ದಾಖಲೆ ಮಟ್ಟದ ಸೂಚ್ಯಂಕ ಖಾಲಿ ಕೈಯಲ್ಲಿ ಹೂಡಿಕೆದಾರ! Stock market

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಷೇರುಪೇಟೆ:

ಒಂದು ಕಾಲದಲ್ಲಿ ‘ಹಣ ಸುರಿದರೆ ಸಾಕು, ಲಾಭ ಖಚಿತ’ ಎನ್ನುವ ವಾತಾವರಣವಿದ್ದ ಭಾರತೀಯ ಷೇರು ಮಾರುಕಟ್ಟೆ ಕಳೆದ ಎರಡು ವರ್ಷಗಳಿಂದ ಹೂಡಿಕೆದಾರರಿಗೆ ನಿರೀಕ್ಷಿತ ಆದಾಯ ನೀಡುತ್ತಿಲ್ಲ. ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟ ತಲುಪಿದರೂ ಲಕ್ಷಾಂತರ ಹೂಡಿಕೆದಾರರ ಖಾತೆಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇದಕ್ಕೆ ಕಾರಣವೇನು? ಭೌಗೋಳಿಕ ರಾಜಕೀಯ, ತೈಲ ಬೆಲೆ, ಬಡ್ಡಿ ದರ, ಇಂಧನ ಭದ್ರತೆಗೂ ಇದಕ್ಕೂ ಸಂಬಂಧವಿದೆಯೇ? ಮುಂದಿನ ದಿನಗಳಲ್ಲಾದರೂ ಷೇರು ಮಾರುಕಟ್ಟೆ ವೇಗ ಪಡೆಯುತ್ತದೆಯೇ? ಈ ಕುರಿತ ಮಾಹಿತಿ ಇಲ್ಲಿದೆ.

ಭಾರತದ ಷೇರು ಮಾರುಕಟ್ಟೆ ಕಳೆದ ಎರಡು ದಶಕಗಳಲ್ಲಿ ಅನೇಕ ರೋಮಾಂಚಕ ಏರಿಳಿತಗಳನ್ನು ಕಂಡಿದೆ. 2008ರ ಜಾಗತಿಕ ಆರ್ಥಿಕ ಕುಸಿತ, ಕೋವಿಡ್​ನ ಅನಿರೀಕ್ಷಿತ ಹೊಡೆತ, ಹಣದುಬ್ಬರದ ಭೀತಿ, ಬಡ್ಡಿದರ ಏರಿಕೆ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ರಾಜಕೀಯ ಸಂಘರ್ಷಗಳು- ಇವೆಲ್ಲವುಗಳ ನಡುವೆಯೂ ಭಾರತೀಯ ಮಾರುಕಟ್ಟೆ ತನ್ನ ಅದ್ಭುತ ಸ್ಥೈರ್ಯವನ್ನು ಹಲವು ಬಾರಿ ಸಾಬೀತುಪಡಿಸಿದೆ. ಪ್ರತಿಯೊಂದು ಕುಸಿತದ ನಂತರವೂ ಮಾರುಕಟ್ಟೆ ಮತ್ತಷ್ಟು ಬಲವಾಗಿ ಚಿಮ್ಮಿ ಎದ್ದು ಬಂದಿದೆ. ಆದರೆ, ಕಳೆದ ಸುಮಾರು ಎರಡು ವರ್ಷಗಳ ಪರಿಸ್ಥಿತಿ ಮಾತ್ರ ಹೂಡಿಕೆದಾರರಿಗೆ ತೀರಾ ವಿಭಿನ್ನ ಹಾಗೂ ಹೊಸ ಅನುಭವವನ್ನು ನೀಡುತ್ತಿದೆ.
ಸೂಚ್ಯಂಕಗಳು (ಇಂಡೆಕ್ಸ್) ಕೆಲವೊಮ್ಮೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದರೂ, ಬಹುತೇಕ ಸಾಮಾನ್ಯ ಹೂಡಿಕೆದಾರರ ಪೋರ್ಟ್ ಪೋ

