಚ್ಚಾಗಿದ್ದು, ಇಂಡಿಯಾ VIX 5.55% ಏರಿಕೆಯಾದರೆ, ನಿಫ್ಟಿ ಮಿಡ್‌ಕ್ಯಾಪ್ 100 1.11% ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 1.02% ರಷ್ಟು ಕುಸಿತಕಂಡವು. ಇದರೊಂದಿಗೆ ವಿಶಾಲ ಮಾರುಕಟ್ಟೆಗಳ ವಹಿವಾಟುಗಳು ತುಂಬಾ ದುರ್ಬಲವಾಗಿದ್ದವು.

4.34 ಲಕ್ಷ ಕೋಟಿ ರೂಪಾಯಿ ನಷ್ಟ

ಅಂದಹಾಗೆ, ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 4.34 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬಿಎಸ್‌ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ಕಳೆದ ವಹಿವಾಟಿನ ಅಂತ್ಯದಲ್ಲಿದ್ದ ಮೊತ್ತಕ್ಕಿಂತ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ಈ ಬೃಹತ್ ನಷ್ಟ ಉಂಟಾಗಿದೆ.

ಮಾರುಕಟ್ಟೆ ಕುಸಿತಕ್ಕೆ ಕಾರಣವೇನು?

ಷೇರು ಮಾರುಕಟ್ಟೆ ಕುಸಿಯಲು ಪ್ರಮುಖ ಕಾರಣ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಉಲ್ಬಣಿಸಿರುವುದು ಮತ್ತು ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 120 ಡಾಲರ್ ಆಸುಪಾಸು ತಲುಪಿರುವುದು. ಈ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಅಪಾಯ ಎದುರಿಸಲು ಸಿದ್ಧರಿಲ್ಲದೆ ದೊಡ್ಡ ಮಟ್ಟದಲ್ಲಿ ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಹಣ ಹಿಂಪಡೆಯುತ್ತಿರುವುದು ಮತ್ತು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿರುವುದು ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಹೇರಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net