ಫೋಲಿಯೋಗಳಲ್ಲಿ ಆ ‘ಸಂಭ್ರಮ’ ಕಾಣಿಸುತ್ತಿಲ್ಲ. ವಿಶೇಷವಾಗಿ ಮಧ್ಯಮ (ಮಿಡ್​ಕ್ಯಾಪ್) ಮತ್ತು ಸಣ್ಣ ಕಂಪನಿಗಳ (ಸ್ಮಾಲ್​ಕ್ಯಾಪ್) ಷೇರುಗಳಲ್ಲಿ ಹಣ ಹೂಡಿದವರು ತೀವ್ರ ನಿರಾಸೆ ಅನುಭವಿಸಿದ್ದಾರೆ. ಭಾರತೀಯ ಮಾರುಕಟ್ಟೆಯ ವೇಗ ಏಕಾಏಕಿ ಏಕೆ ಕುಂಠಿತವಾಯಿತು? ದೇಶದ ಆರ್ಥಿಕತೆಯ ಬುನಾದಿಯೇ ದುರ್ಬಲವಾಗಿದೆಯೇ? ಅಥವಾ ಜಾಗತಿಕ ಪರಿಸ್ಥಿತಿಗಳು ಭಾರತದ ಆರ್ಥಿಕ ರಥಕ್ಕೆ ತಾತ್ಕಾಲಿಕ ತಡೆಗೋಡೆಯಾಗಿ ನಿಂತಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಜಾಗತಿಕ ಮತ್ತು ದೇಶೀಯ ಚಿತ್ರಣವನ್ನು ಆಳವಾಗಿ ಅವಲೋಕಿಸುವುದು ಅಗತ್ಯ.

ಹಣದ ಹರಿವಿನ ಆಟ

ಜಗತ್ತಿನ ಯಾವುದೋ ಭಾಗದಲ್ಲಿ ನಡೆಯುತ್ತಿರುವ ಘಟನೆಗಳು, ಆರ್ಥಿಕ-ಭೌಗೋಳಿಕ ಪೈಪೋಟಿ ನಮ್ಮ ಷೇರು ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುತ್ತಿವೆ. ವ್ಯಾಪಾರ, ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ಮೇಲುಗೈ ಸಾಧಿಸಲು ವಿಶ್ವದ ಎರಡು ಬೃಹತ್ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಜಟಾಪಟಿ, ರಷ್ಯಾ-ಯೂಕ್ರೇನ್ ನಡುವಿನ ಸುದೀರ್ಘ ಯುದ್ಧ, ಮಧ್ಯಪ್ರಾಚ್ಯದ ಸಂಘರ್ಷ, ಜಾಗತಿಕ ಪೂರೈಕೆ ಜಾಲದಲ್ಲಿ ಉಂಟಾಗುತ್ತಿರುವ ವ್ಯತ್ಯಯ, ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆಗಳ ತೀವ್ರ ಏರಿಳಿತ ಇವೆಲ್ಲವೂ ನೇರವಾಗಿ ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.

ಅನಿಶ್ಚಿತತೆ ಹೆಚ್ಚಾದಾಗಲೆಲ್ಲ ಜಾಗತಿಕ ಹೂಡಿಕೆದಾರರು ಅಪಾಯಕಾರಿ ಎಂದು ಪರಿಗಣಿಸಲಾಗುವ ಉದಯೋನ್ಮುಖ (ಎಮರ್ಜಿಂಗ್) ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂಪಡೆದು, ಸುರಕ್ಷಿತ ತಾಣಗಳಾದ ಅಮೆರಿಕನ್ ಡಾಲರ್ ಅಥವಾ ಚಿನ್ನದಲ್ಲಿ ಹೂಡುವುದು ಸಾಮಾನ್ಯವಾಗಿಬಿಟ್ಟಿದೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು (ಫಂಡಮೆಂಟಲ್ಸ್) ಬಲವಾಗಿದ್ದರೂ, ವಿದೇಶಿ ಹೂಡಿಕೆದಾರರ ಚಲನವಲನ ಕೂಡ ಮಾರುಕಟ್ಟೆಯ ಏರಿಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೊಡ್ಡ ಪ್ರಮಾಣದ ವಿದೇಶಿ ಹಣ ಮಾರುಕಟ್ಟೆಯಿಂದ ಹೊರಹೋದಾಗ ಷೇರುಗಳ ಬೆಲೆ ಕುಸಿಯುತ್ತದೆ.

ಸಣ್ಣ ಹೂಡಿಕೆದಾರರ ವಾಸ್ತವ

ಅನೇಕ ಸಾಧಾರಣ ಹೂಡಿಕೆದಾರರು ಪದೇಪದೆ ಕೇಳುವ ಪ್ರಶ್ನೆಯೊಂದಿದೆ. ‘ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆ ಮಟ್ಟದಲ್ಲಿವೆ ಅಂತ ಸುದ್ದಿಗಳು ಬರುತ್ತವೆ. ಆದರೂ ನನ್ನ ಪೋರ್ಟ್​ಫೋಲಿಯೋದಲ್ಲಿ ಯಾಕೆ ಲಾಭ ಕಾಣಿಸುತ್ತಿಲ್ಲ?!’ ಇದಕ್ಕೆ ಉತ್ತರ ನಮ್ಮ ಸೂಚ್ಯಂಕಗಳ ಸಂರಚನೆಯಲ್ಲಿದೆ. ಬ್ಯಾಂಕಿಂಗ್, ಐಟಿ, ರಿಲಯನ್ಸ್​ನಂತಹ ಬೃಹತ್ ಷೇರುಗಳು ಏರಿದರೆ ಸೂಚ್ಯಂಕ ಮೇಲೇರುತ್ತದೆ. ಆಗ ಸೂಚ್ಯಂಕ ಹಸಿರಾಗಿದ್ದರೂ ಮಾರುಕಟ್ಟೆಯ ಶೇ. 80ರಷ್ಟು ಷೇರುಗಳು ಕೆಂಪು ಬಣ್ಣದಲ್ಲಿರಬಹುದು. ಸೂಚ್ಯಂಕದಲ್ಲಿ ಮಿಡ್ ಮತ್ತು ಸ್ಮಾಲ್​ಕ್ಯಾಪ್​ಗಳ ತೂಕ ಕಡಿಮೆ ಇರುತ್ತದೆ. ಸಾಮಾನ್ಯ ಹೂಡಿಕೆದಾರರು ಹೆಚ್ಚಾಗಿ ಇವುಗಳಲ್ಲೇ ಹಣ ಹೂಡಿ ನಷ್ಟ ಅನುಭವಿಸುತ್ತಾರೆ.


ಕೋವಿಡ್ ನಂತರದ ಅವಧಿಯಲ್ಲಿ ಸ್ಮಾಲ್ ಮತ್ತು ಮಿಡ್​ಕ್ಯಾಪ್ ಷೇರುಗಳಲ್ಲಿ ಭಾರಿ ಉತ್ಸಾಹ ಕಂಡುಬಂದಿತ್ತು. ನಿಯಮಾವಳಿಗಳ ಹಂಗಿಲ್ಲದೆ ಅನೇಕ ಕಂಪನಿಗಳ ಷೇರುಗಳು ಕೆಲವೇ ತಿಂಗಳಲ್ಲಿ ಹಲವು ಪಟ್ಟು ಏರಿದವು. ಈ ಭಾರಿ ಏರಿಕೆಯಿಂದ ಪ್ರೇರಿತರಾಗಿ ಲಕ್ಷಾಂತರ ಹೊಸ, ಯುವ ಹೂಡಿಕೆದಾರರು ಮಾರುಕಟ್ಟೆಗೆ ಧುಮುಕಿದರು. ಸಾಮಾಜಿಕ ಜಾಲತಾಣಗಳಲ್ಲಿ ‘ಒಂದೇ ದಿನದಲ್ಲಿ ಕೋಟ್ಯಧಿಪತಿ ಆಗುವುದು ಹೇಗೆ’ ಎಂಬ ರೋಚಕ ಕಥೆಗಳು ಹರಿದಾಡಿದವು. ಆದರೆ, ಷೇರು ಮಾರುಕಟ್ಟೆ ಎಂದಿಗೂ ಒಂದೇ ದಿಕ್ಕಿನಲ್ಲಿ ಸಾಗುವುದಿಲ್ಲ. ಕಂಪನಿಯ ಮೌಲ್ಯವನ್ನು ಮೀರಿ ಅತಿಯಾಗಿ ಏರಿದ ಷೇರುಗಳು ಒಂದಲ್ಲ ಒಂದು ದಿನ ತಿದ್ದುಪಡಿ (ಕರೆಕ್ಷನ್) ಕಾಣುವುದು ಸಹಜ. ಕಳೆದ ಎರಡು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ನಡೆದಿದ್ದು ಇದೇ.

ಹೊಸ ರೀತಿಯ ಸಮರ

ಇಂದು ಪ್ರಪಂಚದಲ್ಲಿ ಶಸ್ತ್ರಾಸ್ತ್ರಗಳ ಯುದ್ಧಕ್ಕಿಂತ ಹೆಚ್ಚಾಗಿ ಅತ್ಯಂತ ಭೀಕರವಾದ ಆರ್ಥಿಕ ಮತ್ತು ತಂತ್ರಜ್ಞಾನ ಸಮರ ನಡೆಯುತ್ತಿದೆ. ಸೆಮಿಕಂಡಕ್ಟರ್ ಚಿಪ್​ಗಳ ಉತ್ಪಾದನೆಯ ನಿಯಂತ್ರಣ ಯಾರ ಕೈಯಲ್ಲಿರಬೇಕು? ಕೃತಕ ಬುದ್ಧಿಮತ್ತೆಯ (ಎಐ) ನಾಯಕತ್ವ ಯಾವ ದೇಶದ್ದಾಗಿರಬೇಕು?ಅಪರೂಪದ ಖನಿಜಗಳ (ಕ್ರಿಟಿಕಲ್ ಮಿನರಲ್ಸ್) ಮೇಲೆ ಯಾರ ಹಿಡಿತವಿರಬೇಕು? ಈ ಪ್ರಶ್ನೆಗಳೇ ಮುಂದಿನ ದಶಕದ ಜಾಗತಿಕ ಆರ್ಥಿಕ ಶಕ್ತಿಯನ್ನು ನಿರ್ಧರಿಸಲಿವೆ. ಬಂಡವಾಳ ಮಾರುಕಟ್ಟೆಗಳ ಮೇಲೆ ಈ ತಾಂತ್ರಿಕ ಪೈಪೋಟಿ ತೀವ್ರ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟಿನ ನಡುವೆಯೇ ಭಾರತಕ್ಕೆ ಬೃಹತ್ ಅವಕಾಶದ ಬಾಗಿಲು ತೆರೆದಿದೆ.

ವಿಶ್ವದ ಪ್ರಮುಖ ಉದ್ಯಮಗಳು ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಪರ್ಯಾಯ ಉತ್ಪಾದನಾ ಕೇಂದ್ರಗಳನ್ನು ಹುಡುಕುತ್ತಿದ್ದು (ಚೀನಾ+1 ನೀತಿ), ಭಾರತ ಮೊದಲ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಕೇಂದ್ರ ಸರ್ಕಾರ ವಿವಿಧ ವಲಯಗಳಿಗೆ ನೀಡುತ್ತಿರುವ ‘ಉತ್ಪಾದನೆ ಆಧಾರಿತ ಪೋ›ತ್ಸಾಹಕ’ (ಪಿಎಲ್​ಐ) ಯೋಜನೆಗಳು ದೇಶೀಯ ಉತ್ಪಾದನೆಗೆ ಮರುಜೀವ ನೀಡುತ್ತಿವೆ. ಯುಪಿಐ, ಡಿಜಿಟಲ್ ಪೇಮೆಂಟ್ಸ್, ಆಧಾರ್ ಆಧಾರಿತ ತಂತ್ರಜ್ಞಾನದ ಮೂಲಕ ಭಾರತ ಈಗ ಪ್ರಪಂಚಕ್ಕೇ ಮಾದರಿಯಾಗುತ್ತಿದೆ. ವಿಶ್ವದ ಪ್ರಮುಖ ದೇಶಗಳು ವೃದ್ಧಾಪ್ಯದತ್ತ ಸಾಗುತ್ತಿದ್ದರೆ, ಭಾರತ ವಿಶ್ವದ ಅತ್ಯಂತ ಯುವ ಆರ್ಥಿಕತೆಯಾಗಿ ಬೆಳೆಯುತ್ತಿದೆ (ಡೆಮಾಗ್ರಫಿಕ್ ಡಿವಿಡೆಂಡ್).

ಬದಲಾದ ಗೇಮ್ ಚೇಂಜರ್

ಹಿಂದಿನ ದಶಕಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣ ಹಿಂಪಡೆದ ತಕ್ಷಣವೇ ನಮ್ಮ ಷೇರುಪೇಟೆ ನೆಲಕಚ್ಚುತ್ತಿತ್ತು. ಆದರೆ, ಇಂದು ಚಿತ್ರಣ ಬದಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ- ದೇಶೀಯ ರಿಟೇಲ್ ಇನ್​ವೆಸ್ಟರ್​ಗಳ ಶಕ್ತಿ. ಸಿಸ್ಟೆಮ್ಯಾಟಿಕ್ ಇನ್​ವೆಸ್ಟ್​ಮೆಂಟ್ ಪ್ಲ್ಯಾನ್​ಗಳ (ಎಸ್​ಐಪಿ) ಮೂಲಕ ಸಾಮಾನ್ಯ ನಾಗರಿಕರು ಪ್ರತಿ ತಿಂಗಳು ಹತ್ತಾರು ಸಾವಿರ ಕೋಟಿ ರೂ.ಗಳನ್ನು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಿ ಹೊರಹೋದಾಗ, ನಮ್ಮ ದೇಶೀಯ ಸಂಸ್ಥೆಗಳು ಮತ್ತು ಎಸ್​ಐಪಿ ಹಣವು ಆ ಷೇರುಗಳನ್ನು ಖರೀದಿಸಿ ಮಾರುಕಟ್ಟೆಯನ್ನು ಕುಸಿತದಿಂದ ರಕ್ಷಿಸುತ್ತಿರುವುದು ವಿಶೇಷ.

ಇದು ಭಾರತೀಯ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡ ಧನಾತ್ಮಕ ಸುಧಾರಣೆ. ಆದರೆ, ಇದರೊಂದಿಗೆ ಹೂಡಿಕೆದಾರರ ಜವಾಬ್ದಾರಿಯೂ ಹೆಚ್ಚಿದೆ. ಷೇರು ಮಾರುಕಟ್ಟೆ ‘ಇನ್​ಸ್ಟಂಟ್ ಮ್ಯಾಗಿ’ ತಯಾರಿಸುವಂತೆ ಕ್ಷಿಪ್ರವಾಗಿ ಶ್ರೀಮಂತರಾಗುವ ಮಾರ್ಗವಲ್ಲ. ಸಾಮಾಜಿಕ ಜಾಲತಾಣಗಳ ಸುಳ್ಳು ಸಲಹೆಗಳು, ಟಿಪ್ಸ್ ಅಥವಾ ವದಂತಿಗಳ ಆಧಾರದ ಮೇಲೆ ಹೂಡಿಕೆ ಮಾಡುವ ಪ್ರವೃತ್ತಿ ಸರಿಯಲ್ಲ. ಕಂಪನಿಗಳ ನೈಜ ಮೌಲ್ಯಗಳನ್ನು ಪರಿಶೀಲಿಸಿ, ತಾಳ್ಮೆಯಿಂದ ದೀರ್ಘಾವಧಿಗೆ ಹೂಡಿಕೆ ಮಾಡುವುದೇ ಸರಿಯಾದ ಮಾರ್ಗ.


ಇಂಧನ ಬಿಕ್ಕಟ್ಟೇ ದೊಡ್ಡ ಸವಾಲು

ಮಾರುಕಟ್ಟೆಯ ಈ ಮಂದಗತಿಯ ನಡುವೆ ಎದುರಾಗಿರುವ ಮತ್ತೊಂದು ಬೃಹತ್ ಸವಾಲು- ಇಂಧನ ಭದ್ರತೆ. ಭಾರತ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾದರೂ ಈ ಬೃಹತ್ ಆರ್ಥಿಕ ಯಂತ್ರವನ್ನು ನಡೆಸಲು ಬೇಕಾದ ಕಚ್ಚಾ ತೈಲದ ಸುಮಾರು ಶೇ. 85ರಷ್ಟು ಭಾಗವನ್ನು ನಾವು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದೇವೆ. ಜಾಗತಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ತೈಲ ಬೆಲೆ ಏರಿದಾಗ, ಅದರ ಪ್ರಭಾವ ಕೇವಲ ಪೆಟ್ರೋಲ್-ಡೀಸೆಲ್ ದರಕ್ಕೆ ಸೀಮಿತವಾಗುವುದಿಲ್ಲ. ಸಾರಿಗೆ ವೆಚ್ಚ ಹೆಚ್ಚಳ, ಕೃಷಿ ಮತ್ತು ಕೈಗಾರಿಕಾ ವೆಚ್ಚ ಏರಿಕೆ, ಹಣದುಬ್ಬರ ಮುಂತಾದ ಸಮಸ್ಯೆಗಳೂ ಉದ್ಭವಿಸುತ್ತವೆ. ಹಣದುಬ್ಬರವು ನಿಯಂತ್ರಣ ತಪ್ಪಿದಾಗ ಆರ್​ಬಿಐ ಬಡ್ಡಿದರ ಇಳಿಸಲು ಸಾಧ್ಯವಾಗುವುದಿಲ್ಲ. ಬಡ್ಡಿದರ ಹೆಚ್ಚಿದ್ದರೆ ಉದ್ಯಮಗಳ ಸಾಲದ ವೆಚ್ಚ ಏರುತ್ತದೆ. ಇದರಿಂದ ಕಂಪನಿಗಳ ಲಾಭದ ಪ್ರಮಾಣ ಕಡಿಮೆಯಾಗುತ್ತದೆ. ಆಗ ಹೂಡಿಕೆದಾರರೇ ಆ ಕಂಪನಿಗಳ ಷೇರುಗಳ ಬೆಲೆಯನ್ನು ಕೆಳಕ್ಕೆ ತಳ್ಳುತ್ತಾರೆ!



ಹಾಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಸೌರಶಕ್ತಿ, ಪವನಶಕ್ತಿ, ಹಸಿರು ಹೈಡ್ರೋಜನ್, ಜೈವಿಕ ಇಂಧನ ಮತ್ತು ಅಣುಶಕ್ತಿಗೆ

ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಇದು ಕೇವಲ ಪರಿಸರ ಸಂರಕ್ಷಣೆಗಾಗಿ ಅಲ್ಲ, ದೇಶದ ಆರ್ಥಿಕ ಭದ್ರತೆಗೂ ಇದರಿಂದ ಸಹಾಯವಾಗುತ್ತದೆ. ಆಮದು ತೈಲದ ಮೇಲಿನ ಅವಲಂಬನೆ ಕಡಿಮೆಯಾದಷ್ಟೂ ಜಾಗತಿಕ ಬಿಕ್ಕಟ್ಟುಗಳಿಂದ ಭಾರತೀಯ ಮಾರುಕಟ್ಟೆಯ ಮೇಲಿನ ಆಘಾತಗಳು ಕಡಿಮೆಯಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net